ಪರಿಸರಾಧಿಕಾರಿ ಶಿವಕುಮಾರ್ ವಿರುದ್ಧ ಗಂಭೀರ ಆರೋಪ-ಲೋಕಾಯುಕ್ತಕ್ಕೆ ದೂರು..
ನೀವೇ ಹೇಳಿ, ಶಿವಕುಮಾರ್ ನಿಮ್ಮ ಕಚೇರಿಯಲ್ಲಿ ಪಾದರಸದಂತೆ ಅಡ್ಡಾಡಿಕೊಂಡಿರುವ ಆ ರಮ್ಯ ಯಾರು?
ಬೆಂಗಳೂರು: ಬರೀ ಭ್ರಷ್ಟಾಚಾರ-ಹಗರಣ-ಅಕ್ರಮಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದೀಗ ಲೈಂಗಿಕ ಕಿರುಕುಳ-ಶೋಷಣೆ-ಅಕ್ರಮ-ಅನೈತಿಕ ಸಂಬಂಧಗಳ ಕಾರಣಕ್ಕೂ ಸದ್ದು ಮಾಡಲಾರಂಭಿಸಿದೆ.ಇದಕ್ಕೆ ಕಾರಣ ಪರಿಸರಾಧಿಕಾರಿಯೊಬ್ಬರ ವಿರುದ್ದ ಕೇಳಿಬಂದಿರುವ ದೂರು ಹಾಗೂ ಅದಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಹೊರಡಿಸಿರುವ ನೊಟೀಸ್.ಇದರ ಎಕ್ಸ್ ಕ್ಲ್ಯೂಸಿವ್ EXCLUSIVE ಪ್ರತಿಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿವೆ.
ಪರಿಸರಕ್ಕೆ ಮಾರಕವಾಗಿರುವ ಮಾಲಿನ್ಯಕ್ಕೆ ಬ್ರೇಕ್ ಹಾಕುವ ಕೆಲಸ ಮಂಡಳಿಯಲ್ಲಿ ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ,ಆದ್ರೆ ಮಂಡಳಿಯ ಮಾನವನ್ನು ಮೂರಾಮಟ್ಟೆ ಹರಾಜಾಕುವ ಕೆಲಸಗಳು ಮಾತ್ರ ವ್ಯವಸ್ಥಿತವಾಗಿ ನಡೆಯುತ್ತಲೇ ಇವೆ.ಕೆಲಸ ಮಾಡಬೇಕಾದ ಸ್ಥಳದಲ್ಲಿ “ಕಚ್ಚೆ” ಸಡಿಲಿಸುವ ಅಧಿಕಾರಿಗಳೂ ಇದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ.ಇದನ್ನು ಪು್ಷ್ಟೀಕರಿಸುವಂತೆ, ಮಂಡಳಿಯ ವಲಯ ಕಚೇರಿಯೊಂದರಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ-ಅನೈತಿಕ ಚಟುವಟಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ದೂರೊಂದು ಸಲ್ಲಿಕೆಯಾಗಿತ್ತು.ಅದರ ಹಿನ್ನಲೆಯಲ್ಲಿ ಕಾರಣ ಕೇಳಿ ಹೊರಡಿಸಲಾಗಿದೆ.
