ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ ಅರೆಸ್ಟ್: ಎಂಪಿ ಸೀಟು ಕೊಡಿಸ್ತೀನಿ ಅಂತ 2 ಕೋಟಿ ವಂಚನೆ!
ಲೋಕಸಭೆಗೆ ಟಿಕೆಟ್ ಕೊಡಿಸ್ತೀನಿ ಎಂದು 2 ಕೋಟಿ ರೂ. ಬೇಡಿಕೆ ಇಟ್ಟ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸೋದರ ಗೋಪಾಲ್ ಜೋಶಿ ಅವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್ ಜೋಷಿ ಅವರನ್ನು ಶನಿವಾರ ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಪಾಲ ಜೋಷಿ ಅವರ ಮನೆಯನ್ನು ಪರಿಶೀಲಿಸುತ್ತಿರುವ ಪೊಲೀಸರು ದಾಖಲೆ ಇಲ್ಲದ 25 ಲಕ್ಷ ರೂ. ವಶಕ್ಕೆ ಪಡೆದಿದ್ದು, ಹಣದ ಲೆಕ್ಕ ಮಾಡುತ್ತಿದ್ದಾರೆ.
ಸುನೀತಾ ಚೌಹಾಣ್ ನೀಡಿದ ದೂರಿನಲ್ಲಿ ಗೋಪಾಲ್ ಜೋಶಿ, ಅಣ್ಣ ಸುನೀಲ್ ಜೋಶಿ ಕೇಂದ್ರದಲ್ಲಿ ಪ್ರಬಲ ಸಚಿವರಾಗಿದ್ದಾರೆ. ಅವರ ಮೂಲಕ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ನೇರವಾಗಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ಸಂಪರ್ಕ ಹೊಂದಿದ್ದು 2 ಕೋಟಿ ರೂ. ನೀಡಿದರೆ ಲೋಕಸಭೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದಕ್ಕಾಗಿ 25 ಲಕ್ಷ ರೂ. ಮುಂಗಡ ಹಣ ಪಡೆದಿದ್ದು, ವಾಪಸ್ ಕೊಡದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.