ಈ ಕನ್ನಡ ವಿರೋಧಿ IFS ರಮೇಶ್ ಕುಮಾರ್ ಬಗ್ಗೆ ಸರ್ಕಾರಕ್ಕೇಕೆ “ಮಮಕಾರ”..! “ಭ್ರಷ್ಟಾಚಾರ” ಆರೋಪವಿದ್ದಾಗ್ಯೂ ರಕ್ಷಿಸುತ್ತಿರೋದು ಯಾರು “ಸಚಿವ”ರೇ..?
ಬೆಂಗಳೂರು:ಅರಣ್ಯ ಇಲಾಖೆ ಇನ್ನೂ ಈ ಅಧಿಕಾರಿಯನ್ನು ಅದ್ಹೇಕೆ ಉಳಿಸಿಕೊಂಡಿದೆಯೋ ಅರ್ಥವಾಗುತ್ತಿಲ್ಲ.ಇಷ್ಟೊಂದು ಆರೋಪಗಳು ಬಂದ ಮೇಲೂ ಮುಜುಗರದಿಂದ ತಪ್ಪಿಸಿಕೊಳ್ಳಲಿಕ್ಕಾದ್ರೂ ಈ ಅಧಿಕಾರಿಯ ವಿರುದ್ಧ ಕ್ರಮಕ್ಕೋ..ತನಿಖೆಗೋ ಆದೇಶ ಕೊಡಬೇಕಿತ್ತು.ಆದರೆ ಅದ್ಯಾವುದನ್ನೂ ಮಾಡದೆ ದುಂಡಾವರ್ತನೆ ಮೆರೆಯೊಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅನೇಕ ಗುಮಾನಿ ಸೃಷ್ಟಿಸಿದೆ.
ಅಂದ್ಹಾಗೆ ರಮೇಶ್ ಕುಮಾರ್ ಐಎಫ್ ಎಸ್..ಬಂಡಿಪುರ ಅರಣ್ಯ ವಲಯದ ಮುಖ್ಯ ಅರಣ್ಯಾಧಿಕಾರಿ…ಈ ಅಧಿಕಾರಿ ವಿರುದ್ಧ ಕೇಳಿಬಂದ ಆರೋಪ ಒಂದಾ ಎರಡಾ..? ಅಧಿಕಾರ ದುರ್ಬಳಕೆ,ವ್ಯಾಪಕ ಭ್ರಷ್ಟಾಚಾರ, ಅನುದಾನ ದುರ್ವಿನಿಯೋಗ ,ಕರ್ತವ್ಯಲೋಪ…ಎಲ್ಲಕ್ಕಿಂತ ಹೆಚ್ಚಾಗಿ ಸಿಎಟಿಯಿಂದ ವರ್ಗಾವಣೆಗೆ ಆದೇಶ ಬಂದಾಗ್ಯೂ ಲಾಭಿ ಮಾಡಿ ಹುದ್ದೆಯಲ್ಲಿ ಮುಂದುವರೆದಿರುವಂಥ ಗಂಭೀರ ಆರೋಪ..ಆದ್ರೆ ಆಗಿರೋದೇನು..ಯಾವುದೇ ಆರೋಪಕ್ಕೆ ಕೇರ್ ಮಾಡದೆ ತನಗಿರುವ ರಾಜಕೀಯ ಶಿಫಾರಸ್ಸು ಬಳಸಿಕೊಂಡು ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ.ತಮ್ಮ ಆಟಾಟೋಪ ಮುಂದುವರೆಸಿದ್ದಾರೆ.
ಅಂದ್ಹಾಗೆ ರಮೇಶ್ ಕುಮಾರ್ ತಮಿಳುನಾಡು ಮೂಲದ IFS ಅಧಿಕಾರಿ.ಬಂಡಿಪುರಕ್ಕೆ ಬಂದಾಗಿನಿಂದಲೂ ಕೆಲಸ ಮಾಡಿದ್ದಕ್ಕಿಂತ ವಿವಾದದದಿಂದ ಸುದ್ದಿ ಮಾಡಿದ್ದೇ ಹೆಚ್ಚು,ತಮಿಳುನಾಡು ಬಂಡಿಪುರಕ್ಕೆ ಹೊಂದಿಕೊಂಡಿದೆ ಎನ್ನುವುದು ತನ್ನ ಬೇಳೆ ಬೇಯಿಸಿಕೊಳ್ಳೊಕ್ಕೆ ಹೇಳಿ ಮಾಡಿಸಿದೆಯಂತೆ. ತಮಿಳುನಾಡಿನ ಒಂದಷ್ಟು ರಾಜಕಾರಣಿಗಳ ಸಂಪರ್ಕವನ್ನೇ ಇಟ್ಟುಕೊಂಡು ಅದರಿಂದಲೇ ಗೂಟಾ ಹೊಡೆದುಕೊಂಡು ಕೂತಿದ್ದಾರೆ ಎನ್ನುವ ಆಪಾದನೆ ಅವರ ಮೇಲಿದೆ.ಸಿಎಟಿಯಿಂದ ವರ್ಗಾವಣೆ ಆದೇಶ ಬಂದರೂ ರಮೇಶ್ ಕುಮಾರ್ ಅದಕ್ಕೆ ಕ್ಯಾರೇ ಎಂದಿಲ್ಲ.ಪ್ರಶ್ನಿಸಿದ್ರೆ ಅವರ ವಿರುದ್ದ ಹರಿಹಾಯೋದು ಕರಗತ ಮಾಡಿಕೊಂಡಿದ್ದಾರೆ.
ರಮೇಶ್ ಕುಮಾರ್ ಬಂಡಿಪುರಕ್ಕೆ ಕಾಲಿಟ್ಟಾಗಿನಿಂದಲೂ ಎಲ್ಲರ ಪಾಲಿಗೂ ಪೀಡಕನಂತಾಗಿದ್ದಾರಂತೆ. ಕೆಳ ಹಂತದ ಅಧಿಕಾರಿಗಳನ್ನು ಕನಸಲ್ಲೂ ಕಾಡಲಾರಂಭಿಸಿದ್ದಾರಂತೆ.ಅದರಲ್ಲೂ ಕೆಳಹಂತದಲ್ಲಿರುವ ಆರ್ ಎಫ್ ಓ ಗಳು ಕನ್ನಡಿಗರಾಗಿದ್ದರಂತೂ ಅವರನ್ನು ಭಾಷೆ ಹಿಡಿದು ನಿಂದಿಸುತ್ತಿದ್ದಾರಂತೆ.ತಮಿಳುನಾಡಿನಿಂದ ಯಾರೇ ಬಂದರೂ ಅವರಿಗೆ ಎಲ್ಲಿಲ್ಲದ ಪ್ರೀತಿ ಆತ್ಮೀಯತೆ ತೋರಿಸುತ್ತಿದ್ದಾರಂತೆ.ಇದು ಕನ್ನಡದ ಅಧಿಕಾರಿಗಳ ಮನಸಲ್ಲಿ ಆಕ್ರೋಶ ಸೃಷ್ಟಿಸಿದೆ.ಇದೆಲ್ಲವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವಂತೆ.
ಇದೆಲ್ಲಕ್ಕಿಂತ ರಮೇಶ್ ಕುಮಾರ್ ವಿರುದ್ಧ ಕೇಳಿಬಂದಿರುವ ಅನುದಾನ ದುರ್ಬಳಕೆ ಆರೋಪ ಗಂಭೀರವಾಗಿದೆ.ಬಂಡಿಪುರ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನವನ್ನು ನಿಗಧಿತ ಕೆಲಸಕ್ಕೇ ಬಳಸಿಕೊಂಡಿಲ್ಲವಂತೆ.ಆ ಹಣವನ್ನು ಸ್ವಾಹ ಮಾಡಿಬಿಟ್ಟಿದ್ದಾರಂತೆ.ಟೆಂಡರ್ ಕರೆಯದೇನೇ ತಮಗಿಷ್ಟ ಬಂದ ಗುತ್ತಿಗೆದಾರರಿಗೆ ನೀಡಿ ಅದರಲ್ಲಿ ಕಿಕ್ ಬ್ಯಾಕ್ ತಿನ್ನುತ್ತಿದ್ದಾರೆನ್ನುವ ಆಪಾದನೆ ಮಾಡಿದ್ದಾರೆ ಆರ್ ಎಫ್ ಓಗಳು.
ಮಾದ್ಯಮಗಳಲ್ಲಿ ರಮೇಶ್ ಕುಮಾರ್ ವಿರುದ್ದ ವರದಿಗಳು ಪ್ರಸಾರವಾಗುತ್ತಿದ್ದಂತೆ ಗಾಢನಿದ್ರೆಯಲ್ಲಿದ್ದ ಸರ್ಕಾರ ಮತ್ತು ಅರಣ್ಯ ಸಚಿವರು ಎಚ್ಚೆತ್ತುಕೊಂಡಂತಿದೆ.ಸಚಿವ ಈಶ್ವರ ಖಂಡ್ರೆ ದಿಗ್ಗನೆ ಎದ್ದು,ಭ್ರಷ್ಟಾಚಾರ ಯಾರೇ ಮಾಡ್ಲಿ ಸಹಿಸುವ ಅಥವಾ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.ರಮೇಶ್ ಕುಮಾರ್ ವಿರುದ್ದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಅಂದ್ಹಾಗೆ ರಮೇಶ್ ಕುಮಾರ್ ವಿರುದ್ಧ ಕೇಳಿಬಂದಿರುವ ಆಪಾದನೆ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಬಗೆದಂತೆಲ್ಲಾ ಮತ್ತಷ್ಟು ಹಗರಣ-ಕರ್ಮಕಾಂಡ ಬಯಲಾಗುತ್ತಿದೆ.ಅದನ್ನು ಸರಣಿ ವರದಿಗಳ ಮೂಲಕ ಬಿಚ್ಚಿಡಬೇಕಾಗುತ್ತದೆ.ಏಕೆಂದರೆ ರಮೇಶ್ ಕುಮಾರ್ ಮಾಡಿದ್ದಾರೆನ್ನಲಾದ ಅಕ್ರಮಗಳು ಅಷ್ಟೊಂದಿವೆ.ಬೇರೆ ರಾಜ್ಯದ ಅಧಿಕಾರಿ ಈ ಮಟ್ಟಕ್ಕೆ ಬೆಳೆದು ಕನ್ನಡದ ಅಧಿಕಾರಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳೊಕ್ಕೆ ನಮ್ಮ ಆಡಳಿತ ಬಿಟ್ಟಿರುವುದೇ ದೊಡ್ಡ ತಪ್ಪು..ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಪ್ರಶ್ನಿಸಲು ಇದೀಗ ಕನ್ನಡಪರ ಸಂಘಟನೆಗಳು ಪ್ರಶ್ನಿಸಿ ಹೋರಾಟ ನಡೆಸಲಿಕ್ಕೆ ಮುಂದಾಗಿವೆ.ಸಂವೇದನೆ ಕಳೆದುಕೊಂಡಿರುವ ಸರ್ಕಾರಕ್ಕೆ ಚುರುಕು ಆಗಲಾದರೂ ಮುಟ್ಟುತ್ತಾ ಕಾದುನೋಡಬೇಕು.