CITYTRANSPORT

BMTC EXCLUSIVE…ಯುವತಿ ದೂರಿಗೆ ರಾತ್ರೋರಾತ್ರಿ“ಕಾಮುಕ” ಕಳಂಕ ಹೊತ್ತುಕೊಂಡ ಕಂಡಕ್ಟರ್ ಕೆಂಪಣ್ಣ..!?

Share

ಸಾಕ್ಷ್ಯಗಳಿಲ್ಲದೆ, ಬೆದರಿಸಿ ಬರೆಯಿಸಿಕೊಂಡ ಮುಚ್ಚಳಿಕೆ  ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ರಾ ಪ್ರಭಾಕರ ರೆಡ್ಡಿ-ರಮ್ಯ..?!:ಕೆಂಪಣ್ಣ ಪತ್ನಿಯಿಂದ ಪೊಲೀಸ್ ಸ್ಟೇಷನ್- ಸರ್ಕಾರಕ್ಕೆ ದೂರು..

ಮಾಡದ ತಪ್ಪಿಗೆ ಕಾಮುಕನಾಗಿಬಿಟ್ಟೆ ಸಾ‍ರ್.. ಸಾಕ್ಷ್ಯ ಸಿಕ್ಕರೆ ಕುತ್ತಿಗೆ ಕೊಯ್ದುಕೊಂಡು ಸತ್ತೋಗುತ್ತೇನೆ ಸಾರ್..: ಕೆಂಪಣ್ಣ ಕಣ್ಣೀರು

ಬೆಂಗಳೂರು:ಅಂದುಕೊಂಡಂತೆ ನಡೆದಿದ್ದೇ ಅದಲ್ಲಿ ಮಾತ್ರ ಇದನ್ನು ನಿಜಕ್ಕೂ ಅಮಾನವೀಯ ಎನ್ನಲೇಬೇಕಾಗು ತ್ತದೆ. ದೂರು ಬಂದಾಕ್ಷಣ ಅಧಿಕಾರಿಗಳೆನಿಸಿಕೊಂಡವರು ಪರಿಶೀಲಿಸಬೇಕು..ತನಿಖೆ ನಡೆಸಬೇಕು. ತಪ್ಪನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕ್ರೋಢೀಕರಿಸಬೇಕು. ಒಬ್ಬನನ್ನು ತಪ್ಪಿತಸ್ಥ ಎಂದು ನಿರ್ಧರಿಸುವ ಮುನ್ನ ಹತ್ತಾರು ಬಾರಿ ಆಲೋಚಿಸಬೇಕು. ಕರ್ತವ್ಯದಾಚೆಗೂ ವಿವೇಚನೆ ಬಳಸಬೇಕು.ವಿವೇಕದಿಂದ ವ್ಯಹರಿಸ ಬೇಕು. ಮನುಷ್ಯತ್ವದಿಂದಲೂ ಕೆಲಸ ಮಾಡಬೇಕು..ಆದ್ರೆ ಆರೋಪ ಬಂದಾಕ್ಷಣ  ಕೆಳಹಂತದ ಸಿಬ್ಬಂದಿಯನ್ನ “ಕಾಮುಕ,ಕಾಮಕ್ರಿಮಿ,ಕಾಮಾಂಧ” ಎಂದು ತಾವೇ ಡಿಸೈಡ್ ಮಾಡಿ ಆತನನ್ನು ಸಸ್ಪೆಂಡ್ ಮಾಡುವುದರ ಜತೆಗೆ  ಶಾಶ್ವತವಾಗಿ ಸಮಾಜದ ಮುಂದೆ ತಲೆತಗ್ಗಿಸಿಕೊಂಡೇ ಅವಮಾನಿತನಾಗಿ ಬದುಕುವಂತೆ ಮಾಡುವುದನ್ನು ನಾಗರಿಕ ಸಮಾಜ ಒಪ್ಪಬೇಕಾ..ನಮ್ಮ ಪ್ರಕಾರ ಸಾಧ್ಯವೇ ಇಲ್ಲ..

