2 ಗಂಟೆಯಲ್ಲಿ 21 ಕಿ,ಮೀ. ಮ್ಯಾರಥಾನ್ ಓಡಿದ ಜಮ್ಮು ಕಾಶ್ಮೀರ ಸಿಎಂ!
ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಯಾವುದೇ ತರಬೇತಿ ಇಲ್ಲದಿದ್ದರೂ ಮ್ಯಾರಥಾನ್ ನಲ್ಲಿ 2 ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಭಾನುವಾರ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ 13 ದೇಶಗಳಿಂದ 2000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದು ಕಣಿವೆ ರಾಜ್ಯದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಆಗಿದೆ.
54 ವರ್ಷದ ಓಮರ್ ಅಬ್ದುಲ್ಲಾ ಸ್ವತಃ ಈ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದೂ ಅಲ್ಲದೇ 2 ಗಂಟೆಯಲ್ಲಿ 21 ಕಿ.ಮೀ. ದೂರ ಓಡಿ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದರು.
ನಾನು ಜೀವಮಾನದಲ್ಲಿಯೇ ಇಷ್ಟು ದೂರ ಓಡಿಲ್ಲ. ಯಾವತ್ತೊ ಒಮ್ಮೆ 13 ಕಿ.ಮೀ. ಓಡಿದ್ದು ಬಿಟ್ಟರೆ ಇಷ್ಟು ದೂರ ಓಡಿದ್ದು ಇದೇ ಮೊದಲು. ಈ ವಯಸ್ಸಿನಲ್ಲಿ ಇಷ್ಟು ದೂರ ಓಡಲು ಸಾಧ್ಯವಾಗಿದ್ದಕ್ಕೆ ಸಂತಸವಾಗುತ್ತಿದೆ. ಯಾವುದೇ ಪೌಷ್ಠಿಕಾಂಶದ ಆಹಾರ, ತರಬೇತಿ, ಅಭ್ಯಾಸ ಏನೂ ಇಲ್ಲದೇ ಓಡಿದ್ದು ಖುಷಿ ನೀಡಿದೆ ಎಂದು ಓಮರ್ ಅಬ್ದುಲ್ಲಾ ಸಂತಸ ವ್ಯಕ್ತಪಡಿಸಿದ್ದಾರೆ.