1988ರ ನಂತರ ಮೊದಲ ಬಾರಿ ಭಾರತದಲ್ಲಿ ಗೆಲುವು ದಾಖಲಿಸಿದ ನ್ಯೂಜಿಲೆಂಡ್! ಭಾರತಕ್ಕೆ 8 ವಿಕೆಟ್ ಸೋಲು!
ನ್ಯೂಜಿಲೆಂಡ್ ತಂಡ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿ ಭಾರತದ ನೆಲದಲ್ಲಿ 36 ವರ್ಷಗಳ ನಂತರ ಮೊದಲ ಗೆಲುವಿನ ದಾಖಲೆ ಬರೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 107 ರನ್ ಸುಲಭ ಗುರಿ ಪಡೆದಿದ್ದ ನ್ಯೂಜಿಲೆಂಡ್ ತಂಡ ಪಂದ್ಯದ 5ನೇ ಹಾಗೂ ಅಂತಿಮ ದಿನವಾದ ಭಾನುವಾರ ಭೋಜನ ವಿರಾಮಕ್ಕೂ ಮುನ್ನವೇ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ವಿಲ್ ವಾಂಗ್ (48) ಮತ್ತು ರಚಿನ್ ರವೀಂದ್ರ (39) ಮುರಿಯದ 3ನೇ ವಿಕೆಟ್ ಗೆ 75 ರನ್ ಜೊತೆಯಾಟದಿಂದ ಸುಲಭ ಗೆಲುವು ತಂದುಕೊಟ್ಟರು.
ನ್ಯೂಜಿಲೆಂಡ್ ತಂಡ 1988ರಲ್ಲಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಗೆದ್ದ ನಂತರ ಭಾರತದ ನೆಲದಲ್ಲಿ ದಾಖಲಿಸಿದ ಮೊದಲ ಗೆಲುವಾಗಿದೆ. ಅಂದು 136 ರನ್ ಗಳಿಂದ ಭಾರತ ಸೋಲುಂಡರೂ ನ್ಯೂಜಿಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಿಂದ ಗೆಲುವು ದಾಖಲಿಸಿತ್ತು.
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 46 ರನ್ ಗಳಿಗೆ ಆಲೌಟಾಗಿದ್ದು, ದುಬಾರಿಯಾಯಿತು. ಎರಡನೇ ಇನಿಂಗ್ಸ್ ನಲ್ಲಿ ಸರ್ಫರಾಜ್ ಖಾನ್ ಶತಕ ಹಾಗೂ ರಿಷಭ್ ಪಂತ್ 99 ರನ್ ಹಾಗೂ ವಿರಾಟ್ ಕೊಹ್ಲಿ 70 ರನ್ ಗಳಿಸಿ ಹೋರಾಟ ನಡೆಸಿದರೂ ಕೊನೆಯಲ್ಲಿ 54 ರನ್ ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ಡ್ರಾ ಮಾಡಿಕೊಳ್ಳುವ ಅವಕಾಶ ಕಳೆದುಕೊಂಡಿತ್ತು.