ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!
“ಗುರು ಒಬ್ಬ ವ್ಯಸನಿ….ಆತನಲ್ಲಿ ಸೃಜನಶೀಲತೆಯೇ ಸತ್ತೋಗಿತ್ತು..ನನ್ನಿಂದ ಕೆಟ್ಟ ಸಿನೆಮಾ ಮಾಡಿಸಿದಾತ..ಎಂದು ಹೇಳಿದ್ದ ಜಗ್ಗೇಶ್.”ಸಾವನ್ನು ಯಾರೂ ಸಂಭ್ರಮಿಸಬಾರದು..ಸತ್ತವರ ಬಗ್ಗೆ ಅವರ ನೆಗೆಟಿವ್ಸ್ ಏನೇ ಇರಲಿ ಅದನ್ನು ಪರಾಮರ್ಷೆ ಮಾಡಿ,ಹೀಯಾಳಿಸಬಾರದು ಎನ್ನುತ್ತಾರೆ ಹಿರಿಯರು ಹಾಗೂ ಅನುಭಾವಿಗಳು..
ಅವರ ಮಾತನ್ನು ಪರಿಗಣಿಸುವುದೇ ಆದಲ್ಲಿ,ಜಗ್ಗೇಶ್ ಅವರಂಥ ಹಿರಿಯ ನಟರ ಬಾಯಲ್ಲಿ ಇಂಥಾ ಮಾತುಗಳು ಬರಬಾರದಿತ್ತು..ಹೀಗೆ ನನಗಷ್ಟೇ ಅಲ್ಲ,ನನ್ನಂತ ಎಷ್ಟೋ ಜನರಿಗೆ ಎನ್ನಿಸಿದರೂ ತಪ್ಪಿಲ್ಲ..
ಕನ್ನಡದ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಮೊದಲು ಚಾನೆಲ್ ಗಳು ಮಾತನಾಡಿಸಿದ್ದೇ ನಟ ಜಗ್ಗೇಶ್ ಅವರನ್ನು..ಆರಂಭದಲ್ಲಿ ಸಹಾನುಭೂತಿ ಧ್ವನಿಯಲ್ಲೇ ಮಾತನಾಡಿದ ಜಗ್ಗೇಶ್ ನಂತರ ಆಡಿದ ಮಾತುಗಳು ನಿಜಕ್ಕೂ ಇಂಥಾ ಸಂದರ್ಭದಲ್ಲಿ ಬೇಡವಿತ್ತೇನೋ ಎಂದೆನಿಸಿದ್ದು ಸತ್ಯ..
ಗುರುಪ್ರಸಾದ್ ಅವರ ನೆಗೆಟಿವ್ಸ್ ನ್ನೇ ಟಾರ್ಗೆಟ್ ಮಾಡಿ ಮಾತನಾಡಿದಂತಿತ್ತು ಜಗ್ಗೇಶ್ ಮಾತಿನ ಲಹರಿ…ಅವರ ಆರೋಪದ ಮಾತುಗಳನ್ನು ಕೇಳೋರಿಗೆ ಗುರುಪ್ರಸಾದ್ ಪ್ರತಿಭಾವಂತ ನಿರ್ದೇಶಕನೇ ಅಲ್ವಾ ಎಂಬ ಶಂಕೆ ಕಾಡಿದ್ದರೂ ಆಶ್ಚರ್ಯವಿಲ್ಲ..
ಗುರುಪ್ರಸಾದ್ ಮೈಗಳ್ಳನಾಗಿದ್ದ..ಕುಡಿತದ ದಾಸನಾಗಿದ್ದ.. ಮೊದಲ ಪತ್ನಿಯಿಂದ ದೂರವಾಗಿ ಎರಡನೇ ಮದುವೆಯಾಗಿದ್ದ..ಸ್ಕ್ರಿಪ್ಟ್ ತರುತ್ತಿದ್ದ ಕೈಗಳಲ್ಲಿ ಎಣ್ಣೆ ಬಾಟಲಿ ಇಟ್ಕೊಂಡು ಬರುತ್ತಿದ್ದ..ಒಳ್ಳೊಳ್ಳೆ ಹಿಟ್ ಸಿನೆಮಾಗಳನ್ನು ಬ್ಯಾಕ್ ಟು ಬ್ಯಾಕ್ ಕೊಟ್ಟ ನನ್ನನ್ನು ರಂಗನಾಯಕದಂಥ ಕೆಟ್ಟ ಸಿನೆಮಾದಲ್ಲಿ ನಟಿಸುವಂತೆ ಮಾಡಿ ನನ್ನ ಕೆರಿಯರ್ರನ್ನೇ ಹಾಳು ಮಾಡಿದ..ಆತ ಆರ್ ಎಸ್ ಎಸ್ ವಿರೋಧಿಯಾಗಿದ್ದ..ನನ್ನ ಮಾನ ತೆಗೆಯಬೇಕೆಂದಿದ್ದ..ಹೀಗೆ ಆರೋಪದ ಸರಣಿ ಮುಂದುವರೆಯುತ್ತಲೇ ಇತ್ತು..