ಅಂದ್ಹಾಗೆ ಇಂತದ್ದೊಂದು ದೂರು ಕೇಳಿಬಂದಿರುವುದು ರಾಜರಾಜೇಶ್ವರಿ ನಗರ ವಲಯ ಪರಿಸರಾಧಿಕಾರಿ ಶಿವಕುಮಾರ್ ಕೆ.ವಿ ಹಾಗೂ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ(ದ್ದಾ)ರೆನ್ನಲಾಗಿರುವ ರಮ್ಯ ಎನ್ನುವವರ ವಿರುದ್ಧ.ಅದು ಅಂತಿಂಥ ಆರೋಪವಾಗಿದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ.ಇವರಿಬ್ಬರ ಮೇಲೆ ಬಂದಿರುವುದು ಕಚೇರಿ ವಾತಾವರಣವನ್ನೇ ಹಾಳು ಮಾಡಿರುವಂಥ ಗಂಭೀರ ಆಪಾದನೆ.ಶಿವಕುಮಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ರಮ್ಯ ಎಂಬಾಕೆ ಕಚೇರಿ ವಾತಾವರಣವನ್ನು ಅನೈತಿಕ-ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳು ತ್ತಿದ್ದಾರೆ.ಅದಕ್ಕೆ ಶಿವಕುಮಾರ್ ಕುಮ್ಮಕ್ಕು ನೀಡುತ್ತಿದ್ದಾರೆ.ತನ್ನ ಹಲವಾರು ಕೆಲಸಗಳಿಗೆ ಈಕೆಯನ್ನೇ ಬಳಸಿಕೊಳ್ಳುತ್ತಿದ್ದಾರೆನ್ನುವ ಗಂಭೀರ ಆಪಾದನೆ ಮಾಡಿ ಪತ್ರ ಬರೆದಿರುವುದು ಕುಂಬಳಗೋಡಿನ ನಿವಾಸಿ ಆನಂದ್ ಎನ್ನುವವರು.
ತಮ್ಮನ್ನು ಕುಂಬಳಗೋಡಿನ ನಿವಾಸಿ ಎಂದು ಪರಿಚಯಿಸಿಕೊಂಡಿರುವ ಆನಂದ್ ಅವರು ಶಿವಕುಮಾರ್ ಮತ್ತು ರಮ್ಯ ವಿರುದ್ಧ ಹಿಂದಿನ ಸದಸ್ಯ ಕಾರ್ಯದರ್ಶಿಯಾಗಿದ್ದ ಗಿರೀಶ್ ಅವರಿಗೆ 22/06/2023 ಮತ್ತು 10/08/2023 ರಂದು ಲೋಕಾಯುಕ್ತಕ್ಕೆ ಪ್ರತ್ಯೇಕ ದೂರನ್ನು ಸಲ್ಲಿಸಿದ್ದಾರೆ.ಈ ಬಗ್ಗೆ ಕ್ರಮವಾಗದ ಹಿನ್ನಲೆಯಲ್ಲಿ ಮತ್ತೆ ಜ್ಞಾಪಿಸಿದ ಮೇಲೆ ಈಗಿನ ಸದಸ್ಯ ಕಾರ್ಯದರ್ಶಿಗಳಾದ ಪ್ರಭಾಸ್ ಚಂದ್ರ ರೇ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಲ್ಲದೇ 02/12/2023 ರಂದು ಬೆಂಗಳೂರು ದಕ್ಷಿಣ ವಲಯದ ಹಿರಿಯ ಪರಿಸರಾಧಿಕಾರಿ ಅವರಿಗೆ ಪತ್ರ ಬರೆದು ಶಿವಕುಮಾರ್ ಕೆ.ವಿ ಮತ್ತು ರಮ್ಯ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ವಿವರಣೆ ಕೇಳಿ ಸಲ್ಲಿಸುವಂತೆ ಖಡಕ್ಕಾಗಿ ಸೂಚಿಸಿದ್ದಾರೆ.ಅದರ ಪ್ರತಿಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.
ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಬಸವೇಶ್ವರ ನಗರದ ನಿಸರ್ಗ ಭವನದಲ್ಲಿರುವ ಆರ್ ಆರ್ ನಗರ ವಲಯ ಕಚೇರಿ ಅಕ್ರಮ-ಅನೈತಿಕ ಚಟುವಟಿಕೆಗಳ ತಾಣವಾದಂತಿದೆ.ಅಲ್ಲಿರುವ ಪರಿಸರಾಧಿಕಾರಿ ಶಿವಕುಮಾರ್ ಅವರ ಕಚೇರಿಯಲ್ಲಿ ರಮ್ಯ ಎನ್ನುವವರು ಬೇನಾಮಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆ. ಅಂದ್ಹಾಗೆ ರಮ್ಯ ಎನ್ನುವವರ ಕಾರ್ಯವಿಧಾನವೇ ಅನುಮಾನ ಮೂಡಿಸುವಂತಿದೆಯಂತೆ.ಏಕೆಂದ್ರೆ ಆನಂದ್ ಆಪಾದಿಸುವಂತೆ ರಮ್ಯ ವಲಯ ಕಚೇರಿಯಲ್ಲಿ ಯಾವ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ..? ಅವರೇನು ಪರ್ಮನೆಂಟ್ ಸ್ಟಾಫಾ..? ಹೊರಗುತ್ತಿಗೆ ಮೇಲೆ ನಿಯೋಜನೆಗೊಂಡವರಾ..?ಅರೆ ಸರ್ಕಾರಿ ಅಥವಾ ಕಾಂಟ್ರ್ಯಾಕ್ಟ್ ಬೇಸಿಸ್ ನಲ್ಲಿ ಕೆಲಸ ಮಾಡುತ್ತಿದ್ದಾರಾ..? ಎನ್ನುವುದು ಕೂಡ ಸ್ಪಷ್ಟವಾಗಿಲ್ಲ.ಏಕಂದ್ರೆ ಅವರನ್ನು ಯಾವ ಮಾನದಂಡಗಳ ಆಧಾರದಲ್ಲಿ ನಿಯೋಜನೆ ಮಾಡಲಾಗಿದೆ ಎನ್ನುವುದರ ಉತ್ತರವೇ ಮಂಡಳಿಯಿಂದ ಸಿಕ್ಕಿಲ್ಲ..
ಹೀಗಿರುವಾಗ ಆಕೆಯನ್ನು ಮಂಡಳಿಯ ಸಿಬ್ಬಂದಿ ಎಂದು ಪರಿಗಣಿಸುವುದಾದ್ರೂ ಹೇಗೆ ಎಂದು ಆನಂದ್ ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ. ಹಾಗಾದ್ರೆ ರಮ್ಯಾ ಅವರನ್ನು ನಿಯೋಜಿಸಿಕೊಂಡಿದ್ದು ಯಾರು ಎನ್ನುವ ಪ್ರಶ್ನೆಗೆ ಶಿವಕುಮಾರ್ ಕಚೇರಿಯಲ್ಲಿ ಆಕೆ ಕೆಲಸ ಮಾಡುತ್ತಿರುವುದರಿಂದ ಖುದ್ದು ಶಿವಕುಮಾರ್ ಅವರೇ ಉತ್ತರಿಸಬೇಕಾಗುತ್ತದೆ. ತನ್ನನ್ನು ಕೈಗಾರಿಕೋದ್ಯಮಿ ಎಂದು ಬಿಂಬಿಸಿಕೊಂಡಿರುವ ಆನಂದ್, ಕೈಗಾರಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಶಿವಕುಮಾರ್ ಹಾಗೂ ರಮ್ಯ ಅವರು ಹೇಗೆ ವ್ಯವಸ್ಥಿತವಾಗಿ ಲಂಚಗುಳಿತನ-ಕರ್ತವ್ಯಲೋಪ ತೋರಿದರೆನ್ನುವುದನ್ನು ಸಾಕ್ಷ್ಯ ಸಮೇತ ಬಿಚ್ಚಿಟ್ಟಿದ್ದಾರೆ ಕೂಡ.
