ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಜೊತೆ ಭಾರತ ಸರ್ಕಾರದ ಏಜೆಂಟ್ ಸಂಪರ್ಕ: ಕೆನಡಾ ಗಂಭೀರ ಆರೋಪ
ಭಾರತ ಸರ್ಕಾರದ ಏಜೆಂಟ್ ಗಳು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಕೆನಡಾ ಗಂಭೀರ ಆರೋಪ ಮಾಡಿದೆ. ಈ ಮೂಲಕ ಪರಸ್ಪರ ರಾಯಭಾರ ಅಧಿಕಾರಿಗಳನ್ನು ಹೊರಹಾಕಿದ ಬೆನ್ನಲ್ಲೇ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಭಣವಾಗಿದೆ.
ಖಾಲಿಸ್ತಾನಿ ಮುಖಂಡ ಹಾಗೂ ಕೆನಡಾ ನಿವಾಸಿ ಹರ್ದೀಪ್ ನಿಜ್ಜಾರ್ ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಈ ಹಿಂದೆ ಆರೋಪಿಸಿದ್ದ ಕೆನಡಾ ಸರ್ಕಾರ ಇದೀಗ ವಿಷಯವನ್ನು ಮರುಪ್ರಸ್ತಾಪಿಸಿದ್ದು, ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿರುವ ಖಾಲಿಸ್ತಾನಿ ಮುಖಂಡರ ಹತ್ಯೆ ಹಿಂದೆ ಭಾರತದ ಸರ್ಕಾರ ಕೈವಾಡವಿದೆ ಎಂದು ಆರೋಪಿಸಿದೆ.
ದಕ್ಷಿಣ ಏಷ್ಯಾ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದು ಅದರಲ್ಲೂ ಖಾಲಿಸ್ತಾನಿ ಹೋರಾಟಗಾರರನ್ನು ಪ್ರಧಾನವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರ ದಾಳಿ ಮಾಡಿದೆ. ಇದಕ್ಕಾಗಿ ಸಂಘಟನಾತ್ಮಕ ಅಪರಾಧ ಮಾಡುವವರಿಗೆ ನೆರವು ನೀಡುತ್ತಿದೆ ಎಂದು ಕೆನಡಾದ ಹಂಗಾಮಿ ಕಮಿಷನರ್ ಮೈಕ್ ಡುನ್ಹೆ ಹೇಳಿದ್ದಾರೆ.
ಕೆನಡಾದಲ್ಲಿ ವಾಸವಾಗಿರುವ ನಿರ್ದಿಷ್ಟ ವ್ಯಕ್ತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳ ಮೂಲಕ ಸಂಗ್ರಹಿಸುತ್ತಿದೆ. ಈ ಮಾಹಿತಿಗಳನ್ನು ಗ್ಯಾಂಗ್ ಸ್ಟರ್ ಗಳಿಗೆ ರವಾನಿಸಿ ಅವರ ಮೂಲಕ ಬೆದರಿಕೆ, ಸುಲಿಗೆ, ಕೊಲೆಯಂತಹ ಕ್ರಿಮಿನಲ್ ಅಪರಾಧಗಳನ್ನು ಮಾಡಲು ಪ್ರಚೋದಿಸುತ್ತಿದೆ ಎಂದು ಅವರು ವಿವರಿಸಿದರು.
ಇದಕ್ಕೂ ಮುನ್ನ ಕೆನಡಾ ರಾಯಭಾರಿಗಳು ದೇಶವನ್ನು ತೊರೆಯಲು ಭಾರತ ಸೂಚನೆ ನೀಡಿದ ಬೆನ್ನಲ್ಲೇ ಕೆನಡಾ ಸರ್ಕಾರ ಕೂಡ ಭಾರತದ ರಾಯಭಾರ ಕಚೇರಿ ಎಲ್ಲಾ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳುವಂತೆ ಸೂಚಿಸಿದೆ. ಈ ಮೂಲಕ ಎರಡೂ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ.
ಸಿಖ್ ಪ್ರತ್ಯೇಕತಾವಾದಿಯ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಭಾರತದಲ್ಲಿನ ಕೆನಡಾ ರಾಯಭಾರಿ ಹೇಳಿಕೆ ನೀಡಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಶನಿವಾರದೊಳಗೆ ದೇಶ ತೊರೆಯುವಂತೆ ಕೆನಡಾ ರಾಯಭಾರ ಕಚೇರಿ 6 ಸಿಬ್ಬಂದಿಗೆ ಗಡುವು ನೀಡಿತು.
ಭಾರತದ ಕ್ರಮದ ಬೆನ್ನಲ್ಲೇ ದಾಳಿಗೆ ಪ್ರತಿದಾಳಿ ಎಂಬಂತೆ ಕೆನಡಾ ಸರ್ಕಾರ ಕೂಡಲೇ ದೇಶದಲ್ಲಿ ಕೋಮುಗಲಭೆಯ ಅಭಿಯಾನಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಭಾರತದ ರಾಯಭಾರ ಕಚೇರಿಯ 6 ಸಿಬ್ಬಂದಿಯನ್ನು ದೇಶ ತೊರೆಯುವಂತೆ ಸೂಚಿಸಿದೆ.
2024 ಅಕ್ಟೋಬರ್ 19 ಶನಿವಾರ ಬೆಳಿಗ್ಗೆ 11.59ರೊಳಗೆ ಭಾರತವನ್ನು ತೊರೆಯುವಂತೆ ಕೆನಡಾ ಅಧಿಕಾರಿಗಳಾದ ಹಂಗಾಮಿ ಹೈಕಮಿಷನರ್ ಸ್ಟುವರ್ಟ್ ರಾಸ್ ವ್ಹೀಲರ್, ಸಹಾಯಕ ಹೈಕಮಿಷನರ್ ಪ್ಯಾಟ್ರಿಕ್ ಹೈಬರ್ಟ್ ಸೇರಿದಂತೆ 6 ಮಂದಿ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಗಡುವು ನೀಡಿದೆ.