EVEN DEEPAVALI CRACKERS MENACE POLLUTION DECREASE…! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ವಾಯುಮಾಲಿನ್ಯ ವಾಗಿಲ್ವಂತೆ..?!
ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(POLLUTION CONTROLE BOARD) ಕೊಟ್ಟಿರುವ ವಿವರಣೆಯನ್ನು ನಂಬಬೇಕೋ..ಬಿಡಬೇಕೋ ಗೊತ್ತಾಗ್ತಿಲ್ಲ. ವಾಯುಮಾಲಿನ್ಯ(AIR POLLUTION) ಹಾಗೂ ಶಬ್ದ ಮಾಲಿನ್ಯ(NOISE POLLUTION) ವನ್ನು ಮಾನಿಟರ್ ಮಾಡುವ ಯಂತ್ರಗಳೇ ತಾಂತ್ರಿಕವಾಗಿ ಹಾಳಾಗಿವೆಯೇ..? ಅಥವಾ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ..? ಅಥವಾ ದೋಷಪೂರಿತವಾದ ಮಾಹಿತಿ ಕೊಡುತ್ತಿವೆಯೋ..ಒಂದೂ ಗೊತ್ತಾಗ್ತಿಲ್ಲ.ಏಕೆಂದರೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಲ್ಲಿ ಪಟಾಕಿ(CRACKERS) ಸಿಡಿಸಲಾಗಿದ್ದರೂ ವಾಯುಮಾಲಿನ್ಯ ಕಳೆದ ಬಾರಿಗಿಂತ ಬಹುತೇಕ ಈ ಬಾರಿ ಕಡಿಮೆಯಾಗಿದೆಯಂತೆ.ಇದನ್ನು ಸ್ವತಹ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳ್ತಿದೆ.
ಪಟಾಕಿ ಸಿಡಿಸುವ ಮುನ್ನ ಎಚ್ಚರ…ಹೆಚ್ಚು ಪಟಾಕಿ ಸಿಡಿಸಿ ಪರಿಸರ ಹಾಳು ಮಾಡಬೇಡಿ…ಹಸಿರು ಪಟಾಕಿಯನ್ನೇ ಸಿಡಿಸಿ…ರಾತ್ರಿ ನಿಗಧಿತ 2 ಗಂಟೆಗಳಲ್ಲಷ್ಟೇ ಪಟಾಕಿ ಹೊಡೆಯಿರಿ…ಕಳೆದ ಬಾರಿಯ ದೀಪಾವಳಿ(DEEPAVALI) ವೇಳೆ ಈ ರೀತಿಯ ಜಾಗೃತಿದಾಯಕ ಸಂದೇಶಗಳು ರಾರಾಜಿಸಿದ್ದವು.ಅದಕ್ಕೆ ಹೋಲಿಸಿದ್ರೆ ಈ ಬಾರಿ ಅಂಥಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದಿದ್ದು ತೀರಾ ಕಡಿಮೆ.