ಯಾರು ಈ ರಮ್ಯ: ಕುಂಬಳಗೋಡಿನ ಆನಂದ್ ಅವರು ಬರೆದಿರುವ ದೂರಿನಲ್ಲಿ ಉಲ್ಲೇಖವಾಗಿರುವ ಸಂಗತಿಗಳ ಪ್ರಕಾರ ರಮ್ಯ ಎಂಬಾಕೆ ಶಿವಕುಮಾರ್ ಕಚೇರಿಯ ಸಿಬ್ಬಂದಿಯಂತೆ.ಕೈಗಾರಿಕೋದ್ಯಮಿಗಳು ಸೇರಿದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವವರೊಂದಿಗೆ “ವ್ಯವಹಾರ” ಕುದುರಿಸಿ ಪರ್ಸಂಟೇಜ್ ಫಿಕ್ಸ್ ಮಾಡುವ ಕೆಲಸ ಮಾಡ್ತಿದ್ದಾರಂತೆ.ಕಚೇರಿ ಒಳಗೆ ಹೋದರೆ ಆಕೆಯೇ ಎಲ್ಲರಿಗೂ “ಆಹ್ವಾನ” ನೀಡುವುದಂತೆ.ಶಿವಕುಮಾರ್ ಅವರಿಗೆ ಪರ್ಸಂಟೇಜ್ ಹಣ ತಲುಪಿಸುತ್ತಿರುವುದು ಈಕೆಯೇ ಅಂತೆ.ಶಿವಕುಮಾರ್ ಈಕೆಯನ್ನೇ ಮುಂದೆ ಬಿಟ್ಟು ವ್ಯವಹಾರ ಮಾಡುವುದಂತೆ.ನಿಮ್ಮ ಕೆಲಸ ಮಾಡಿಕೊಡಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವುದೇ ನಾನು,ನನಗೆ ಇಷ್ಟ್ ಕೊಡ್ಬೇಕು..ನಮ್ಮ ಸಾಹೇಬರಿಗೆ ಇಷ್ಟ್ ಅಂಥ ಕೊಡ್ಬೇಕೆಂದು ಫೈನಲ್ ಸೆಟ್ಲ್ ಮೆಂಟ್ ಮಾಡೋದು ಕೂಡ ಈಕೆಯೇ ಅಂತೆ ಎಂದು ಉಲ್ಲೇಖಿಸಿದ್ದಾರೆ.
ವ್ಯವಹಾರಕ್ಕೆ ಕಚೇರಿಯನ್ನು ಬಳಸಿಕೊಳ್ಳದೆ ವಿಜಯನಗರ,ಮಾರುತಿಮಂದಿರ ಬಳಿ ಬನ್ನಿ ಎಂದು ಕರೆಯುತ್ತಾಳಂತೆ.ಪದೇ ಪದೇ ಕರೆ ಮಾಡಿ ತೊಂದರೆ ಕೊಡುತ್ತಾಳಂತೆ.ಶಿವಕುಮಾರ್ ಅವರ ಹತ್ತಿರವೇ ಮಾತನಾಡ್ತೇವೆ ಬಿಡಿ ಮೇಡಮ್ ಎಂದ್ರುನೂ ಅವರೇ ನನಗೆ ಎಲ್ಲಾ ಮಾಡೊಕ್ಕೆ ಹೇಳಿದ್ದಾರೆ ಎಂದು ಹೇಳುತ್ತಾಳಂತೆ.ಪಾಪ ಕೆಲಸ ಮಾಡಿಸಿಕೊಳ್ಳಬೇಕಾದವರು ಈಕೆ ಹೇಳಿದ್ದಲ್ಲಿಗೆ ಬಂದು ಆಕೆ ಕೇಳಿದಷ್ಟು ಹಣ ಕೊಟ್ಟು ಹೋಗುತ್ತಿದ್ದಾರಂತೆ.ಆಗೊಲ್ಲ ಎಂದವರಿಗೆ ಒಂದಲ್ಲಾ ಒಂದು ಕೊಕ್ಕೆ ಹಾಕಲಾಗ್ತಿದೆ ಎಂದು ಆನಂದ್ ದೂರಿನಲ್ಲಿ ವಿವರಿಸಿದ್ದಾರೆ.