ಇಷ್ಟನ್ನೆಲ್ಲಾ ಹೇಳೊಕ್ಕೆ ಕಾರಣ,ಯುವತಿ ಮಾಡಿದ ಆರೋಪಕ್ಕೆ  ಕೆಲಸ ಕಳೆದುಕೊಂಡು ನ್ಯಾಯಕ್ಕಾಗಿ ಅಲೆಯುತ್ತಿರುವ ಆ ಕಂಡಕ್ಟರ್( ಕಂಡಕ್ಟರ್ ಅಮಾಯಕ ಎಂದೇನು ನಮ್ಮ ವಾದವಲ್ಲ..ಆದ್ರೆ ಕೂಲಂಕುಷವಾಗಿ ತನಿಖೆ-ಪರಿಶೀಲನೆ ನಡೆಸಿ ಆಪಾದಿತ ಎಂದು ಪರಿಗಣಿಸಬೇಕಿತ್ತು ಎನ್ನುವುದಷ್ಟೇ ನಮ್ಮ ಅಭಿಪ್ರಾಯ).ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಟಿಕೆಟ್ ಇಶ್ಯೂ ಮಾಡುವಾಗ ಅನಗತ್ಯವಾಗಿ “ಬ್ಯಾಡ್ ಟಚ್( ದೇಹಚೇಷ್ಟೆ)” ಮಾಡಿದನೆನ್ನುವ ಆರೋಪದ ಅಡಿಯಲ್ಲಿ ಮೇಲಾಧಿಕಾರಿಗಳು ಆತನನ್ನು ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ.ಸಸ್ಪೆಂಡ್ ಮಾಡಿರುವುದಕ್ಕೆ ನಮ್ಮ ವಿರೋಧವೂ ಇಲ್ಲ,ಆಕ್ಷೇಪವೂ ಇಲ್ಲ,ಆದ್ರೆ ಆತನ ಮೇಲೆ ಬಂದ ಆಪಾದನೆ ಎಷ್ಟು ಗಂಭೀರವಾದುದು,ಮಾರಣಾಂತಿಕವಾದುದು  ಎನ್ನುವ ಸಣ್ಣ ಪರಿವೆಯೂ ಇಲ್ಲದೆ ಅಧಿಕಾರಿಗಳು ವರ್ತಿಸಿದ ರೀತಿಗೆ ಇಡೀ ಸಾರಿಗೆ ಸಿಬ್ಬಂದಿ ಸಮುದಾಯ ಖಂಡನೆ ವ್ಯಕ್ತಪಡಿಸ್ತಿದೆ.

ಅಂದ್ಹಾಗೆ ಇವತ್ತು ಬಿಎಂಟಿಸಿಯ ಆಯಕಟ್ಟಿನ ಸ್ಥಾನದಲ್ಲಿರುವ ಪ್ರಭಾಕರ ರೆಡ್ಡಿ,ರಮ್ಯಾ  ಅಧಿಕಾರಿಗಳು ಆತುರಾತುರದಲ್ಲಿ ಕೈಗೊಂಡಿದ್ದಾರೆಂದು ತೋರುವ ಈ  ನಿರ್ದಾರ ಬಾಳಿ ಬದುಕಬೇಕಿರುವ ಕಂಡಕ್ಟರ್ ಕೆಂಪಣ್ಣ ಎನ್ನುವವನ್ನು ಇಂಥಾ ಆಪಾದನೆ ಹೊತ್ತುಕೊಂಡು ನಾಚಿಕೆಯಿಂದ ಬಾಳೋಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳೋ ದೇ ಲೇಸು ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿಬಿಟ್ಟಿದೆ.ಕೆ.ಆರ್ ಪುರಂ ಡಿಪೋದಲ್ಲಿ ಅನೇಕ ವರ್ಷಗಳಿಂದ ಕಂಡಕ್ಟರ್ ಆಗಿರುವ ಕೆಂಪಣ್ಣನ ಬಗ್ಗೆ ಇಲಾಖೆ ಮಟ್ಟದಲ್ಲಿ ಯಾವುದೇ ಕೆಟ್ಟ ಅಭಿಪ್ರಾಯಗಳಿಲ್ಲ.ಆದ್ರೆ ಯುವತಿಯ ಇ-ಮೇಲ್ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ಕೈಗೊಂಡ ಸಸ್ಪೆಂಡ್ ನಿರ್ದಾರ ಕೆಂಪಣ್ಣನ ಬದುಕನ್ನು ಅಕ್ಷರಶಃ ನಾರಕೀಯಗೊಳಿಸಿದೆ.

ಆಗಿದ್ದೇನು..ಕೆ.ಆರ್ ಪುರಂ ಡಿಪೋದಲ್ಲಿ ಕಂಡಕ್ಟರ್ ಆಗಿರುವ ಕೆಂಪಣ್ಣ ವಿರುದ್ಧ ನವೆಂಬರ್ 19 ರಂದು ಯುವತಿಯೋರ್ವಳು ಬಸ್ ನಲ್ಲಿ ಸಂಚರಿಸುವಾಗ ತನ್ನ ಜತೆ ಪ್ರಜ್ಞಾಪೂರ್ವಕವಾಗಿ ಚೇಷ್ಟೆ ನಡೆಸಿದ್ದಾನೆ ಎಂದು ಇ-ಮೇಲ್ ಮೂಲಕ ದೂರೊಂದನ್ನು ದಾಖಲಿಸಿದ್ದಾರೆ. .ಅದರ ಮಾರನೇ ದಿನವೇ ಕೆಲಸಕ್ಕೆ ಬಂದ ಆತನನ್ನು ಉಪ ಭದ್ರತಾಧಿಕಾರಿಯಾಗಿರುವ ರಮ್ಯ ಅವರನ್ನು ಕಾಣುವಂತೆ ಡಿಪೋ ಮ್ಯಾನೇಜರ್ ತಿಳಿಸಿದ್ದಾರಂತೆ.ನಿರ್ದೇಶನದಂತೆ ಅವರ ಮುಂದೆ ಹೋದಾಗ ಘಟನೆಯ ಬಗ್ಗೆ ವಿಚಾರಿಸುವ ಗೋಜಿಗೂ ಹೋಗದೆ  ಏಕಾಏಕಿ ಆತನನ್ನೇ ತಪ್ಪಿತಸ್ಥ ಎಂದು ಅವರೇ ನಿರ್ದರಿಸಿಬಿಟ್ಟಂತೆ ವರ್ತಿಸಿದ್ದಾರಂತೆ.