ಪರಿಸರ ಸಚಿವ ಈಶ್ವರ ಖಂಡ್ರೆ(ENVIORNMENT MINISTER ESHWAR KHANDRE) ವಿಕಾಸಸೌಧದ ಕಚೇರಿಯಲ್ಲಿ ಕುತ್ಕೊಂಡು ಒಂದು ಪ್ರೆಸ್ ಮೀಟ್…ಪೇಪರ್-ಟಿವಿಗಳಲ್ಲಿ ಪ್ರಸಾರವಾದ ಜಾಹಿರಾತಿನಲ್ಲಿ ಸಂದೇಶ ನೀಡಿದ್ದನ್ನು ಬಿಟ್ಟರೆ ಸರ್ಕಾರದಿಂದಾಗಲಿ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಾಗಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸಗಳಾಗಿದ್ದುದು ಕಡಿಮೆನೇ..ದೀಪಾವಳಿ ಹಿಂದೆ ಮುಂದೆ ಸಿಡಿಸಿದ ಪಟಾಕಿ ಅದರಿಂದ ದಟ್ಟೈಸಿದ ಹೊಗೆ, ಉತ್ಪತ್ತಿಯಾದ ಪಟಾಕಿ ಕಸ, ಶಬ್ದಕ್ಕೆ ಹೆದರಿ ಊರುಬಿಟ್ಟ ಬೀದಿನಾಯಿಗಳ ಚಿತ್ರಣವೇ ಇದನ್ನು ಸಾರಿ ಸಾರಿ ಹೇಳುತ್ತಿತ್ತು.ಈ ಹಿನ್ನಲೆಯಲ್ಲಿ ನೋಡುವುದಾದ್ರೆ ಮಾಲಿನ್ಯ ತಡೆಗಟ್ಟುವ ಕೆಲಸದಲ್ಲಿ ಪರಿಸರ ನಿಯಂತ್ರಣ ಮಂಡಳಿಯಷ್ಟೇ ನಿರ್ಣಾಯಕ ಪಾತ್ರ ವಹಿಸುವ ಬಿಬಿಎಂಪಿ, ಪೊಲೀಸ್, ಕಂದಾಯ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೆ ದೊಡ್ಡ ಮಟ್ಟದ ವೈಫಲ್ಯ ಅನುಭವಿಸಿದವೆನ್ನುವುದು ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ನೇರ ಆರೋಪ.
ಪರಿಸರದ ಕಾಳಜಿಯನ್ನೇ ಮರೆತುಬಿಟ್ರಾ ಸಚಿವ ಈಶ್ವರ ಖಂಡ್ರೆ :ಆರಂಭದಲ್ಲಿ ಪರಿಸರ ಹಾಗೂ ಅರಣ್ಯ ಖಾತೆ ವಹಿಸಿಕೊಂಡಾಗ ಸಚಿವ ಈಶ್ವರ ಖಂಡ್ರೆ ಅಬ್ಬರಿಸಿದ್ದು..ಹೌಹಾರಿದ್ದು ನೋಡಿದ್ರೆ ನಿಜಕ್ಕೂ ಎಲ್ಲರಲ್ಲೂ ಏನಾದರೊಂದು ಒಳ್ಳೇದಾಗಬಹುದು ಎನ್ನುವ ನಿರೀಕ್ಷೆ ಮೂಡಿತ್ತು.ಆದರೆ ಅವರ ಹಣೆಬರಹ ಗೊತ್ತಾಗಲು ಹೆಚ್ಚು ದಿನ ಬೇಕಾಗಲೇ ಇಲ್ಲ.ಕೇವಲ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಕುತ್ಕೊಂಡು ಅಧಿಕಾರಿಗಳ ಮೀಟಿಂಗ್ ಮಾಡಿದ್ದನ್ನು ಬಿಟ್ಟರೆ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯ-ಕ್ರೌರ್ಯಕ್ಕೆ ಬ್ರೇಕ್ ಹಾಕಲು ಆಗಲೇ ಇಲ್ಲ.ಗಣೇಶ ಹಬ್ಬದ ವೇಳೆ ಪಿಓಪಿ ಗಣೇಶಗಳ ಅಬ್ಬರಕ್ಕೆ ಬ್ರೇಕ್ ಹಾಕಲಿಕ್ಕೂ ಖಂಡ್ರೆ ಅವರಿಗೆ ಆಗಲಿಲ್ಲ..