ರಮ್ಯ ಎನ್ನುವ ಮಹಿಳೆಯ ಪೂರ್ವಾಪರ ವಿಚಾರಿಸುವ ಕೆಲಸವನ್ನೂ ಆನಂದ್ ಮಾಡಿದಾಗ ಮಂಡಳಿಯ ಕಚೇರಿಯಲ್ಲೇ ಆ ರೀತಿಯ ಯಾವುದೇ ಹೆಸರಿನ ಸಿಬ್ಬಂದಿನೇ ಇಲ್ಲ ಎನ್ನುವ ಉತ್ತರ ಸಿಕ್ಕಿದೆಯಂತೆ.ಹಾಗಾದ್ರೆ ರಮ್ಯ ಯಾರು..? ಶಿವಕುಮಾರ್ ಕಚೇರಿಯಲ್ಲಿ ಆಕೆಗೇನು ಕೆಲಸ..? ಸಿಬ್ಬಂದಿ ಅಲ್ಲದ ಮೇಲೆ ಆಕೆಗೆ ಕಚೇರಿಯಲ್ಲಿರೊಕ್ಕೆ ಅವಕಾಶ ಕೊಟ್ಟವರು ಯಾರು..? ಶಿವಕುಮಾರ್ ಯಾವ ಲೆಕ್ಕಾಚಾರದಲ್ಲಿ ಆಕೆಯನ್ನು ಇಟ್ಟುಕೊಂಡಿದ್ದಾರೆ..? ಆಕೆ ಮಂಡಳಿ ಸಿಬ್ಬಂದಿ ಅಲ್ಲದ ಮೇಲೆ ಆಕೆಗೆ ಕಚೇರಿಯಲ್ಲೇಕೆ ಅವಕಾಶ ನೀಡಲಾಗಿದೆ..? ಆಕೆ ಮೂಲಕ ಶಿವಕುಮಾರ್“ವ್ಯವಹಾರ” ಕುದುರಿಸುತ್ತಿರುವುದು ನಿಜನಾ..? ಎನ್ನುವ ಪ್ರಶ್ನೆಗಳನ್ನು ಆನಂದ್ ಮಾಡಿದ್ದಾರೆ.
ರಮ್ಯಾ ಎನ್ನುವ ಮಹಿಳೆ ಶಿವಕುಮಾರ್ ಕಚೇರಿಯಲ್ಲಿ ಅವರ ಸುತ್ತಮುತ್ತ “ನಕ್ಷತ್ರಿಕ”ಳಂತೆ ಅಡ್ಡಾಡುತ್ತಾ ಇರುವ ಹಿನ್ನಲೆಯಲ್ಲಿ ಲೋಕಾಯುಕ್ತ ಮತ್ತು ಹಿಂದಿನ ಸದಸ್ಯ ಕಾರ್ಯದರ್ಶಿ ಗಿರೀಶ್ ಅವರಿಗೆ ಬರೆದಿರುವ ದೂರಿನಲ್ಲಿ ಕೆಲವು ಪ್ರಶ್ನೆ ಮುಂದಿಟ್ಟು ಅದಕ್ಕೆ ಉತ್ತರವನ್ನು ಬಯಸಿರುವುದಾಗಿ ಹೇಳಿದ್ದಾರೆ.ಅವರ ದೂರಿನಲ್ಲಿ ಉಲ್ಲೇಖಿತವಾಗಿರುವ ಪ್ರಶ್ನೆಗಳು ಹೀಗಿವೆ. ರಮ್ಯ-ಶಿವಕುಮಾರ್ ಜೋಡಿ ಬಗೆಗಿನ ಪ್ರಶ್ನೆಗಳು
1-ಬಸವೇಶ್ವರ ನಗರದ“ನಿಸರ್ಗಭವನ”ದಲ್ಲಿರುವ ಶಿವಕುಮಾರ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಆ ಶ್ರೀಮತಿ ರಮ್ಯ ಯಾರು..?
2-ರಮ್ಯ ಯಾವ ಸ್ವರೂಪದ ಉದ್ಯೋಗಿ,ಸರ್ಕಾರಿನಾ..?ಅರೆ ಸರ್ಕಾರಿನಾ..? ಕಾಂಟ್ರ್ಯಾಕ್ಟ್ ಲೇಬರ್ರಾ..? ಹೊರಗುತ್ತಿಗೆ ಮೂಲಕ ನಿಯೋಜನೆಗೊಂಡ ಸಿಬ್ಬಂದಿನಾ..?
