ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ
ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..?
ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ ಬಸ್ ಅನುಕೂಲ ಮಾಡಿ ಪುಣ್ಯ ಕಟ್ಟುಕೊಳ್ಳಿ ಎಂದು ವಿದ್ಯಾರ್ಥಿನಿ ಸಿಎಂಗೆ ಬರೆದ ಪತ್ರದಲ್ಲಿ ಕಳಕಳಿಯಿಂದ ವಿನಂತಿಸಿದ್ದಾಳೆ.
ಅಂದ್ಹಾಗೆ ಹೀಗೊಂದು ರೀತಿಯ ಪತ್ರ ಹಾಗೂ ಮನವಿಯನ್ನು ಮಾಡಿಕೊಂಡಾಕೆ ಹರ್ಷಿನ್ ವಿ.ವೈ…8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ.ಆಕೆ ವಾಸವಿರೋದು ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ.ಇದು ಬೆಂಗಳೂರು ನಗರ ದಿಂದ ಸುಮಾರು 25 ಕಿಲೋಮಿಟರ್ ದೂರವಿದೆ.ಇದರ ವ್ಯಾಪ್ತಿಯಲ್ಲೇ ಬಿಎಂಟಿಸಿ ವಾಯುವ್ಯ ವಿಭಾಗದ ಬಿಎಂಟಿಸಿ ಬಸ್ ಡಿಪೋ ಇದೆ.ಈ ಭಾಗದಿಂದ ಅನೇಕ ಕಡೆ ಬಸ್ ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ.ಆದರೆ ಇದರ ಅಕ್ಕಪಕ್ಕದಲ್ಲಿರುವ ವನಗನಹಟ್ಟಿ,,ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೆಹಳ್ಳಿಯಿಂದ ಬೆಂಗಳೂರಿಗೆ ಬಸ್ ಗಳ ವ್ಯವಸ್ಥೆಯೇ ಇಲ್ಲ.ಬೆಂಗಳೂರಿನಲ್ಲಿರುವ ಶಾಲಾ—ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ಬಾಲಕಿ ಹರ್ಷಿನ್ ಅಳಲು ತೋಡಿಕೊಂಡಿದ್ದಾಳೆ.
ಬಾಲಕಿ ಹರ್ಷಿನ್ ಳನ್ನು ಸಂಪರ್ಕಿಸಿದಾಗ ಬಸ್ ಗಳಿಲ್ಲದೆ ತನ್ನಂತೆ ಇತರೆ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾಲೆ.ನನ್ನಂತ 40-50 ಮಕ್ಕಳು ದಿನನಿತ್ಯ ಬೆಂಗಳೂರಿನ ನಾನಾ ಕಡೆ ಶಾಲೆ-ಕಾಲೇಜುಗಳಿಗೆ ಹೋಗುತ್ತಿದ್ದಾರೆ.ನಾವೆಲ್ಲಾ ಬಹುತೇಕ ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳು.ನಮಗೆ ಬಸ್ ಗಳನ್ನು ಬಿಟ್ಟರೆ ಬೇರೆ ರೀತಿಯ ಸಾರಿಗೆ ವ್ಯವಸ್ಥೆಯನ್ನು ಬಳಸುವಷ್ಟು ಆರ್ಥಿಕ ಸೌಲಭ್ಯವಿಲ್ಲ.ಬಸ್ ಗಳನ್ನೇ ಅವಲಂಭಿಸಬೇಕಾಗಿ ಬಂದಿದೆ.ಈ ಸಮಸ್ಯೆಯನ್ನು ಅನೇಕ ಬಾರಿ ಬಿಎಂಟಿಸಿ ಅಡಳಿತದ ಗಮನಕ್ಕೆ ತರಲಾಗಿದೆ.ಆದ್ರೆ ಕ್ರಮ ಮಾತ್ರ ಜಾರಿಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.