ಬಹಳ ನೊಂದುಕೊಂಡು ಹೇಳಬೇಕಾದ ವಿಚಾರ ಎಂದ್ರೆ ಪಿಓಪಿ ಗಣೇಶಗಳಿಂದ ಪ್ರಕೃತಿ ಮೇಲೆ ನಡೆದ ದೌರ್ಜನ್ಯಕ್ಕೆ ಮಿನಿಸ್ಟರ್ ಕೂಡ ನೈತಿಕವಾಗಿ ಹೊಣೆಯಾಗುತ್ತಾರೆ.ಅವರ ನಿರ್ಲಕ್ಷ್ಯದ ಪರಂಪರೆ ದೀಪಾವಳಿಯಲ್ಲೂ ಮುಂದುವರೆದ್ದು ದುರಾದೃಷ್ಟಕರ. ದೀಪಾವಳಿ ವೇಳೆ ಪರಿಸರ ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಎನ್ನುವುದರ ಬಗ್ಗೆ ಗಂಭೀರವಾದ ಚರ್ಚೆ ಅಥವಾ ಕ್ರಮಗಳನ್ನೇ ಕೈಗೊಳ್ಳಲಿಲ್ಲ ಸಚಿವ ಖಂಡ್ರೆ.ಅವರ ಈ ನಿರ್ಲಕ್ಷ್ಯದಿಂದಲೇ ಎಲ್ಲಾ ಮಾನದಂಡಗಳನ್ನು ರಾಜಾರೋಷವಾಗಿಯೇ ಉಲ್ಲಂಘಿಸಿ ದೀಪಾವಳಿಯನ್ನು ಜನ ಆಚರಿಸಿದ್ರು..ದೀಪಾವಳಿಯ ಮಾಲಿನ್ಯದಿಂದ ಪರಿಸರದ ಮೇಲೆ ಆಗಿರಬಹುದಾದಂಥ ದೌರ್ಜನ್ಯ-ಕ್ರೌರ್ಯದಲ್ಲೂ ಮಂತ್ರಿ ಖಂಡ್ರೆ ಅವರ ಪಾಲಿರುವುದು ಕೂಡ ಅಷ್ಟೇ ಸತ್ಯ..ಖಂಡ್ರೆ ಅವರ ನಡೆ ಪರಿಸರವಾದಿಗಳಲ್ಲಂತೂ ವ್ಯಾಪಕ ಆಕ್ರೋಶ ಮೂಡಿಸಿದೆ.
ಮಾದ್ಯಮಗಳಲ್ಲಿ ಬಿಟ್ಟರೆ ಸಾರ್ವಜನಿಕವಾಗಿ ಪಟಾಕಿ ಸಿಡಿಸುವ ಮುನ್ನ ಎಚ್ಚರ…ಹೆಚ್ಚು ಪಟಾಕಿ ಸಿಡಿಸಿ ಪರಿಸರ ಹಾಳು ಮಾಡಬೇಡಿ…ಹಸಿರು ಪಟಾಕಿಯನ್ನೇ ಸಿಡಿಸಿ…ರಾತ್ರಿ ನಿಗಧಿತ 2 ಗಂಟೆಗಳಲ್ಲಷ್ಟೇ ಪಟಾಕಿ ಹೊಡೆಯಿರಿ ಎಂದು ಜಾಗೃತಿ ಮೂಡಿಸುವ ಕೆಲಸಗಳೇ ಬಹಿರಂಗವಾಗಿ ಕಾಣಿಸಲಿಲ್ಲ.ಹಾಗಾಗಿಯೇ ಅನಿಯಂತ್ರಿತವಾಗಿ ಪಟಾಕಿಗಳು ಮಾರಾಟವಾದವು ಹಾಗೆಯೇ ಸಿಡಿಸಲ್ಪಟ್ಟವೆನ್ನುವುದು ಕೂಡ ಸತ್ಯ.ಇದೆಲ್ಲದರ ಪರಿಣಾಮವಾಗೇ ಎಲ್ಲರೂ ನಿರೀಕ್ಷಿಸಿದಂತೆ..ಲೆಕ್ಕಾಚಾರ ಹಾಕಿದಂತೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಹೆಚ್ಚಾಗಿರಬೇಕಿತ್ತು.ಆದರೆ ಜನರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡುವಂತ ಸಂಗತಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ.
