ಬೆಂಗಳೂರು ಟೆಸ್ಟ್: ಸರ್ಫರಾಜ್ ಚೊಚ್ಚಲ ಶತಕ, ಕಿವೀಸ್ ಗೆ 107 ರನ್ ಗುರಿ
ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಸಿಡಿಸಿದ ಚೊಚ್ಚಲ ಶತಕದ ಹೊರತಾಗಿಯೂ ಭಾರತ ತಂಡ ನಾಟಕೀಯ ಕುಸಿತ ಅನುಭವಿಸಿದೆ. ಇದರಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ಗೆಲ್ಲಲು 107 ರನ್ ಗಳ ಸುಲಭ ಸವಾಲೊಡ್ಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಶನಿವಾರ 3 ವಿಕೆಟ್ ಗೆ 231 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೂ ಮುನ್ನವೇ 462 ರನ್ ಗೆ ಆಲೌಟಾಗಿದೆ.
ನಿನ್ನೆ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫರಾಜ್ ಖಾನ್ ಶತಕ ಪೂರೈಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಂಪಾದಿಸಿದರು. ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸರ್ಫರಾಜ್ ಖಾನ್ ಎರಡನೇ ಇನಿಂಗ್ಸ್ ನಲ್ಲಿ ಭರ್ಜರಿ ಆಟದಿಂದ ತಂಡವನ್ನು ಆಧರಿಸಿದರು.
110 ಎಸೆತಗಳಲ್ಲಿ ಶತಕ ಪೂರೈಸಿದ ಸರ್ಫರಾಜ್ ಖಾನ್ ಅಂತಿಮವಾಗಿ 195 ಎಸೆತಗಳಲ್ಲಿ 18 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 150 ರನ್ ಬಾರಿಸಿ ಔಟಾದರು. ಅಲ್ಲದೇ ರಿಷಭ್ ಪಂತ್ ಜೊತೆಗೂಡಿ 4ನೇ ವಿಕೆಟ್ ಗೆ 177 ರನ್ ಜೊತೆಯಾಟ ನಿಭಾಯಿಸಿದರು. ರಿಷಭ್ ಪಂತ್ 105 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 99 ರನ್ ಗಳಿಸಿದ್ದಾಗ ಔಟಾಗಿ 1 ರನ್ ನಿಂದ ಶತಕ ವಂಚಿತರಾದರು.