ಸೀಗೆಹಳ್ಳಿಯಿಂದ ಅನೇಕ ಕಡೆ ಬಸ್ ಗಳನ್ನು ಬಿಡಲಾಗುತ್ತಿದೆ.ಆದರೆ ಬಹುತೇಕ ಮಕ್ಕಳು ತೆರಳುವ ಶ್ರೀನಗರ ಬಸ್ ನಿಲ್ದಾಣಕ್ಕೆ ಬಸ್ ಗಳನ್ನು ಬಿಡಲಾಗುತ್ತಿಲ್ಲ.ಈ ಬಗ್ಗೆ ಹಿಂದೆನೇ ಮನವಿ ಮಾಡಲಾಗಿತ್ತಾದ್ರೂ ಬಿಎಂಟಿಸಿ ಅಧಿಕಾರಿಗಳು ತಲೆಕೆಡಿಸಿಕೊಳ್ಳಲೇ ಇಲ್ಲ.ಇಲ್ಲಿಂದ ರಾಯರ ದೇವಸ್ಥಾನಕ್ಕೆ ಗಂಟೆಗೊಂದು ಬಸ್ ವ್ಯವಸ್ಥೆ ಕಲ್ಪಿಸುವ ಬಿಎಂಟಿಸಿ ಅತ್ಯಧಿಕ ಮಕ್ಕಳು ತೆರಳುವ ಶ್ರೀನಗರಕ್ಕೆ ಬಸ್ ಗಳನ್ನೇಕೆ ಬಿಡುತ್ತಿಲ್ಲ.ನಮಗೆ ಬೇಕಿರುವುದು ಪ್ರಸಾದದ ಹಸಿವಲ್ಲ.ವಿದ್ಯೆಯ ಹಸಿವು.ಅದು ತಣಿಯಬೇಕೆಂದರೆ ತತ್ ಕ್ಷಣಕ್ಕೆ ಮೇಲ್ಕಂಡ ಪ್ರದೇಶಕ್ಕೆ ಬಸ್ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾಳೆ.
ಇದು ಕೇವಲ ನಮ್ಮಂತ ಹೆಣ್ಣುಮಕ್ಕಳ ಸಮಸ್ಯೆಯಲ್ಲ.ರಾಜ್ಯದ ನಾನಾ ಕಡೆ ಶಾಲೆಗಳಿಗೆ ತೆರಳುವ ಪ್ರದೇಶಗಳಲ್ಲಿ ಬಸ್ ಗಳ ವ್ಯವಸ್ಥೆಯಿಲ್ಲ.ಸಮಸ್ಯೆ ಹೀಗೆಯೇ ಮುಂದುವರೆಯುತ್ತಾ ಹೋದರೆ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅನೇಕ ಉನ್ನತ ಸ್ಥಾನಮಾನಗಳಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡೊ ಅವಕಾಶ ತಪ್ಪಿ ಹೋಗುತ್ತದೆ.ಈ ಸಮಸ್ಯೆಯನ್ನು ಆಧ್ಯತೆಯಾಗಿ ತೆಗೆದುಕೊಂಡು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಹರ್ಷಿನ್ ಮನವಿ ಮಾಡಿಕೊಂಡಿದ್ದಾಳೆ.
ಶಾಲಾ ಬಾಲಕಿ ಹರ್ಷಿನ್ ಮಾಡಿಕೊಂಡಿರುವ ಮನವಿ ಎಂಥವರನ್ನೂ ಮನಕಲಕುವಂತೆ ಮಾಡುತ್ತದೆ.ಎಲ್ಲರೂ ಏನೇನೋ ಸವಲತ್ತು ಕೇಳುವಾಗ ಶಾಲೆಗೆ ಹೋಗಲು ತನ್ನಂತೆಯೇ ಇರುವ ಅನೇಕ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಪಡುತ್ತಿರುವ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕವಾಗಿಯೂ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.ಸರ್ಕಾರಕ್ಕೆ ಹಾಗೂ ಬಿಎಂಟಿಸಿಗೆ ನಿಜಕ್ಕೂ ಕಳಕಳಿ-ಕಾಳಜಿ-ನೈತಿಕತೆ ಇದ್ದರೆ ಬಾಲಕಿ ಹರ್ಷಿನ್ ಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.ಇದಕ್ಕೆ ಯಾವ್ ರೀತಿಯ ಪ್ರತಿಕ್ರಿಯೆ ಸಿಗುತ್ತದೋ ಕಾದುನೋಡಬೇಕಿದೆ.