ಗುರುಪ್ರಸಾದ್ ಅವರ ಬಗ್ಗೆ ಆರೋಪ ಮಾಡುವ ಭರಾಟೆಯಲ್ಲಿ, ರಂಗನಾಯಕಕ್ಕಿಂತ ಕೆಟ್ಟ ಸಿನೆಮಾ ಮಾಡಿ ವೃತ್ತಿ ಜೀವನವನ್ನೇ ಹಳ್ಳ ಹಿಡಿಸಿಕೊಂಡ ದಿನಗಳು ಜಗ್ಗೇಶ್ ಗೆ ನೆನಪಾಗಲೇ ಇಲ್ವಾ..?
ಹಳ್ಳ ಹಿಡಿದ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿದ ಚಿತ್ರಗಳನ್ನು ಜಗ್ಗೇಶ್ ಗಾಗಿಯೇ ಮಾಡಿದ ದಿನಗಳು ನೆನಪಾಗಲಿಲ್ಲವೇ..?
ನನ್ನ ವೃತ್ತಿಜೀವನಕ್ಕೆ ಮರುಹುಟ್ಟು ನೀಡಿದ ಮಹಾತ್ಮ ಈ ಗುರುಪ್ರಸಾದ್ ಎಂದು ಹಾಡಿ ಹೊಗಳಿದ್ದ ದಿನಗಳು ನೆನಪಾಗಲಿಲ್ಲವೇ..?
ಗುರುವಿನ ಕೆಪಾಸಿಟಿ.ಸೃಜನಶೀಲತೆ..ಸಾಮರ್ಥ್ಯ ನನಗೆ ಗೊತ್ತಿದೆ..ಆತ ಯಾವತ್ತೂ ನನಗೆ ಮೋಸ ಮಾಡಲಾರ ಆತನ ಜತೆ ನೂರು ಸಿನೆಮಾ ಮಾಡಲು ಸಿದ್ದ ಎಂದು ಹೇಳಿದ್ದ ದಿನಗಳು ನೆನಪಾಗಲಿಲ್ಲವೇ..?
- ಜಗ್ಗೇಶ್ ವೃತ್ತಿ ಜೀವನಕ್ಕೆ ತಿರುವುಕೊಟ್ಟ ಮಠ ಚಿತ್ರ
ಅಂದು ಗುರು, ಮಠ..ಎದ್ದೇಳು ಮಂಜುನಾಥ ದಂಥ ಚಿತ್ರಗಳನ್ನು ಜಗ್ಗೇಶ್ ಗಾಗಿಯೇ ನಿರ್ಮಿಸದೆ ಹೋಗಿದ್ದರೆ ಜಗ್ಗೇಶ್ ವೃತ್ತಿಜೀವನಕ್ಕೆ ಮಹತ್ವದ ತಿರುವು ಸಿಗುತ್ತಿತ್ತಾ..? ಗುರುಪ್ರಸಾದ್ ಬಗ್ಗೆ ತುಚ್ಛವಾಗಿ ಮಾತನಾಡುವ ವೇಳೆ ಜಗ್ಗೇಶ್ ಇದನ್ನೆಲ್ಲಾ ಮರೆತಂತೆ ಕಾಣಿಸುತ್ತಿದ್ದುದು ನಿಜ..
ರಂಗನಾಯಕ ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳ ಅತ್ಯಂತ ಕೆಟ್ಟ ಸಿನೆಮಾ ಎನ್ನುವುದರಲ್ಲಿ ಎರಡು ಮಾತಿಲ್ಲ..ಸ್ವತಃ ಗುರು ಪ್ರಸಾದ್ ಅವರೇ ಇದನ್ನು ಒಪ್ಪಿಕೊಂಡು ಸೋಲಿಗೆ ತನ್ನನ್ನೇ ನೈತಿಕ ಹೊಣೆಯಾಗಿಸಿಕೊಂಡಿದ್ದನ್ನು ಜಗ್ಗೇಶ್ ಮರೆತುಬಿಟ್ರಾ.?
