ನ್ಯೂಜಿಲೆಂಡ್ ವನಿತೆಯರ ಟಿ-20 ಚಾಂಪಿಯನ್: ದ.ಆಫ್ರಿಕಾಗೆ 32 ರನ್ ಸೋಲು
ನ್ಯೂಜಿಲೆಂಡ್ ತಂಡ 32 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡ ವಿರುದ್ಧ ಸುಲಭ ಜಯ ಸಾಧಿಸಿ ವನಿತೆಯರ ಟಿ-20 ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಓಮನ್ ನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಿ-20 ವಿಶ್ವಕಪ್ ಗೆ ಮುನ್ನ ಸತತ 10 ಪಂದ್ಯಗಳಲ್ಲಿ ಸೋಲುಂಡಿದ್ದ ನ್ಯೂಜಿಲೆಂಡ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದು ಭರ್ಜರಿ ಆರಂಭ ಪಡೆದಿದ್ದೂ ಅಲ್ಲದೇ ಸಂಘಟಿತ ಪ್ರದರ್ಶನದಿಂದ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೊಲ್ವಾರ್ಡ್ 27 ಎಸೆತಗಳಲ್ಲಿ 5 ಬೌಂಡರಿ ಸೇರಿದ 33 ರನ್ ಗಳಿಸಿ ವೈಯಕ್ತಿಕ ಗರಿಷ್ಠ ರನ್ ಬಾರಿಸಿದರು. ನಂತರ ಬಂದ ಯಾವುದೇ ಆಟಗಾರ್ತಿಯರು ನೆಲಕಚ್ಚಿ ಆಡಲು ವಿಫಲರಾಗಿದ್ದರಿಂದ ತಂಡ ಸೋಲಿನ ಹಾದಿ ಹಿಡಿಯಿತು.
ನ್ಯೂಜಿಲೆಂಡ್ ಪರ ರೋಸ್ ಮ್ಯಾರಿ ಮೈರ್ ಮತ್ತು ಅಮೆಲಾ ಕೇರ್ ತಲಾ 3 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟಗಾರ್ತಿಯರನ್ನು ಕಟ್ಟಿ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಅಮೆಲಾ ಕೆರ್ 38 ಎಸೆತಗಳಲ್ಲಿ 4 ಬೌಂಡರಿ ಸೇರಿದ 43 ರನ್ ಬಾರಿಸಿದರೆ, ಬ್ರೂಕ್ ಹಾಲಿಡೇ 28 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 38 ರನ್ ಸಿಡಿಸಿದರೆ, ಸೂಜಿ ಬ್ಯಾಟ್ಸ್ 31 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 32 ರನ್ ಗಳಿಸಿದರು.