ಘಟನೆಯ ಬಗ್ಗೆ ವಿವರಣೆ ಕೊಡಲಿಕ್ಕೂ ಅವಕಾಶ ನೀಡದೆ ತಪ್ಪೊಪ್ಪಿಗೆ ಪತ್ರ ಬರೆಯಲೇಬೇಕು. ಇಲ್ಲವಾದಲ್ಲಿ ಗ್ರಹಚಾರ ಬಿಡಿಸಿಬಿಡ್ತೇನೆ ಎಂದು ಅವಾಜ್ ಹಾಕಿದ್ದಾರಂತೆ. ಕೆಲಸ ಉಳಿಸಿಕೊಳ್ಳಬೇಕೆನ್ನುವ ಆಲೋಚನೆಯಲ್ಲಿ ಕೆಂಪಣ್ಣ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನಂತೆ.ಅದರಲ್ಲಿ ತನ್ನ ಮೇಲೆ ಬಂದಿರುವ ಆಪಾದನೆಗೆ ಸಂಬಂಧಿಸಿದಂತೆ ಒಂದೇ ಒಂದು ಸಣ್ಣ ಸಾಕ್ಷ್ಯ ಹಾಜರುಪಡಿಸಿದ್ರೆ ನಾನು ಎಂಥಾ ಶಿಕ್ಷೆ ಅನುಭವಿಸಲಿಕ್ಕೂ ಸಿದ್ದ  ಎನ್ನುವುದಾಗಿಯೂ ತಪ್ಪೊಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರಂತೆ.

