ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಮಾಡಲು ಯುವಕನಿಗೆ ಶಿಕ್ಷೆ!
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ 21 ಬಾರಿ ಭಾರತದ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವಂತೆ ಮಧ್ಯಪ್ರದೇಶದ ಹೈಕೋರ್ಟ್ ಗೆ 21 ವರ್ಷದ ಯುವಕನಿಗೆ ಶಿಕ್ಷೆ ವಿಧಿಸಿದೆ.
ಫೈಜಲ್ ಖಾನ್ ಅಲಿಯಾಸ್ ಫೈಜಾನ್ ದೇಶದ್ರೋಹಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆ ನಡೆಯುವವರೆಗೂ ತಿಂಗಳಲ್ಲಿ ಎರಡು ಬಾರಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವಂತೆ ಸೂಚಿಸಿದೆ.
ಮಂಗಳವಾರ ಪೊಲೀಸ್ ಠಾಣೆಗೆ ಆಗಮಿಸಿದ ಫೈಜಲ್ ಖಾನ್ ಅಲಿಯಾಸ್ ಫೈಜನ್ ಪೊಲೀಸರ ಬಿಗಿ ಭದ್ರತೆಯೊಂದಿಗೆ ಠಾಣೆಯ ಮೇಲೆ ಹಾರಿಸಲಾದ ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದ್ದಾನೆ.
ನ್ಯಾಯಾಲಯ ನೀಡಿದ ಶಿಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಫೈಜಲ್ ಖಾನ್, ನಾನು ದೊಡ್ಡ ತಪ್ಪು ಮಾಡಿದ್ದೇನೆ. ನಾನು ಭಾರತೀಯನಾಗಿದ್ದು, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುತ್ತೇನೆ. ನಮ್ಮ ಸ್ನೇಹಿತರನ್ನೂ ಗೌರವಿಸುತ್ತೇನೆ. ಜೀವನದಲ್ಲಿ ಇನ್ನೆಂದೂ ಇಂತಹ ತಪ್ಪು ಮಾಡಲ್ಲ ಎಂದು ಹೇಳಿದ್ದಾನೆ.
ಪೊಲೀಸರು ಫೈಜಲ್ ರಾಷ್ಟ್ರಧ್ವಜಕ್ಕೆ ನಮಿಸುತ್ತಿರುವ ವೀಡಿಯೋ ಚಿತ್ರೀಕರಣ ಮಾಡಿದ್ದು, ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.