BREAKING NEWSCRIME NEWSEXCLUSIVE NEWSPOLITICAL NEWSSPECIALSTORIES

ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

Share

ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ  ದುಸ್ಸಾಹಸಕ್ಕೆ..!

ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು ಮಾದ್ಯಮ ಉಳಿಸಿಕೊಂಡಿದೆ ಎನ್ನುವುದಾದ್ರೆ ಬೆರಳೆಣಿಕೆಯ ವಸ್ತುನಿಷ್ಟ ಪತ್ರಕರ್ತರೇ ಕಾರಣ..ಅಂಥಾ ಕೆಲವೇ ಕೆಲವು ಪತ್ರಕರ್ತರಲ್ಲಿ ಜಿ.ಮಹಾಂತೇಶ್ ಒಬ್ಬರು. ಅವರಲ್ಲಿ ಯಾವ ತರಹದ ವೃತ್ತಿನಿಷ್ಟೆಸತ್ಯಸಂದತೆಯಿನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪೋಟಕ ಸುದ್ದಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ದಿ ಫೈಲ್ ಸುದ್ದಿಜಾಲತಾಣವೇ ಸಾಕ್ಷಿಯಾಗಬಲ್ಲದೇನೋ..

ಜಿ.ಮಹಾಂತೇಶ್, ದಿ-ಪೈಲ್: ಆನ್ ರೆಕಾರ್ಡ್ ನ ಸಂಸ್ಥಾಪಕ ಹಾಗೂ ಮುಖ್ಯಸ್ಥ.ಸಂದರ್ಬಗಳೊಂದಿಗೆ ರಾಜಿ ಮಾಡಿಕೊಳ್ಳದ ನಿಷ್ಟೂರ ಮನಸ್ಥಿತಿಯ ಪತ್ರಕರ್ತ  ಎನ್ನುವುದರಲ್ಲಿ ಅನುಮಾನವೇ ಬೇಡ.ಇವತ್ತಿನ ಕಾಲಘಟ್ಟದಲ್ಲಿ ಮಹಾಂತೇಶ್ ಅವರಂಥವರು ಸಿಗೋದು ಅಪರೂಪದಲ್ಲೆ ಅಪರೂಪ.ಸವಕಲು ಸುದ್ದಿಗಳ ಬೆನ್ನತ್ತುವ,ಓಲೈಕೆಯನ್ನೇ ಸುದ್ದಿಯ ಬಂಡವಾಳ ಮಾಡಿಕೊಂಡು ಕೆಲಸ ಮಾಡುವ ಮಾದ್ಯಮ ಹಾಗೂ ಪತ್ರಕರ್ತರ ನಡುವೆ ತೀರಾ ವಿಭಿನ್ನವಾಗಿ ನಿಲ್ಲುತ್ತಾರೆ ಮಹಾಂತೇಶ್. ತಮ್ಮ ತನಿಖಾ ಪತ್ರಿಕೋದ್ಯದ ಭಾಗವಾಗಿ ಅವರು ಪ್ರತಿನಿತ್ಯ ದಿ ಫೈಲ್ ನಲ್ಲಿ ಪ್ರಕಟಿಸುವ ವರದಿಗಳು ಭ್ರಷ್ಟ ವ್ಯವಸ್ಥೆಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗುತ್ತಿಲ್ಲ.ಹಾಗಾಗಿನೇ ಮಹಾಂತೇಶ್ ವಿರುದ್ದ ಗೂಢಾಚಾರಿಕೆ ಮಾಡುವ ಹೀನಕೃತ್ಯಕ್ಕೆ ಕೈ ಹಾಕಿವೆ ಎನ್ನುವ ಆತಂಕವನ್ನು ಮಹಾಂತೇಶ್ ತೋಡಿಕೊಂಡಿದ್ದಾರೆ.

