14 ಲಕ್ಷ ಅನರ್ಹ ಪಡಿತರ ಚೀಟಿ ರದ್ದು: ಸಚಿವ ಕೆಎಚ್ ಮುನಿಯಪ್ಪ
ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ 3.64 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಸರ್ಕಾರಿ ನೌಕರರ 2,964 ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಅಹರ್ನತೆಗೆ ಮಾನದಂಡವೇನು?
6 ತಿಂಗಳವರೆಗೆ ಪಡಿತರ ಪಡೆಯದಿರುವವರು, ಒಂದು ವರ್ಷದವರೆಗೆ ನೇರ ನಗದು ವರ್ಗಾವಣೆ ಸೌಲಭ್ಯ ಪಡೆಯದಿರುವವರು ಮತ್ತು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸಲಾಗುತ್ತಿದೆ.
ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯದೇ ಕಾರ್ಡ್ ರದ್ದಾದಲ್ಲಿ ಮುಂದಿನ ದಿನಗಳಲ್ಲಿ ಹೊಸ ಕಾರ್ಡ್‌ಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅನ್ನಭಾಗ್ಯ ಹಣ ವರ್ಗಾವಣೆ ಮುಂದುವರಿಕೆ ಪ್ರತಿ ಅನ್ನಭಾಗ್ಯ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ.ಗಳ ನೇರ ನಗದು ವರ್ಗಾವಣೆ (ಡಿಬಿಟಿ) ಮುಂದುವರಿಯಲಿದೆ ಎಂದು ಮುನಿಯಪ್ಪ ತಿಳಿಸಿದರು.
ರಾಜ್ಯಕ್ಕೆ ಕೆಜಿ ಅಕ್ಕಿಯನ್ನು 28 ರೂ.ಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು. ಹೆಚ್ಚುವರಿಯಾಗಿ ಅಗತ್ಯವಿರುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆಡೆಗಳಿಂದ ಸಂಗ್ರಹಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2023-24ರಲ್ಲಿ ಕರ್ನಾಟಕಕ್ಕೆ ವಾರ್ಷಿಕ 27.48 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 34.6 ರೂ.ಗೆ ನೀಡಲು ಕೇಂದ್ರ ನಿರಾಕರಿಸಿತ್ತು. ರಾಜ್ಯ ಸರ್ಕಾರವು ಚುನಾವಣಾ ಪೂರ್ವ ಭರವಸೆಯಂತೆ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ನೀಡಲು ನಿರ್ಧರಿಸಿತ್ತು.
ಹೋಟೆಲ್, ಸಮುದಾಯ ಭವನಗಳಲ್ಲಿ ಆಹಾರ ಪೋಲು ಮಾಡುವುದನ್ನು ತಡೆಯಲು ಕಾನೂನು ರೂಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ.