ವಾರದೊಳಗೆ ಅನ್ನಭಾಗ್ಯದ ಹಣ ಜಮೆ: ಆಹಾರ ಸಚಿವ ಕೆಎಚ್ ಮುನಿಯಪ್ಪ
ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿ ಹಣ ವಾರದೊಳಗೆ ಪಾವತಿಯಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರ್ ಸಮಸ್ಯೆಯಿಂದಾಗಿ 2 ತಿಂಗಳಿಂದ ಅಕ್ಕಿ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಇದೀಗ ಸಮಸ್ಯೆ ಬಗೆಹರಿದಿದ್ದು, ವಾರದೊಳಗೆ ಹಣ ಪಾವತಿಯಾಗಲಿದೆ ಎಂದರು.
ಸಾಮಾನ್ಯವಾಗಿ ಪ್ರತಿ ತಿಂಗಳು 10ನೇ ತಾರೀಖಿನಿಂದ ಬಿಡುಗಡೆಯಾಗುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅಕ್ಕಿ ಹಣ ಬಂದಿಲ್ಲ. ಸರಕಾರದಲ್ಲಿ ಹಣದ ಕೊರತೆಯಿಲ್ಲ. ಈ ಬಾರಿ ತಡವಾಗಿದ್ದು, ಮುಂದಿನ ವಾರದಲ್ಲಿ ಹಣ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಹೊರತುಪಡಿಸಿ ಎಲ್ಲಿಯೂ ಶೇ.50ರಷ್ಟು ಬಿಪಿಎಲ್ ಕಾರ್ಡ್‌ಗಳು ಇಲ್ಲ. ರಾಜ್ಯದಲ್ಲಿರುವ ಪಡಿತರ ಚೀಟಿಗಳ ಪೈಕಿ ಶೇ.80ರಷ್ಟು ಬಿಪಿಎಲ್ ಇವೆ. ಹೀಗಾಗಿ ಪರಿಷ್ಕರಣೆ ಮಾಡಿದ ಬಳಿಕ ಬಿಪಿಎಲ್‌ಗೆ ಅರ್ಹತೆ ಇಲ್ಲದ ಕಾರ್ಡ್‌ಗಳನ್ನು ಎಪಿಎಲ್ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 15 ರೂ.ಗಳನ್ನು ಪಡೆದು, ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣವನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದರು.