ಕನ್ನಡ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಕಿರಣ್(ಚಿಕ್ಕಣ್ಣ) ಅಸಹಜ ಸಾವು..?!
ಬೆಂಗಳೂರು: ಕನ್ನಡದ ಹಲವು ನ್ಯೂಸ್ ಚಾನೆಲ್ ಗಳಲ್ಲಿ ಹಿರಿಯ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದ ಕಿರಣ್ ಕುಮಾರ್ ಬೆಂಗಳೂರು ಹೊರವಲಯದ ಕಡಬಗೆರೆಯ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಸಣ್ಣ ಪ್ರಾಯದಲ್ಲೇ ಅಸಹಜ ಸಾವಿಗೆ ತುತ್ತಾಗಿರುವುದಕ್ಕೆ ದಿಗ್ಬ್ರಾಂತಿ ವ್ಯಕ್ತವಾಗಿದೆ.
ಮೂಲತಃ ಕೆ.ಆರ್ ಪೇಟೆಯವರಾದ ಕಿರಣ್ ಬಿ.ಜೆ. ದಶಕಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.ಕಸ್ತೂರಿಯಿಂದ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಆರಂಭಿಸಿದ್ದರು.ನಂತರ ಪ್ರಜಾ ಟಿವಿ, ನ್ಯೂಸ್-18 ಕನ್ನಡದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಿದ್ದರು.ಅನಿವಾರ್ಯ ಕಾರಣಗಳಿಂದ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಬೇಕಾಗಿ ಬಂದಾಗ ಅಲ್ಲಿಗೂ ತೆರಳಿ ಕೆಲಸ ಮಾಡಿದ್ದರು.ನಂತರ ಬೆಂಗಳೂರಿಗೆ ಬಂದು ಪಬ್ಲಿಕ್ ಟಿವಿಯಲ್ಲಿ ಹಿರಿಯ ಕ್ಯಾಮೆರಾಮನ್ ಆಗಿ ಕೆಲಸಕ್ಕೆ ಸೇರಿದ್ದರು.ಆದರೆ ಕಳೆದೊಂದು ವರ್ಷದಿಂದೆ ಪಬ್ಲಿಕ್ ಟಿವಿಯನ್ನು ತೊರೆದು ತಮ್ಮದೇ ಸ್ವಂತ ದುಡಿಮೆ ಆರಂಭಿಸಿದ್ದರು.
ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ವಿವಾಹವಾಗಿತ್ತು ಎನ್ನಲಾಗಿದೆ.ಪತ್ನಿ ಸಮೇತ ಬೆಂಗಳೂರಿನ ಕಡಬಗೆರೆಯಲ್ಲಿ ವಾಸವಾಗಿದ್ದ ಕಿರಣ್ ಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ.ಆದ್ರೆ ವೈಯುಕ್ತಿಕವಾಗಿ ಇತ್ತೀಚೆಗೆ ತುಂಬಾ ತಳಮಳಕ್ಕೀಡಾದಂತಿದ್ದರೆನ್ನುವುದು ಅವರನ್ನು ಹತ್ತಿರದಿಂದ ಕಂಡವರ ಮಾತು.ನಿನ್ನೆ ರಾತ್ರಿ ಬಹಳ ಹೊತ್ತು ಸ್ನೇಹಿತರ ಜತೆ ಹರಟಿ ಮೊಬೈಲ್ ಕಟ್ ಮಾಡಿದ್ದಾರೆ.ಬೆಳಗ್ಗೆ ಎಂದಿನಂತೆ ಮನೆಯವರು ಎದ್ದು ಕಿರಣ್ ರೂಮಿನ ಬಾಗಿಲನ್ನು ತಟ್ಟಿದ್ದಾರೆ.ಆದರೆ ಬಾಗಿಲು ತೆರೆಯದೆ ಇದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಫ್ಯಾನ್ ಗೆ ಬಟ್ಟೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವುದು ಗಮನಕ್ಕೆ ಬಂದಿದೆ.ತಕ್ಷಣಕ್ಕೆ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ.ತಾವರಕೆರೆ ಪೊಲೀಸರು ಸ್ಥಳಕ್ಕೆ ಬಂದು ನೇತಾಡುತ್ತಿದ್ದ ಶವವನ್ನು ಕೆಳಕ್ಕೆ ಇಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿರಣ್ ಆತ್ಮಹತ್ಯೆಯ ವೀಡಿಯೋ ಹಾಗೂ ಫೋಟೋಗಳನ್ನು ಗಮನಿಸಿದಾಗ( ಕಾರಣಾಂತರಗಳಿಂದ ಅವನ್ನು ಇಲ್ಲಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ) ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನ ಕಾಡುವುದು ಸಹಜ.ಆತ್ಮಹತ್ಯೆ ಮಾಡಿಕೊಂಡ ಕಾಲುಗಳು ನೆಲಕ್ಕೆ ತಾಕುತ್ತಿದ್ದು ಅದ್ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.ಪೊಲೀಸರಿಗೂ ಕೂಡ ಇದೇ ಅನುಮಾನ ಕಾಡುತ್ತಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಕೌಟುಂಬಿಕವಾಗಿ ಒಂದಷ್ಟು ಸಮಸ್ಯೆಗಳನ್ನು ಕಿರಣ್ ಎದುರಿಸುತ್ತಿದ್ರು ಎಂದು ಆತ್ಮೀಯರು ಹೇಳಿದ್ದಾರೆ.ಕಿರಣ್ ಕೂಡ ಇದನ್ನು ತಮ್ಮ ಸ್ನೇಹಿತರ ಬಳಿ ತೋಡಿಕೊಂಡಿದ್ದರು ಎನ್ನಲಾಗಿದೆ.ಅದೇನೇ ಆಗಲಿ ಎಲ್ಲಾ ಸಮಸ್ಯೆಗೂ ಪರಿಹಾರ ಎನ್ನುವುದು ಇರುವಾಗ ದುಡುಕಿ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತವೇ ಸರಿ..ಚಾನೆಲ್ ಗಳಲ್ಲಿ ಕೆಲಸ ಮಾಡುವಾಗ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಸ್ನೇಹಮಯಿ ವ್ಯಕ್ತಿಯಾಗಿದ್ದ ಕಿರಣ್ ತಾನಾಯ್ತು ತನ್ನ ಕೆಲಸವಾಯ್ತು ಎಂದುಕೊಂಡಿದ್ದ ನಿರ್ಲಿಪ್ತ ಜೀವಿ.ಯಾರಿಗೂ ತೊಂದರೆ ಮಾಡದ ನಿರುಪದ್ರವಿ. ಇಂಥಾ ಸ್ನೇಹಜೀವಿ-ನಿರುಪದ್ರವಿಯ ಬದುಕು ಹೀಗೆ ಕೊನೆಯಾಗಿದ್ದು ದುರಂತವೇ ಸರಿ.. ಕಿರಣ್ ಅಕಾಲಿಕ ಸಾವಿಗೆ ಕ್ಯಾಮೆರಾಮನ್ ಬಳಗ ಸಂತಾಪ ಸೂಚಿಸಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಕಿರಣ್ ಅಗಲಿಕೆಗೆ ವಿಷಾದ ವ್ಯಕ್ತಪಡಿಸುತ್ತದೆ.