ತಪ್ಪೊಪ್ಪಿಗೆ ಪತ್ರವನ್ನೇ ಮುಂದಿಟ್ಟುಕೊಂಡು ಕೆಂಪಣ್ಣನನ್ನು ಆನ್ ಸ್ಪಾಟ್ ರಮ್ಯ ಮೇಡಮ್ ಸಸ್ಪೆಂಡ್ ಮಾಡಿದ್ದಾರಂತೆ.ಯುವತಿಯ ದೂರನ್ನೇ ಸತ್ಯ ಎಂದು ನಂಬಿ ಅದರ ಅಸಲಿತನ ಅರಿಯುವ ಪ್ರಯತ್ನಕ್ಕೂ ಕೈ ಹಾಕದೆ ಏಕಾಏಕಿ ನೀನು ತಪ್ಪಿತಸ್ಥ, ಕಾಮುಕ,ಕಾಮಾಂಧ,ಕಾಮಕೀಟ ಎನ್ನುವ ಕಳಂಕವನ್ನು ಕೆಂಪಣ್ಣನ ಬದುಕಿಗಷ್ಟೇ ಅಲ್ಲ,ವೃತ್ತಿಗೂ ಅಂಟುವಂತೆ ಮಾಡಿದ್ದಾರೆನ್ನುವುದು ಕೆಂಪಣ್ಣನ ವೃತ್ತಾಂತ ಗಮನಿಸಿದಾಗ ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಕೆಂಪಣ್ಣ ಹೇಳೋದೇನು.,.? ಕನ್ನಡ ಫ್ಲ್ಯಾಶ್ ನ್ಯೂಸ್ ಮುಂದೆ ತನ್ನ ಅಳಲನ್ನು ತೋಡಿಕೊಂಡ ಕೆಂಪಣ್ಣ ಸರ್ ನಾನು ಹೆಣ್ಣು ಮಕ್ಕಳ ಜತೆ ಬೆಳೆದವನು..ನನಗೂ ಅಕ್ಕತಂಗಿ ಇದ್ದಾರೆ.ನನಗೆ ಹೆಣ್ಣಿನ ಬಗ್ಗೆ ಅಪಾರ ಗೌರವ ಇದೆ.ಆದ್ರೆ ಅವತ್ತು ಡ್ಯೂಟಿ ಮಾಡುವಾಗ ಸಿಕ್ಕಾಪಟ್ಟೆ ಬಸ್ ರಶ್ ಇತ್ತು.ಟಿಕೆಟ್ ಇಶ್ಯೂ ಮಾಡುವ ಅವಸರದಲ್ಲಿ ಅವರನ್ನು ಮುಟ್ಟಿರಬಹುದು.ಆದ್ರೆ ಅವರನ್ನು ಮುಟ್ಟಬೇಕೆನ್ನುವ ದುರುದ್ದೇಶ ನನ್ನದಾಗಿರಲಿಲ್ಲ.ರಶ್ ವೇಳೆ ಟಿಕೆಟ್ ಇಶ್ಯೂ ಮಾಡುವಾಗ ಹಾಗೆಲ್ಲಾ ಆಗುವುದು ಸಹಜ.ಟಚ್ ಆಗುತ್ತದೆ ಎಂದು ಮುಜುಗರಕ್ಕೀಡಾದ್ರೆ ನಮ್ಮ ಮೇಲೆ ಫೈನ್ ಬೀಳ್ತದೆ.ಇದು ಪ್ರಭಾಕರ ರೆಡ್ಡಿ ಹಾಗೂ ರಮ್ಯ ಅವರಿಗೂ ಗೊತ್ತಿದೆ.ಇದನ್ನು ಅರ್ಥ ಮಾಡಿಕೊಳ್ಳದೆ ಯುವತಿ ದೂರನ್ನೇ ನಂಬಿ ನನ್ನನ್ನು ಸಸ್ಪೆಂಡ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ನಾನು ಯುವತಿ ಜತೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಸಾಕ್ಷ್ಯಗಳನ್ನು ಕೊಡಲಿ,ನಾನೇನಾದ್ರೂ ಹಾಗೆ ಮಾಡಿರುವುದನ್ನು ಸಾಬೀತುಮಾಡಿದ್ರೆ ಎಂಥಾ ದಂಡನೆಗೆ ಬೇಕಾದ್ರೂ ಗುರಿಯಾಗಬಲ್ಲೆ..ಅದನ್ನು ಬಿಟ್ಟು ನನ್ನನ್ನು ಕಾಮಾಂಧ-ಕಾಮುಕ ಎನ್ನುವಂತೆ ಮಾದ್ಯಮಗಳು ಬಿಂಬಿಸಿದ್ದು,ಅದನ್ನೇ ದೊಡ್ಡದು ಮಾಡಿಕೊಂಡು ಪ್ರಭಾಕರ ರೆಡ್ಡಿ ಮತ್ತು  ರಮ್ಯ ಮೇಡಮ್ ಸಸ್ಪೆಂಡ್ ಮಾಡಿದ್ದು ಸರಿನಾ..? ನನ್ನ ತಪ್ಪಿದ್ದರೆ ಪ್ರೂವ್ ಮಾಡಲಿ,ಅದನ್ನು ಬಿಟ್ಟು ಬಲವಂತವಾಗಿ ಮುಚ್ಚಳಿಕೆ ಬರೆಯಿಸಿಕೊಂಡು ಅದರ ಮೇಲೆಯೇ ಸಸ್ಪೆಂಡ್ ಮಾಡಿರುವುದು ನನ್ನನ್ನು ಅಘಾತಕ್ಕೀಡುಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಭಾಕರ ರೆಡ್ಡಿ- ರಮ್ಯ ವಿರುದ್ದ ದೂರು:ತನಗೆ ಆಗಿರುವ ಅವಮಾನದಿಂದ ಕೆಂಪಣ್ಣ ಕುಗ್ಗಿ ಹೋಗಿದ್ದಾರೆ.ಅವರ ನೆರೆಹೊರೆಯವರು,ಸಂಬಂಧಿಕರು ನಿಕೃಷ್ಟವಾಗಿ ನಡೆಸಿಕೊಳ್ಳಲು ಶುರುಮಾಡಿದ್ದಾರಂತೆ.ತನ್ನನ್ನು ಸಸ್ಪೆಂಡ್ ಮಾಡಿದ ದಿನದಿಂದಲೇ ಮಾನಸಿಕವಾಗಿ ಅಘಾತಕ್ಕೊಳಗಾಗಿರುವ ಗಂಡನ ಸ್ತಿತಿಗೆ ಗಾಬರಿಗೊಂಡ ಪತ್ನಿ ವೀಣಾ 01/12/2023 ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ನನ್ನ ಗಂಡನನ್ನು ಕಾಮಾಂಧ-ಕಾಮುಕ ಎಂದು ಬಿಂಬಿಸಲಿಕ್ಕೆ ಕಾರಣವಾದ ಪ್ರಭಾಕರ ರೆಡ್ಡಿ,ರಮ್ಯ ಅವರ ವಿರುದ್ದ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೆ ಕೆಂಪಣ್ಣ ಪತ್ನಿ ವೀಣಾ ಮುಖ್ಯಮಂತ್ರಿಗಳು,ಸಾರಿಗೆ ಸಚಿವರಿಗೂ ಪತ್ರ ಬರೆದು ತನ್ನ ಗಂಡನಿಗೆ ಆಗಿರುವ ಅವಮಾನದಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುವಂತೆ ಈ ಅಧಿಕಾರಿಗಳು  ಪ್ರಚೋದನೆ ನೀಡಿದ್ದಾರೆಂದು ಅಪಾದಿಸಿದ್ದಾರೆ.ಈ ದೂರಿನ ಹಿನ್ನಲೆಯಲ್ಲಿ ಈ ಅಧಿಕಾರಿಗಳಿಬ್ಬರ ವಿರುದ್ದ ತನಿಖೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಅದೇ ಏನೇ ಆಗಲಿ ಮೇಲಾಧಿಕಾರಿಗಳ ವಿರುದ್ದ ದೂರು ನೀಡುವಂಥ ಧೈರ್ಯ ತೋರಿದ  ಕೆಂಪಣ್ಣರನ್ನು ಬಿಎಂಟಿಸಿ ಸಿಬ್ಬಂದಿಯೇ ಅಭಿನಂದಿಸಿದೆ.

