ವನಿತೆಯರ ಟಿ-20 ವಿಶ್ವಕಪ್: 8 ಕ್ಯಾಚ್ ಬಿಟ್ಟು ಸೋತ ಪಾಕಿಸ್ತಾನ, ಹೊರಬಿದ್ದ ಭಾರತ!
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತಿದ್ದರಿಂದ ಭಾರತ ತಂಡ ವನಿತೆಯರ ಟಿ-20 ವಿಶ್ವಕಪ್ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ. ಈ ಮೂಲಕ 8 ಆವೃತ್ತಿಗಳ ಪೈಕಿ ಇದೇ ಮೊದಲ ಬಾರಿ ಭಾರತ ವನಿತೆಯರು ಗುಂಪು ಹಂತದಲ್ಲೇ ನಿರ್ಗಮಿಸಿ ಮುಖಭಂಗಕ್ಕೆ ಒಳಗಾಗಿದೆ.
ಭಾರತ ತಂಡ ಭಾನುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್ ಗಳಿಂದ ಸೋಲುಂಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ಸೋತಿದ್ದರಿಂದ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಲಭಿಸುವ ಸಾಧ್ಯತೆ ಇತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ವನಿತೆಯರು 54 ರನ್ ಗಳ ಭಾರೀ ಅಂತರದಿಂದ ಸೋಲುಂಡಿತು.
ಸೋತ ಪಾಕಿಸ್ತಾನ ಮತ್ತು ಭಾರತ ತಂಡಗಳು ಸೆಮಿಫೈನಲ್ ರೇಸ್ ನಿಂದ ಹೊರಬಿದ್ದರು. ಭಾರತ ಎ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಸೆಮಿಫೈನಲ್ ರೇಸ್ ನಿಂದ ಹೊರಬೀಳುವ ಮೂಲಕ 5 ಬಾರಿ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆ ಹೊಂದಿದ್ದ ಭಾರತ ಇದೇ ಲೀಗ್ ಹಂತದಲ್ಲೇ ನಿರ್ಗಮಿಸಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ವನಿತೆಯರು 6 ವಿಕೆಟ್ ಗೆ 110 ರನ್ ಕಲೆಹಾಕಿದರೆ, ಪಾಕಿಸ್ತಾನ ವನಿತೆಯರು 11.4 ಓವರ್ ಗಳಲ್ಲಿ 56 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಯಿತು. ಪಾಕಿಸ್ತಾನ ತಂಡ ಫೀಲ್ಡಿಂಗ್ ವೇಳೆ 8 ಕ್ಯಾಚ್ ಬಿಟ್ಟಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಭಾರತ ತಂಡವನ್ನು ಸೆಮೀಸ್ ರೇಸ್ ನಿಂದ ಹೊರದಬ್ಬಲು ಉದ್ದೇಶಪೂರ್ವಕವಾಗಿ ಸೋಲುಂಡಿತೆ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.