ವಾಯುಮಾಲಿನ್ಯದ ಪ್ರಮಾಣವನ್ನು ಅಳೆಯುವ 11 ಮಾಪನ ಕೇಂದ್ರಗಳಿವೆ.ಈ 11 ಸ್ಟೇಷನ್ ಗಳ 7 ಕಡೆ ವಾಯುಮಾಲಿನ್ಯ ಕಡಿಮೆಯಾಗಿದ್ದರೆ 4 ಕಡೆ ವಾಯುಮಾಲಿನ್ಯ ಹೆಚ್ಚಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.ಅವರು ನೀಡಿರುವ ಅಂಕಿಅಂಶಗಳ ಪ್ರಕಾರವೇ ಸಿಟಿ ರೈಲ್ವೆ ನಿಲ್ದಾಣದಲ್ಲಿ 2023 ರ ಅಂಕಿಅಂಶಗಳ ಪ್ರಕಾರ ವಾಯುಮಾಲಿನ್ಯದ ಪ್ರಮಾಣ 113 ರಷ್ಟಿದ್ದು ಅದರ ಪ್ರಮಾಣ 2024 ರಲ್ಲಿ 124ಕ್ಕೆ ಏರಿದೆ.ಹಾಗೆಯೇ ಸಾಣೆಗೊರವನಹಳ್ಳಿ ವ್ಯಾಪ್ತಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಕಳೆದ ವರ್ಷ 94 ರಷ್ಟಿತ್ತು.ಆದರೆ ಈ ಬಾರಿ 82ಕ್ಕೆ ಕುಸಿದಿದೆ. ಹೆಬ್ಬಾಳದಲ್ಲಿ 2023 ರಲ್ಲಿ ವಾಯುಮಾಲಿನ್ಯದ ಪ್ರಮಾಣ 173 ರಷ್ಟಿತ್ತು.2024 ರಲ್ಲಿ 185ಕ್ಕೆ ಏರಿದೆ. ಜಯನಗರ ವ್ಯಾಪ್ತಿಯಲ್ಲಿ 2023 ರಲ್ಲಿ 234 ರಷ್ಟಿದ್ದ ವಾಯುಮಾಲಿನ್ಯ 2024 ರಲ್ಲಿ 112ಕ್ಕೆ ಇಳಿದಿದೆ. ಕವಿಕಾ ವ್ಯಾಪ್ತಿಯಲ್ಲಿ 2023 ರಲ್ಲಿ ವಾಯುಮಾಲಿನ್ಯ 201 ರಷ್ಟಿತ್ತು.2024 ರಲ್ಲಿ ಅದರ ಪ್ರಮಾಣ 103ಕ್ಕೆ ಇಳಿದಿದೆ.
ಇನ್ನು ನಿಮ್ಹಾನ್ಸ್ ವ್ಯಾಪ್ತಿಯಲ್ಲಿ ಕಳೆದ ವರ್ಷ 171 ರಷ್ಟಿದ್ದ ವಾಯುಮಾಲಿನ್ಯ ಪ್ರಮಾಣ 2024 ರಲ್ಲಿ 84ಕ್ಕೆ ಕುಸಿದಿದೆ. ಪೀಣ್ಯಾ ದಲ್ಲಿ 2023 ರಲ್ಲಿ ವಾಯುಮಾಲಿನ್ಯ 111 ರಷ್ಟಿತ್ತು.ಆದರೆ ಈ ಬಾರಿ 145ಕ್ಕೆ ಏರಿದೆ. ಜಿಗಣಿ ವ್ಯಾಪ್ತಿಯಲ್ಲಿ ಕಳೆದ ವರ್ಷ ವಾಯುಮಾಲಿನ್ಯದ ಪ್ರಮಾಣ 144 ರಷ್ಟಿತ್ತು.ಆದರೆ ಈ ಬಾರಿ ಅದರ ಪ್ರಮಾಣ 136ಕ್ಕೆ ಇಳಿದಿದೆ. ಆರ್ ವಿ ಕಾಲೇಜ್ ವ್ಯಾಪ್ತಿಯಲ್ಲಿ 2023 ರಲ್ಲಿ ವಾಯುಮಾಲಿನ್ಯದ ಪ್ರಮಾಣ 156 ರಷ್ಟಿತ್ತು ಆದರೆ ಈಗ 97 ರಷ್ಟಾಗಿದೆ. ಅಂದರೆ ಅಗಾಧ ಪ್ರಮಾಣದ ಇಳಿಕೆ ಕಂಡುಬಂದಿದೆ. ಕಸ್ತೂರಿನಗರದಲ್ಲಿ ಕಳೆದ ವರ್ಷ ವಾಯುಮಾಲಿನ್ಯದ ಪ್ರಮಾಣ 124 ರಷ್ಟಿತ್ತು ಈ ವರ್ಷ 144 ರಷ್ಟಿದೆ.