ರಂಗನಾಯಕದಂಥ ಕಳಪೆ ಸಿನೆಮಾದಲ್ಲಿ ನಟಿಸಿದ್ದು ನನ್ನ ಅತೀ ದೊಡ್ಡ ಕೆಟ್ಟ ನಿರ್ದಾರ ಎಂದು ಸಿನೆಮಾ ಸೋತಾಕ್ಷಣ ಜಗ್ಗೇಶ್ ಬಾಯಿ ಬಡಿದುಕೊಂಡಿದ್ದನ್ನು ನಾವೂ ನೋಡಿದ್ದೇವೆ..ಆದರೆ ಅಂಥಾ ಕೆಟ್ಟ ಸಿನೆಮಾದಲ್ಲಿ ನಟಿಸೊಲ್ಲ ಅಂಥಾ ಅವರು ಮೊದಲೇ ಡಿಕ್ಲೇರ್ ಮಾಡಿ ಚಿತ್ರದಿಂದಲೇ ಹೊರಬರಬಹುದಿತ್ತಲ್ವಾ..? (ಏಕೆಂದರೆ ಅವರಿಬ್ಬರು ಅನೇಕ ವಿಚಾರಗಳಿಗೆ ಗಲಾಟೆ ಮಾಡಿಕೊಂಡು ವರ್ಷಗಳವರೆಗೂ ಮಾತನಾಡದಿದ್ದ ಅನೇಕ ನಿದರ್ಶನಗಳಿದ್ವು..ಅದರಲ್ಲಿ ಇದು ಕೂಡ ಒಂದಾಗಿ ಸೇರುತ್ತಿತ್ತು ಅಷ್ಟೆ)..ಹಾಗೆ ಜಗ್ಗೇಶ್ ಮಾಡಲಿಲ್ಲವೇಕೆ..? ಕೆಟ್ಟ ಸಿನೆಮಾ ಅನ್ನೋ ಕಾರಣಕ್ಕೆ ಸಂಭಾವನೆ ಪಡೆಯದೆ ಬಿಟ್ರೇನೂ..ಇಲ್ವಲಾ..?
ಹೀಗೆಲ್ಲಾ ಇರುವಾಗ ಗುರುಪ್ರಸಾದ್ ಅವರನ್ನು ಟೀಕಿಸುವ..ಅವರಿಂದಲೇ ಸಿನೆಮಾ ಸೋತಿತು ಎಂದು ಆಪಾದನೆ ಮಾಡುವುದು ನೈತಿಕವಾಗಿ ಎಷ್ಟು ಸರಿ..?
ರಂಗನಾಯಕ ಸೋತರೆ ಅದು ನನ್ನ ಕಾರಣಕ್ಕೆ ಎಂಬ ಮಾತಿಗೆ ಸಿನೆಮಾ ಸೋತಾಗಲೂ ಬದ್ದವಾಗಿದ್ದ ಗುರು ಬದ್ದತೆ ಮುಂದೆ ಜಗ್ಗೇಶ್ ತೀರಾ ಸಣ್ಣವರಾಗಿ ಕಂಡುಬಿಟ್ರೇನೋ ಅನ್ನಿಸುತ್ತಿದೆ.
ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಮಾಡಿದ ಆರೋಪಗಳೆಲ್ಲವೂ ಸತ್ಯವೇ ಅಂದಿಟ್ಟುಕೊಳ್ಳೋಣ…ಆದ್ರೆ ಅವರು ಅದನ್ನು ಪ್ರಸ್ತಾಪಿಸಬೇಕಿದ್ಸ ಸಂದರ್ಭ ಖಂಡಿತಾ ಮಾತ್ರ ಇದಾಗಿರಲಿಲ್ಲ ಎನ್ನುವುದಷ್ಟೇ ಎಲ್ಲರ ಭಾವನೆ ಹಾಗೂ ವಾದ.
ಜಗ್ಗೇಶ್ ಹಾಗೂ ಗುರುಪ್ರಸಾದ್ ವಿಷಯದಲ್ಲಿ ಜಗ್ಗೇಶ್ ಮಾತ್ರ ಸರೀನಾ..? ಅವರ ತಪ್ಪುಗಳೇ ಇರಲಿಲ್ವಾ..?ಆದ ಎಲ್ಲಾ ಪ್ರಮಾದಗಳಿಗೂ ಗುರು ಒಬ್ಬರೇ ಕಾರಣವಾಗಿದ್ರಾ..? ಖಂಡಿತಾ ಹಾಗೆ ಅನ್ನಿಸುತ್ತಿಲ್ಲ..
ಗುರುಪ್ರಸಾದ್ ಬಗ್ಗೆ ಏನೇ ಆರೋಪ..ಅಪವಾದ..ಟೀಕೆ ಗಳು ಇರಬಹುದು..ಆದ್ರೆ ಅದರಾಚೆ ಅವರೊಬ್ಬ ಅತ್ಯಂತ ಪ್ರತಿಭಾವಂತ..ದೈತ್ಯ ಪ್ರತಿಭೆಯ ರಕ್ಕಸ ಮನಸ್ಥಿತಿಯ ಕಸುಬುದಾರ ಎನ್ನುವುದು ಸತ್ಯವಲ್ವಾ ಜಗ್ಗೇಶ್ ಅವರೆ..