3-ರಮ್ಯ ಮಂಡಳಿಯ ಸಿಬ್ಬಂದಿನಾ..? ಇಲ್ಲವೆಂದು ಮಂಡಳಿಯೇ ಉತ್ತರ ಕೊಟ್ಟ ಮೇಲೆ ಆಕೆ ಅಷ್ಟೊಂದು ರಾಜಾರೋಷವಾಗಿ ಅಡ್ಡಾಡಿಕೊಂಡಿರುವುದೇಕೆ..? ಅದಕ್ಕೆ ಅವಕಾಶ ಕೊಟ್ಟವರ್ಯಾರು.?
4-ರಮ್ಯ ಅವರಿಗೆ ಸಂಬಳ ಎಲ್ಲಿಂದ ಬರುತ್ತೆ.ಅವರ ಆದಾಯದ ಮೂಲ ಏನು..?ಪರಿಸರಾಧಿಕಾರಿ ಶಿವಕುಮಾರ್ ಅವರೇನಾದ್ರೂ ತಮ್ಮ ಜೇಬಿನಿಂದ ಆಕೆಗೆ ಸಂಬಳ ಕೊಡುತ್ತಿದ್ದಾರಾ..? ಸಂಬಂಧವೇ ಪಡದವರನ್ನು ನೇಮಿಸಿಕೊಳ್ಳುವಂತೆಯೇ ಇಲ್ಲ ಎಂದ ಮೇಲೆ ಸಂಬಳವನ್ನೇಗೆ ಕೊಡಲಿಕ್ಕೆ ಸಾಧ್ಯ..? ಹಾಗೆ ಸಂಬಳ ಕೊಡಬಹುದೆನ್ನುವ ಸುತ್ತೋಲೆಯೇನಾದ್ರೂ ಮಂಡಳಿಯಲ್ಲಿ ಇದೆಯಾ..?
5-ರಮ್ಯ ಮಂಡಳಿ ಸಿಬ್ಬಂದಿ ಅಲ್ಲದ ಮೇಲೆ ಆಕೆಯನ್ನು ಶಿವಕುಮಾರ್ ಆಕೆಯನ್ನು ನಿಯೋಜಿಸಿಕೊಂಡಿದ್ದು ತಪ್ಪಲ್ವಾ..? ಹಾಗೆ ನಿಯೋಜಿಸಿಕೊಳ್ಳಲು ಏನಾದ್ರೂ ಅವಕಾಶ ಇದೆಯಾ..? ಇಲ್ಲವಾದ ಮೇಲೆ ಯಾವ ಮಾನದಂಡದ ಮೇಲೆ ಆಕೆಯನ್ನು ನಿಯೋಜಿಸಿಕೊಂಡಿದ್ದಾರೆ..? ಅದನ್ನು ಮಂಡಳಿಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆಯಾ..? ಆಕೆ ನಿಯೋಜನೆ ಹಿಂದಿನ ಉದ್ದೇಶ ಏನು..? ಇದೆಲ್ಲಾ ಮಂಡಳಿ ಗಮನಕ್ಕೆ ಇಲ್ಲವಾ..?
6-ರಮ್ಯಾ ಅವರನ್ನು ನಿಯೋಜಿಸಿಕೊಂಡಿದ್ದೇ ನಿಯಮಬಾಹಿರ ಎಂದ ಮೇಲೆ ಆಕೆಗೆ ಇಲಾಖಾ ವಾಹನದಲ್ಲಿ ಪಿಕ್ ಅಂಡ್ ಡ್ರಾಪ್ ಕೊಡುತ್ತಿರುವುದೇಕೆ..? ಕಚೇರಿಯ ಎಲ್ಲಾ ಸವಲತ್ತು ನೀಡುತ್ತಿರುವುದೇಕೆ..?ರಮ್ಯಾ ಅವರನ್ನು ಶಿವಕುಮಾರ್ ಬೊಲೆರೋ ವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿರುವ ಫೋಟೋ ಕೂಡ ಆನಂದ್ ಅವರ ಬಳಿ ಇದೆಯಂತೆ.