ಅಂದರೆ ಮಾಲಿನ್ಯ ಹೆಚ್ಚಿದೆ.ಪೀಣ್ಯಾ ವ್ಯಾಪ್ತಿಯಲ್ಲಿ ಕಳೆದ ವರ್ಷ ವಾಯುಮಾಲಿನ್ಯದ ಪ್ರಮಾಣ 107 ರಷ್ಟಿತ್ತು.ಆದರೆ ಈ ವರ್ಷ 145 ರಷ್ಷಾಗಿದೆ.ಅಂದರೆ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳ ಅಬ್ಬರವನ್ನು ಗಮನಿಸಿದವರಿಗೆ ಈ ಅಂಕಿಅಂಶಗಳು ಕೊಂಚ ಆಶ್ಚರ್ಯ ಹಾಗು ಅನುಮಾನ ಹುಟ್ಟಿಸಿವೆ.ಕಳೆದ ಕೆಲ ವರ್ಷಗಳ ದೀಪಾವಳಿಯನ್ನು ಈ ಬಾರಿಯ ದೀಪಾವಳಿಗೆ ಹೋಲಿಸಿದ್ರೆ ಭಾರೀ ಪ್ರಮಾಣದ ಪಟಾಕಿಗಳನ್ನು ಸುಡಲಾಗಿದೆ.ಹಬ್ಬದ ಕಸ ಎಲ್ಲೆಲ್ಲೂ ರಾರಾಜಿಸ್ತಿದೆ.ಪಟಾಕಿಗಳಿಂದ ಹೊರಹೊಮ್ಮುತ್ತಿದ್ದ ವಿಷಕಾರಿ ರಸಾಯನಿಕ ಗಾಳಿ ಸೇವಿಸ್ಲಿಕ್ಕಾಗದೆ ಮನೆಯಲ್ಲೇ ಉಳಿದವರು ಅದೆಷ್ಟೋ ಲಕ್ಷ..ಇಷ್ಟೊಂದು ಮಾಲಿನ್ಯವಾಗುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿಯವರು ಏನ್ ಮಾಡ್ತಿದ್ದಾರೋ ಎಂದು ನಾಗರಿಕರೇ ಹಿಡಿಶಾಪ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು.ಅಂತದ್ದರ ನಡುವೆ ಈ ಬಾರಿ ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿರುವುದು ಆಶ್ಚರ್ಯವನ್ನುಂಟುಮಾಡಿದೆಯಂತೆ.
ವಾಯುಮಾಲಿನ್ಯವನ್ನು ಮಾಪನ ಮಾಡುವ ಯಂತ್ರಗಳಲ್ಲೇ ಏನಾದ್ರೂ ತಾಂತ್ರಿಕ ದೋಷಗಳಿವೆಯಾ..? ಅಥವಾ ಅದು ತಪ್ಪಾದ ಮಾಹಿತಿ ಕೊಡುತ್ತಿದೆಯಾ..? ಅಥವಾ ಮಂಡಳಿ ಅಧಿಕಾರಿಗಳೇ ಸುಳ್ಳು ಮಾಹಿತಿ ಕೊಡುತ್ತಿದ್ದಾರಾ ಎನ್ನುವಂತ ಚರ್ಚೆಗಳು ಕೂಡ ಶುರುವಾಗಿವೆ.ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳ ಅಬ್ಬರವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಮಂಡಳಿಯ ಅಂಕಿಅಂಶಗಳ ಬಗ್ಗೆ ಸಂಶಯ ಮೂಡುವುದಂತೂ ಸತ್ಯ.