ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಗುಂಡಿಕ್ಕಿ ಹತ್ಯೆ: ಹೊಣೆ ಹೊತ್ತ ಬಿಶ್ನೋಯಿ ಗ್ಯಾಂಗ್
ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಬಣದ ಮುಖಂಡನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಬಿಶ್ನೋಯಿ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ.
ಬಾಂದ್ರಾ ಪೂರ್ವದ ಶಾಸಕರಾಗಿದ್ದ ಬಾಬಾ ಸಿದ್ದಿಕಿ ಪುತ್ರದ ಕಚೇರಿಗೆ ಭೇಟಿ ನೀಡಿದ ವೇಳೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಪುತ್ರ ಜೀಹಾನ್ ಕಚೇರಿಯಲ್ಲಿ ಶನಿವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದುಷ್ಕರ್ಮಿಗಳು ಹಾರಿಸಿದ ಮೂರು ಗುಂಡುಗಳ ಪೈಕಿ ಒಂದು ಗುಂಡು ಎದೆಯ ಭಾಗಕ್ಕೆ ಬಡಿದಿದ್ದು, ರಕ್ತಸ್ರಾವಕ್ಕೆ ಒಳಗಾದ ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.
ಬಂಧಿತರ ಪೈಕಿ ಒಬ್ಬಾತ ಉತ್ತರ ಪ್ರದೇಶ ಮತ್ತೊಬ್ಬ ಹರಿಯಾಣ ಮೂಲದವ ಎಂದು ತಿಳಿದು ಬಂದಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಕರಣದ ಕುರಿತು ಪೊಲೀಸರಿಂದ ಮಾಹಿತಿ ಕೇಳಿದ್ದಾರೆ. ಬಂಧಿತರು ನಾವು ಅಪ್ರಾಪ್ತರು ಎಂದು ವಾದಿಸಿದ್ದಾರೆ. ಆದರೆ ನ್ಯಾಯಾಲಯ ಮೂಳೆ ಪರೀಕ್ಷೆಗೆ ಸೂಚಿಸಿದೆ.
ಕಾಂಗ್ರೆಸ್ ನಲ್ಲಿ 48 ವರ್ಷಗಳಿಂದ ಗುರುತಿಸಿಕೊಂಡಿದ್ದರು. ಬಾಬಾ ಸಿದ್ದಿಕಿ ಪೂರ್ವ ಬಾಂದ್ರಾದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಬಣಕ್ಕೆ ಸೇರ್ಪಡೆಯಾಗಿದ್ದರು. ಆಗಸ್ಟ್ ನಲ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.