ಅಧಿಕಾರಿಗಳ ಮೇಲೆ ಸಾವಿರಾರು ದೂರುಗಳಿವೆ ಎಷ್ಟು ಜನರ ವಿರುದ್ದ ಕ್ರಮ ಕೈಗೊಂಡಿದ್ದೀರಾ..? ಈ ಪ್ರಶ್ನೆಯನ್ನು ಸಾರಿಗೆ ಸಿಬ್ಬಂದಿ ಮಾಡಲಾರಂಭಿಸಿದ್ದಾರೆ.ಏಕೆಂದರೆ ಕೆಳಹಂತದ ಸಿಬ್ಬಂದಿ ಬಗ್ಗೆ ಮಾತ್ರ ದೂರುಗಳು ಬರುತ್ತಿಲ್ಲ.ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಮಾಡುವ ಎಷ್ಟೋ ಜನರ ಮೇಲೂ ದಂಡಿ ದಂಡಿ ದೂರುಗಳು ಬಂದಿವೆ ಇವತ್ತಿಗೂ ಬರುತ್ತಿವೆ.ಆದರೆ ಕೆಂಪಣ್ಣನ ವಿಚಾರದಲ್ಲಿ ತೆಗೆದುಕೊಂಡಷ್ಟೇ ಕ್ಷಿಪ್ರ ನಿರ್ದಾರ,ಆತುರದ ನಿರ್ಣಯವನ್ನು ಎಷ್ಟು ಅಧಿಕಾರಿಗಳ ವಿರುದ್ದ ಕೈಗೊಂಡಿದ್ದೀರಿ ಎನ್ನುವುದನ್ನು ಮೊದಲು ಪ್ರಭಾಕರ ರೆಡ್ಡಿ,ರಮ್ಯ ಸ್ಪಷ್ಟಪಡಿಸಬೇಕಿದೆ.ಇದಕ್ಕೆ ಉತ್ತರ ಕೊಡಕ್ಕೆ ಬಹುಷಃ ಅವರ ಬಳಿ ಮಾಹಿತಿಯೇ ಇಲ್ಲ ಎನಿಸುತ್ತದೆ.ಡ್ರೈವರ್-ಕಂಡಕ್ಟರ್ಸ್ ಗಳನ್ನು ದಂಡಿಸುವುದರ ಜತೆಗೆ ಕೆಲವು  ಭ್ರಷ್ಟ ಹಾಗೂ ಅಡ್ಡಕಸುಬಿ ಅಧಿಕಾರಿಗಳ ಹೆಡೆಮುರಿ ಕಟ್ಟೋ ಕೆಲಸ ಮಾಡಿದಿದ್ರೆ ಇವತ್ತು ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಇರುತ್ತಿತ್ತೇನೋ ಅನ್ನಿಸುತ್ತೆ.

ನನ್ನ ಗಂಡನನ್ನು ಕಾಮುಕ ಎಂದು ಆಪಾದಿಸುವಂತೆ ಮಾಡಿದ್ದಾರೆ: ಯಾವ್ ಹೆಂಡ್ತಿನೇ ಆಗಲಿ,ಸಮಾಜ ತನ್ನ ಗಂಡನನ್ನು ಕಾಮುಕ ಎಂದು ಅನುಮಾನಿಸಿ ನೋಡುತ್ತೆ ಎಂದ್ರೆ ಅದನ್ನು ಸಹಿಸಿಕೊಳ್ಳೊಕ್ಕೆ ಆಗೋದೇ ಇಲ್ಲ ಬಿಡಿ. ಇದೇ ಮನಸ್ಥಿತಿಯಲ್ಲಿರುವ ಕೆಂಪಣ್ಣನ ಪತ್ನಿ ವೀಣಾ ಕೂಡ ತನ್ನ ಪತಿ ಮೇಲೆ ಕೇಳಿಬಂದಿರುವ ಗಂಭೀರ ಆಪಾದನೆಗೆ ಸ್ಪಷ್ಟನೆ ಕೊಡಲೇಬೇಕು.ಅದನ್ನು ಸಾಕ್ಷ್ಯಸಮೇತ ಪ್ರೂವ್ ಮಾಡಲೇಬೇಕು.ಇಲ್ಲವಾದಲ್ಲಿ ಆಪಾದಿಸಿದವರ ಮೇಲೆಯೇ ಕ್ರಿಮಿನಲ್ ಕೇಸ್ ಹಾಕಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.ಮಾನಸಿಕವಾಗಿ ಅಘಾತಕ್ಕೊಳಗಾಗಿರುವ ನನ್ನ ಪತಿಯ ಸ್ತಿತಿಯನ್ನು ನೋಡೊಕ್ಕೆ ಆಗುತ್ತಿಲ್ಲ.ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿಕ್ಕೆ ಆಗುತ್ತಾ..ಈಗಾಗಲೇ ಅವರನ್ನು ನಮ್ಮ ಸಂಬಂಧಿಕರೆಲ್ಲಾ ನಿಕೃಷ್ಟವಾಗಿ ನೋಡುವಂತಾಗಿದೆ.ಸಮಾಜದಲ್ಲಿ ತಲೆ ಎತ್ತಿ ತಿರುಗಾಡದಂಥ ಸ್ತಿತಿಗೆ ತಂದ ಪ್ರಭಾಕರ ರೆಡ್ಡಿ ಮತ್ತು ರಮ್ಯ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಮ್ಯ ಮೇಡಮ್ ಅವ್ರೇ ವಿವೇಚನೆ ಜತೆಗೆ ಸ್ವಲ್ಪಮಾನವೀಯವಾಗಿಯೂ ಕೆಲಸ ಮಾಡಿ..?!:ರಮ್ಯ ಅವರ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಈ ಹಿಂದೆಯೂ ಬರೆದಿತ್ತು..ಈಗಲೂ ಬರೆಯುತ್ತಿದೆ..ಮುಂದೆಯೂ ಬರೆಯಲಿದೆ.ಅವರ ಕಾರ್ಯವೈಖರಿ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ..ಒಳ್ಳೆ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ,ಅದನ್ನು ನಾವೂ ಒಪ್ಪುತ್ತೇವೆ,ಗೌರವಿಸುತ್ತೇವೆ ಕೂಡ.ಆದ್ರೆ ತಮ್ಮ ಸಿಬ್ಬಂದಿ ಮೇಲೆ ಇಂಥದ್ದೊಂದು ಆರೋಪ ಬಂದಾಗ ಅವರು ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಏನ್ ಮಾಡ್ಬೇಕಿತ್ತೋ ಅದನ್ನು ಸರಿಯಾಗಿ ಮಾಡಿಲ್ಲ ಎನ್ನುವುದು ನಮ್ಮ ವಾದ.ಲೈಂಗಿಕ ಕಿರುಕುಳ-ಚೇಷ್ಟೆಯಂಥ  ಆಪಾದನೆಯನ್ನು ಸುಖಾಸುಮ್ಮನೆ ಯಾರೊಬ್ಬರು ತಲೆಗೆ ಕಟ್ಟಿಕೊಳ್ಳೊಕ್ಕೆ ರೆಡಿಯಿರುವುದಿಲ್ಲ.

ಕೆಂಪಣ್ಣನ ಮೇಲೆ ಇಂಥದ್ದೊಂದು ಆಪಾದನೆ ಬಂದಾಗ ಯುವತಿ ಕಡೆಗೆ ನ್ಯಾಯ ದೊರಕಿಸಿಕೊಡಲೇಬೇಕೆನ್ನುವ ಮನಸ್ತಿತಿಯಲ್ಲಿದ್ದಂತೆ ಅವರು ನ್ಯಾಯ ತೀರಿಸಿದ್ದಾರೆ.ಯಾಕೆ ಕೆಂಪಣ್ಣ ಮನುಷ್ಯನಲ್ವಾ..?ಆತನಿಗೂ ಒಂದು ಘನತೆ-ಶ್ರೇಷ್ಟತೆ ಇರುತ್ತಲ್ವಾ..? ಯುವತಿಯದು ಮಾತ್ರ ಮಾನ, ಕೆಂಪಣ್ಣನದು ಅಲ್ವಾ..? ತನ್ನ ಸಿಬ್ಬಂದಿ ಮೇಲೆ ಇಂತದ್ದೊಂದು ಆಪಾದನೆ ಬಂದಾಗ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಬೇಕಿದ್ದುದು ಧರ್ಮ.ಅದಕ್ಕೆ ಕಾಲಾವಕಾಶವನ್ನೂ ತೆಗೆದುಕೊಳ್ಳಬಹುದಿತ್ತೇನೋ,ಆದರೆ ಏಕಾಏಕಿ ಕೆಂಪಣ್ಣ ಆಪಾದಿಸುವಂತೆ ಆತನನ್ನು ಹೆದರಿಸಿ ಬೆದರಿಸಿ ಮುಚ್ಚಳಿಕೆ ಬರೆಯಿಸಿಕೊಂಡು ಅದನ್ನೇ ತಪ್ಪೊಪ್ಪಿಗೆ ಎನ್ನುವಂತೆ ಬಿಂಬಿಸಿರುವುದು ನಿಜಕ್ಕೂ ಸರಿಯಲ್ಲ.

ತಾನು ಮಾಡಿದ ಕೆಲಸದಿಂದ ಇವತ್ತು ಕೆಂಪಣ್ಣನ ಮನಸ್ತಿತಿ,ಆತನ ಕುಟುಂಬದ ಮನೋವೇದನೆ,ಅವರಿಗಾಗಿರುವ ಅವಮಾನ,ಅನ್ಯಾಯದ ಅಂದಾಜೇನಾದ್ರೂ  ರಮ್ಯ ಅವರಿಗಿದೆಯಾ..? ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ರಮ್ಯ ಮೇಡಮ್..ತಪ್ಪಿದ್ದರೆ ನಿಜಕ್ಕೂ ಕ್ರಮ ಕೈಗೊಳ್ಳಲಿ,ಆದರೆ ಸಾಕ್ಷ್ಯವನ್ನೇ ಕ್ರೋಢೀಕರಿಸದೆ ಏಕಾಏಕಿ ಆತನನ್ನು ಸಸ್ಪೆಂಡ್ ಮಾಡಿ,ಸಮಾಜ ಆತನನ್ನು ಕಾಮುಕ.ಕಾಮಕೀಟ,ಕಾಮಾಂಧ ಎಂದು ಅವಮಾನದಿಂದ ನೋಡುವಂತೆ ಮಾಡಿದ್ದು ಖಂಡಿತಾ..ಖಂಡಿತಾ ಸರಿಯಲ್ಲ..ರಮ್ಯ ಮೇಡಮ್ ಕಾರ್ಯವೈಖರಿ ಸ್ವಲ್ಪ ಮಾನವೀಯ ನೆಲೆಗಟ್ಟಿನಲ್ಲಿ ನಡೆದರೆ ಒಳ್ಳೆಯದೇನೋ ಎನಿಸುತ್ತದೆ.

ಸಾಕ್ಷ್ಯಗಳಿವೆ ಅದರ ಮೇಲೆಯೇ ಕ್ರಮ ಕೈಗೊಳ್ಳಲಾಗಿದೆಯಂತೆ: ಈ ಹಿನ್ನಲೆಯಲ್ಲಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಅಧಿಕಾರಿಗಳ ಮಟ್ಟದಲ್ಲಿ ಒಂದಷ್ಟು ಮಾಹಿತಿ ಕಲೆ ಹಾಕಿದಾಗ, ಕೆಂಪಣ್ಣನ ಮೊಬೈಲ್‌ ನಲ್ಲಿ ಒಂದಷ್ಟು ಮಹಿಳಾ ಪ್ರಯಾಣಿಕರ ಚಿತ್ರಗಳು,ಅಶ್ಲೀಲ-ಅಸಭ್ಯ ವೀಡಿಯೋಗಳು ಸಿಕ್ಕವಂತೆ.ಅದಲ್ಲದೇ ಕೆಂಪಣ್ಣನೇ ತಪ್ಪೊಪ್ಪಿಕೊಂಡಿದ್ದಾನಂತೆ.ಅದರ ಆಧಾರದಲ್ಲಿ ಸಸ್ಪೆಂಡ್‌ ಮಾಡಲಾಗಿದ ಎನ್ನಲಾಗ್ತಿದೆ.ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.ಆದ್ರೆ ಟಿಕೆಟ್‌ ಕೊಡೊಕ್ಕೆ ಸಾಧ್ಯವಾಗದಷ್ಟು ರಶ್‌ ನಲ್ಲಿರುವ ವೇಳೆ  ಬಸ್‌ ನಲ್ಲಿ ಮಹಿಳೆಯರ ಅಸಭ್ಯ ಚಿತ್ರಗಳನ್ನು ಹೇಗೆ ಚಿತ್ರೀಕರಿಸಿಕೊಳ್ಳಲು ಸಾಧ್ಯವೋ..? ಅಷ್ಟೊಂದು ಪುರುಸೊತ್ತಿನಲ್ಲಿರುತ್ತಾರಾ ಕಂಡಕ್ಟರ್‌ ಗಳು..? ಅದೆಲ್ಲಕ್ಕಿಂತ ಬಿಎಂಟಿಸಿ ಬಸ್‌ ಗಳಲ್ಲಿ ಮಹಿಳೆಯರು ಅಸಭ್ಯ ಹಾಗೂ ಅಶ್ಲೀಲ ಭಂಗಿಯಲ್ಲಿ ಪ್ರಯಾಣಿಸುತ್ತಾರಾ..? ಎನ್ನುವ ಪ್ರಶ್ನೆಗಳು ಕಾಡುತ್ತವೆ ಅಲ್ವಾ..? ಹೀಗೆಲ್ಲಾ ಆಪಾದಿಸುವುದು ಇಡೀ ಬಿಎಂಟಿಸಿ ಮಹಿಳಾ ಪ್ರಯಾಣಿಕರು ಅವಮಾನಿಸಿದಂತಾಗುವುದಿಲ್ಲವೇ..?

ಬಿಎಂಟಿಸಿ ಅಧಿಕಾರಿಗಳು “ಸರ್ವಾಧಿಕಾರಿ”ಗಳಾಗಿಬಿಟ್ಟಿದ್ದಾರೆ..!:ಕೆಂಪಣ್ಣನ ಪ್ರಕರಣ ಸಾರಿಗೆ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗ್ರಾಸವಾಗಿದೆ.ಡ್ರೈವರ್ಸ್-ಕಂಡಕ್ಟರ್ಸ್ ಗಳ ಮೇಲೆ ಆಪಾದನೆ ಬಂದಾಗ ಮ್ಯಾನೇಜ್ಮೆಂಟ್  ನ್ಯಾಯ ನಮ್ಮ ಪರ ಇದ್ದರೂ ನಮ್ಮನ್ನು ಬೆಂಬಲಿಸುವುದೇ ಇಲ್ಲ.ಯಾವಾಗಲೂ ನಮ್ಮನ್ನು ಮಲತಾಯಿ ಮಕ್ಕಳಂತೆ ಟ್ರೀಟ್ ಮಾಡ್ತಾರೆ.ಈ ಪ್ರಕರಣದಲ್ಲೂ ಅದೇ ಆಗಿರುವುದು ಕೆಂಪಣ್ಣನ ಮೇಲೆ ಇಂತದ್ದೊಂದು ಆಪಾದನೆ ಬಂದಾಗ ಯುವತಿಗೆ ನ್ಯಾಯ ತೀರಿಸುವ ಅವಸರಕ್ಕೆ ಸಿಕ್ಕವರಂತೆ ಅಧಿಕಾರಿಗಳು ವರ್ತಿಸಿದ್ದಾರೆ.

ಕೆಂಪಣ್ಣ ಯುವತಿಗೆ ಕಿರುಕುಳ ನೀಡಿದ್ದಾನೆ.ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನುವುದಕ್ಕೆ ಯಾವುದೇ ಪುರಾವೆಗಳೇ ಸಿಕ್ಕಿಲ್ಲ.ಬಸ್ ನಲ್ಲಿ ಕ್ಯಾಮೆರಾ ಇರಲೇಬೇಕಾಗುತ್ತೆ.ಅದರ ಫುಟೇಜ್ ನ್ನು ತೆಗೆದು ಪರಿಶೀಲಿಸಲಿ,ಕೆಂಪಣ್ಣ ಹೇಳುತ್ತಿರುವುದು ಕೂಡ ಅದೇ,ನಾನು ಗೊತ್ತಿಲ್ಲದೆ ಟಿಕೆಟ್ ಇಶ್ಯೂ ಮಾಡುವಾಗ ಮೈ ಕೈ ತಗುಲಿರಬಹುದೇ ವಿನಃ, ಪ್ರಜ್ಞಾಪೂರ್ವಕವಾಗಿ ಹಾಗೆ ಮಾಡಿಲ್ಲ..ನಾನು ತಪ್ಪು ಮಾಡಿರುವುದಕ್ಕೆ ಒಂದೇ ಒಂದು ಸಾಕ್ಷ್ಯ ಕೊಡಲಿ,ಅಲ್ಲೇ ಕುತ್ತಿಗೆ ಕೊಯ್ದುಕೊಂಡು ಸತ್ತೋಗುತ್ತೇನೆ ಎಂದು ಹೇಳುವಾಗ ಅದರ ಬಗ್ಗೆ ಸಾವಧಾನವಾಗಿ ಪರಿಶೀಲಿಸಿ  ಕ್ರಮ ಕೈಗೊಳ್ಳಬೇಕಿತ್ತೆನ್ನುತ್ತಾರೆ ಸಾರಿಗೆ ಸಿಬ್ಬಂದಿ. ನಮ್ಮ ಸಿಬ್ಬಂದಿಯನ್ನೇ ಕ್ರಿಮಿನಲ್ಸ್ ರೀತಿ ಟ್ರೀಟ್ ಮಾಡುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಅಧಿಕಾರಿಗಳು ಕೂಡ ನಮ್ಮ ಕಣ್ಣಿಗೆ ಸರ್ವಾಧಿಕಾರಿಗಳಂತೆ ಗೋಚರಿಸಲಾ ರಂಭಿಸಿದ್ದಾರೆ. ಮೊದಲು ನಮ್ಮವರ ಮೇಲೆ ನಂಬಿಕೆ ಬೆಳೆಸಿಕೊಳ್ಳಿ ಎನ್ನುವ ಕಿವಿ ಮಾತನ್ನೇಳ್ತಾರೆ ಸಾರಿಗೆ ಮುಖಂಡ ಆನಂದ್.

ತನಗೆ ನ್ಯಾಯ ಸಿಗಲೇಬೇಕು ಎಂದು ಕೆಂಪಣ್ಣ ಪಟ್ಟು ಹಿಡಿದಿದ್ದಾರೆ.ಅವರ ಪತ್ನಿ ವೀಣಾ ಹೋಗಿರುವ ಮಾನ ದೊರಕಿಸಿಕೊಡಬೇಕೆಂದು ಹಠ ಹಿಡಿದು ದೂರನ್ನು ಪೊಲೀಸ್ ಠಾಣೆಯಿಂದ ಹಿಡಿದು ಸರ್ಕಾರದ ಮಟ್ಟಕ್ಕೂ ತೆಗೆದುಕೊಂಡು ಹೋಗಿದ್ದಾರೆ. ಪೂರ್ವಾಪರ ವಿಚಾರಿಸದೆ ಪ್ರಭಾಕರ ರೆಡ್ಡಿ ಹಾಗೂ ರಮ್ಯ ಕೆಂಪಣ್ಣನನ್ನು ಅಮಾನತುಗೊಳಿಸಿ ಮನೆಗೆ ಕಳುಹಿಸಿದ್ದಾರೆ.ಈ ಕಾರಣಕ್ಕೆ ತಮ್ಮ ವಿರುದ್ದ ದೂರು ದಾಖಲಾಗುವಂತೆ ಮಾಡಿಕೊಂಡಿದ್ದಾರೆ.ಕೆಂಪಣ್ಣ ವರ್ಸಸ್  ಪ್ರಭಾಕರ ರೆಡ್ಡಿ+ ರಮ್ಯ ಮೇಡಮ್ ನಡುವಿನ ಹೋರಾಟ  ಯಾವ ಮಟ್ಟಕ್ಕೆ ಹೋಗುತ್ತೋ,ಯಾವೆಲ್ಲಾ ತಿರುವನ್ನು ಪಡೆಯುತ್ತೋ ಎನ್ನುವುದೇ ಸಧ್ಯದ ಕುತೂಹಲ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button