ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕನಿಗೆ 3 ಮೀ. ಉದ್ದದ ದಂಡ ವಿಧಿಸಿದ ಪೊಲೀಸರು!
ಸಾಮಾನ್ಯವಾಗಿ ಹೆಬ್ಬಾವು ಹಿಡಿದಾಗ ಹಿಡಿದವರು ತಲೆಯಿಂದ ಬಾಲದವರೆಗೂ ಎಲ್ಲರೂ ಹಿಡಿದುಕೊಂಡು ಫೋಟೊಗೆ ಫೋಜ್ ಕೊಡೋದು ಸಾಮಾನ್ಯ. ಆದರೆ ಇಲ್ಲಿ ಪೊಲೀಸರು ಹೆಬ್ಬಾವು ಹಿಡಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ರಸೀದಿಯನ್ನು ಹಿಡಿದು ಫೋಜ್ ಕೊಟ್ಟಿದ್ದಾರೆ.
ಹೌದು, ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ನೀಡಿದ ದಂಡದ ಬಿಲ್ ಉದ್ದ ನೋಡಿ ಆಶ್ಚರ್ಯಚಕಿತರಾದ ಪೊಲೀಸರು ಚಾಲಕನ ಜೊತೆ ಬಿಲ್ ಹಿಡಿದು ಫೋಟೊ ತೆಗೆಸಿಕೊಂಡಿದ್ದಾರೆ.
ಶಿವಮೊಗ್ಗದ ಸಂಚಾರಿ ಪೊಲೀಸರು ಸುಮಾರು 3 ಮೀಟರ್ ಉದ್ದದ ಸಂಚಾರಿ ನಿಯಮದ ಬಿಲ್ ಕೊಟ್ಟು ಕಾರು ಚಾಲಕನ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.
ಶಿವಪ್ಪನಾಯಕ ವೃತ್ತದ ಬಳಿ ವಾಹನ ತಪಾಸಣೆ ವೇಳೆ ಸಂಚಾರ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ ಚಾಲಕ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಚಾಲಕನಿಗೆ ಬಿಲ್ ತೆಗೆದಾಗ ಸುಮಾರು 3 ಮೀಟರ್ ಉದ್ದದ ರಸೀದಿ ಬಂದಿದೆ.
ಚಾಲಕ ಪದೇಪದೆ ಸಂಚಾರಿ ನಿಯಮ ಉಲ್ಲಂಘಿಸಿದ್ದು ಬೆಳಕಿಗೆ ಬಂದಿದ್ದು, ಒಟ್ಟಾರೆ ಬಿಲ್ ಮೊತ್ತ 11,000 ರೂ. ಆಗಿದ್ದು, ಚಾಲಕನಿಂದ ದಂಡ ಕಟ್ಟಿಸಿಕೊಂಡು ಬಳಿಕ ಆತನನ್ನು ಕಳಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸರು ಪ್ರಕಟಣೆಯಲ್ಲಿ ವಿವರಣೆ ನೀಡಿದ್ದಾರೆ.