ಕಚೇರಿಯಲ್ಲಿ ಹೀಗೆ ಅಕ್ರಮವಾಗಿ ಕೆಲಸ ಮಾಡುವುದು ಎಷ್ಟು ಸರಿ ಮೇಡಮ್..? ನಿಮ್ಮ ಅಪಾಯ್ಮೆಂಟ್ ಆರ್ಡರ್ ತೋರಿಸಿ ಎಂದು ಕೇಳಿದ್ರೆ ಅದನ್ನೆಲ್ಲಾ ಕೇಳೊಕ್ಕೆ ನೀವ್ಯಾರ್ರಿ..ಅದು ನನ್ನ ಹಾಗೂ ಶಿವಕುಮಾರ್ ನಡುವಿನ ಕಮಿಟ್ಮೆಂಟ್-ಅಡ್ಜೆಸ್ಟ್ ಮೆಂಟ್.ನಿಮಗೇನು ನಿಮ್ಮ ಕೆಲಸ ಆಗ್ಬೇಕು.ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಂಡು ಹೋಗಿ ಅಷ್ಟೇ ಎಂಬ ಉತ್ತರ ಕೊಡುತ್ತಾರೆಂದು ಆನಂದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಅಷ್ಟೇ ಅಲ್ಲ ಕೆಲಸ ಮಾಡಿಸಿಕೊಳ್ಳಲು ಬರುವವರೊಂದಿಗೆ ರಮ್ಯ ತಮ್ಮ ಮೊಬೈಲ್ 810595123 ಮೂಲಕ ಹಣಕಾಸಿನ ವ್ಯವಹಾರದ ಕುರಿತಾಗಿ ಮಾತನಾಡಿದ ಎಲ್ಲಾ ಕಾಲ್ ರೆಕಾರ್ಡ್ ಕೂಡ ತಮ್ಮ ಬಳಿ ಇದೆ..ಅದನ್ನು ತನಿಖೆ ವೇಳೆ ಸಲ್ಲಿಸುವುದಾಗಿ ಆನಂದ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ವಲಯಕ್ಕೆ ಬಂದಾಗಿನಿಂದಲೂ ಕೈಗಾರಿಕೋದ್ಯಮಿಗಳು ಹಾಗೂ ಇತರೆ ವ್ಯವಹಾರಸ್ಥರ ಪಾಲಿಗೆ ಶಿವಕುಮಾರ್ ಕಂಟಕವಾಗಿಬಿಟ್ಟಿದ್ದಾರೆ ಎಂದು ತಿಳಿಸಿರುವ ಆನಂದ್ ಸಾಲದ್ದಕ್ಕೆ ರಮ್ಯ ಎಂಬಾಕೆಯನ್ನು ಅಕ್ರಮವಾಗಿ ತಮ್ಮ ಕಚೇರಿಯಲ್ಲಿಟ್ಟುಕೊಂಡು ಏಜೆಂಟ್ ರೀತಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.ಇದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.ಶಿವಕುಮಾರ್ ಮತ್ತು ರಮ್ಯ ಅವರು ನಡೆಸಿರುವ ಎಲ್ಲಾ ರೀತಿಯ ಅವ್ಯವಹಾರ-ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತನ್ನ ಬಳಿಯಿದೆ.ಅದನ್ನು ಸಮಯ ಬಂದಾಗ ಸಲ್ಲಿಸುತ್ತೇನೆ ಎಂದು ತಿಳಿಸಿರುವ ಆನಂದ್,ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇಂಥ ಆಪಾದನೆಯ ಮೂಗರ್ಜಿಗಳು ಬಂದ್ರೆ ಏಕೆ ತಲೆಕೆಡಿಸಿಕೊಳ್ಳಬೇಕು: ಈ ಬಗ್ಗೆ ಮಾದ್ಯಮಗಳು ಪ್ರತಿಕ್ರಿಯೆಗೆ ಅವರನ್ನು ಸಂಪರ್ಕಿಸಿದಾಗ ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಮಾತನಾಡಿದ್ದಾರಂತೆ.ಅಯ್ಯೋ ಬಿಡಿ ಸರ್..ಇದೊಂದು ಬೇನಾಮಿ ಪತ್ರ,ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳೊದಕ್ಕೆ ಆಗೊಲ್ಲ.ನನಗಾಗದ ನನ್ನ “ಸ್ನೇಹಿತ..!”ರೇ ಮಾಡಿದ ಷಡ್ಯಂತ್ರ ಇದು ಎನ್ನುವುದು ನನಗೆ ಗೊತ್ತಿದೆ.ಅದೆಲ್ಲಾ ಮುಗಿದೋದ ಕೇಸ್..ನಾನು ಸ್ಪಷ್ಟನೆನೂ ಕೂಡ ಕೊಟ್ಟಾಗಿದೆ.ನನ್ನದೇನೂ ಇದರಲ್ಲಿ ತಪ್ಪಿಲ್ಲ..ನಾನು ಸಭ್ಯಸ್ಥ ಎನ್ನುವಂತೆ ಮಾತನಾಡಿ ದ್ದಾರೆ.ಅಲ್ಲ ಸರ್..ಇದೊಂದು ಗಂಭೀರ ಆಪಾದನೆ ಎಂದು ನಿಮಗನ್ನಿಸೋದಿಲ್ವೇ ಎಂದು ಕೇಳಿದ್ರೆ ಇಂಥ ಬೇನಾಮಿ-ಮೂಖರ್ಜಿಗಳು ನೂರಾರು ಬರ್ತವೆ.ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳೊಕ್ಕೆ ಆಗುತ್ತಾ ಎನ್ನುವ ಉತ್ತರ ಕೊಟ್ಟಿದ್ದಾರಂತೆ.
ಶಿವಕುಮಾರ್ ಅವರು ಏನೇ ಅಂದ್ರೂ ರಮ್ಯಾ ಎನ್ನುವ ಮಹಿಳೆಯನ್ನು ಬೇನಾಮಿಯಾಗಿ ತಮ್ಮ ಕಚೇರಿಯಲ್ಲಿ ನಿಯೋಜಿಸಿಕೊಂಡಿರುವುದು ತಪ್ಪು..ಇಡೀ ಕಚೇರಿಯ ಆಡಳಿತಯಂತ್ರದಲ್ಲಿ ಆಕೆಯನ್ನು ಬಳಸಿಕೊಂಡಿರುವುದು ಅಕ್ಷಮ್ಯ.. ಅವರು ಆಕೆ ಮೂಲಕ ಏನ್ ವ್ಯವಹಾರ ಮಾಡಿದ್ದಾರೋ..? ಆಕೆಯನ್ನು ಹೇಗೆಲ್ಲಾ ಬಳಸಿಕೊಂಡಿ ದ್ದಾರೋ ಎನ್ನುವುದೆಲ್ಲಾ ತನಿಖೆ ವೇಳೆಯಲ್ಲಿ ಪತ್ತೆಯಾಗಲಿದೆ. ಪ್ರಕರಣವನ್ನು ಸದಸ್ಯ ಕಾರ್ಯದರ್ಶಿ ರೇ ಅವರು ಕೂಡ ಗಂಭೀರವಾಗಿ ಪರಿಗಣಿಸದಂತಿದೆ.ಹಾಗಾಗಿನೇ ಹಿರಿಯ ಅಧಿಕಾರಿಗಳಿಗೆ ದೂರಿನ ಪ್ರತಿಗಳನ್ನು ಲಗತ್ತಿಸಿ ಪ್ರಕರಣ ಸಂಬಂಧ ವಿವರಣೆ ಕೋರಿದ್ದಾರೆ.ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆದು ವರದಿ ಸಲ್ಲಿಕೆಯಾದ್ರೆ ಸತ್ಯಾಸತ್ಯತೆ ಹೊರಬರಬಹುದು..ಆದ್ರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ಹೀಗೆ ರೀತಿ ಅಧಿಕಾರವನ್ನು ಮಿಸ್ಯೂಸ್ ಮಾಡಿಕೊಂಡಿರುವುದು ತಲೆತಗ್ಗಿಸುವಂತ ವಿಚಾರ.