ಚಿತ್ರರಂಗದಲ್ಲಿ ಅವರನ್ನು ಬಲ್ಲವರು..ಅವರ ಜತೆ ಕೆಲಸ ಮಾಡಿದವರು..ಅವರಿಂದ ವೃತ್ತಿಜೀವನ ಕಟ್ಟುಕೊಂಡವರು ಎಷ್ಟೇ ಮುನಿಸು..ಬೇಸರಗಳಿದ್ದಾಗ್ಯೂ ಗುರುಪ್ರಸಾದ್ ಅವರ ಬಗ್ಗೆ ಒಳ್ಳೆಯದನ್ನೇ ಮಾತನಾಡುವಾಗ ನೀವೂ ಹಾಗೆಯೇ ಮಾಡಬಹುದಿತ್ತಲ್ವೇ..?
ನಿಮ್ಮಂಥ ಹಿರಿಯ ಕಲಾವಿದರು ಹೀಗೆ ಮಾಡಿಬಿಟ್ರೆ ಹೇಗೆ..?
ಗುರುಪ್ರಸಾದ್ ಬಗ್ಗೆ ಅವರ ವ್ಯಸನ..ವೈಫಲ್ಯ..ದೌರ್ಬಲ್ಯಗಳ ಬಗ್ಗೆ ದಂಡಿಯಾಗಿ ಮಾತನಾಡಿ ಮನಸಿನ ಭಾರ ಕಡಿಮೆ ಮಾಡಿಕೊಂಡ್ರಿ..ಗುರುಪ್ರಸಾದ್ ಬಗ್ಗೆ ಇರಬಹುದಾದ ಸಿಟ್ಟು..ಸೆಡವು..
ಆಕ್ರೋಶವನ್ನೇನೋ ಕಡಿಮೆಮಾಡಿಕೊಂಡ್ರಿ..
ಆದರೆ…ಆದರೆ ನಿಮ್ಮ ದೌರ್ಬಲ್ಯ.. ದುಡುಕು..ತಪ್ಪು ಗಳ ಬಗ್ಗೆಯೂ ಗುರು ಪ್ರಸಾದ್ ಅವರಿಗೆ ಹೇಳಬೇಕಿದ್ದುದು ತುಂಬಾ ಇತ್ತೇನೋ ಅನ್ನಿಸುತ್ತೆ…..ಆದರೆ ಅದನ್ನು ಬದುಕಿದ್ದಾಗಲಂತೂ ಗುರು ಒಮ್ಮೆಯೂ ಹೇಳಲಿಲ್ಲ..ನಿಮ್ಮದು ಇಂಥ ಮನಸ್ಥಿತಿ ಎಂದು ಗೊತ್ತಾಗಿದಿದ್ರೆ ಸಾಯೊಕ್ಕೆ ಮುನ್ನವೇ ಎಲ್ಲವನ್ನು ನಿಷ್ಟೂರವಾಗಿ ಹೇಳಿಬಿಡುತ್ತಿದ್ದರೇನೋ ಅಲ್ವಾ..?? ಅ ವಿಚಾರದಲ್ಲಿ ನೀವು ಬಚಾವಾಗಿ ಬಿಟ್ರೇನೋ ಅನ್ನಿಸುತ್ತೆ..
ಅದೇನೇ ಆಗಲಿ,ಕಷ್ಟಕ್ಕಾದವರು,ಕಷ್ಟದಲ್ಲಿ ಕೈ ಹಿಡಿದವರು ಎಷ್ಟೇ ಕೆಟ್ಟವರಾದ್ರೂ ಅವರನ್ನು ಮರೆಯಬೇಡಿ…ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದ ನೀವೇ ನಿಮ್ಮ ವೃತ್ತಿಜೀವನ ಇನ್ನೇನು ಮುಗಿದೇ ಹೋಯಿತು ಎನ್ನುವ ದುರಿತ ಸಂದರ್ಭದಲ್ಲಿ ನಿಮಗೆ ಮಠ..ಎದ್ದೇಳು ಮಂಜುನಾಥ ದಂಥ ಚಿತ್ರಗಳ ಮೂಲಕ ಪುನರ್ಜನ್ಮ ಕೊಟ್ಟ ಗುರುಪ್ರಸಾದ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದು ಸರಿನಾ..? ನೀವು ಹೇಳುವ ಮಾತಿಗೆ ನೀವೇ ಬದ್ದರಾಗದೇ ಹೋದ್ರೆ ಹೇಗ್ಹೇಳಿ ಸರ್..