ಎದೆಗೆ ಬಿದ್ದ ಅಕ್ಷರವನ್ನೇ ಬದುಕಾಗಿಸಿಕೊಂಡು ವೃತ್ತಿಯನ್ನೇ ಉಸಿರಾಗಿಸಿಕೊಂಡ ಪತ್ರಕರ್ತ ಜಿ.ಮಹಾಂತೇಶ್.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವವರ ವೈಫಲ್ಯಗಳನ್ನು ಪತ್ತೆ ಮಾಡುವುದಷ್ಟೇ ಅಲ್ಲ,ಅದು ಸಂಭವಿಸದಂತೆ ಕಾವಲು ನಾಯಿಗಳಂತೆ ವ್ಯವಸ್ಥೆ ಮೇಲೆ ನಿಗಾಇಡುವ ಕೆಲಸವನ್ನೇ ಬಹುತೇಕ ಮಾದ್ಯಮ-ಪತ್ರಕರ್ತರು ಮರೆತಿರುವಾಗ ಮಹಾಂತೇಶ್ ಅದನ್ನೆಲ್ಲಾ ಏಕವ್ಯಕ್ತಿಯಾಗಿದ್ದುಕೊಂಡು ಅತ್ಯಂತ ಶೃದ್ಧೆ-ನಿಷ್ಟೆ-ಪಾರದರ್ಶಕ-ನೇರಾನೇರವಾಗಿ ಮಾಡುತ್ತಿದ್ದಾರೆ ಎನ್ನುವುದು ನಿಜಕ್ಕೂ ಹೆಮ್ಮೆ.ಬಹುಷಃ ಅವರು ರಾಜಿ ಮನಸ್ಥಿತಿಯವರಾಗಿದ್ದರೆ ಇಷ್ಟೊತ್ತಿಗೆ ಸಂಪಾದಿಸಬಹುದಾಗಿದ್ದ ಹಣ ಅದೆಷ್ಟೋ ಕೋಟಿ.ಆದರೆ ಅಕ್ಷರವನ್ನು ಅಡವಿಟ್ಟುಕೊಳ್ಳದೆ ಅದಕ್ಕೆ ನ್ಯಾಯ ತೀರಿಸುವ ಕೆಲಸ ಮಾಡುತ್ತಾ ಬಂದಿರುವುದರಿಂದಲೇ ಹಣದ ಹೊರತಾಗಿ ಅವರಿಗೆ ಸಲ್ಲಬೇಕಾದ ಎಲ್ಲಾ ಮರ್ಯಾದೆ-ಪ್ರತಿಷ್ಟೆ-ಗೌರವವನ್ನು ಅವರು ನಂಬಿರುವ ಅಕ್ಷರ ನೀಡುತ್ತಾ ಬಂದಿದೆ.ಇದಕ್ಕಿಂತ ದೊಡ್ಡ ಆತ್ಮತೃಪ್ತಿ ಇನ್ನೇನು ಬೇಕು ಎನ್ನುತ್ತಾರೆ ಮಹಾಂತೇಶ್.

ಆಳುವ ಸರ್ಕಾರ ಯಾವುದೇ ಪಕ್ಷದ್ದಿರಲಿ ಅದು ತಪ್ಪು ಮಾಡಿದಾಗ,ಎಡವಿದಾಗ  ಅದನ್ನು ಪ್ರತಿಯೊಂದು ಕಾಲಘಟ್ಟದಲ್ಲಿ ಕಟುವಾಗಿ,ತೀಕ್ಷ್ಣವಾಗಿ,ನೇರಾನೇರವಾಗಿ, ಯಾವುದೇ ಪೂರ್ವಾಗ್ರಹಗಳಿಲ್ಲದೆ ಖಂಡಿಸುವ ಕೆಲಸವನ್ನು ಮಹಾಂತೇಶ್ ಮಾಡುತ್ತಾ ಬಂದಿದ್ದಾರೆ.ಇವತ್ತಿಗೆ ಮಹಾಂತೇಶ್ ಸುದ್ದಿ ಬರೆಯುತ್ತಾರೆಂದರೆ ಯಾರಿಗೆ ಗ್ರಹಚಾರ ಕಾದಿದೆಯಪ್ಪಾ ಎಂದು ಗಾಬರಿಯಿಂದ ಕನಲಿ ಹೋಗುತ್ತಾರಂತೆ  ರಾಜಕಾರಣಿಗಳು.ಅವರು ಸುದ್ದಿ ಬರೆದರೆ ಮುಗೀತು ಅದು ಪಕ್ಕಾ ಡಾಕ್ಯುಮೆಂಟೆಡ್ ಎನ್ನುವಂತೆ.ಮಹಾಂತೇಶ್ ಬರೆದ ಎಷ್ಟೋ ಸುದ್ದಿಗಳು ಹಗರಣ-ಅಕ್ರಮಗಳ ವಿರುದ್ಧ ಹೋರಾಡಲು ಬೇಕಾದ ಪೂರಕ  ದಾಖಲೆ-ಸಾಕ್ಷ್ಯಗಳನ್ನು ಹೊಂದಿರುತ್ತದೆ.ಹಗರಣದಳ ವಿರುದ್ದ ದ್ವನಿ ಎತ್ತಬೇಕಾದವರು ಸಾಕ್ಷ್ಯಗಳಿಗೆ ತಡಕಾಡಬೇಕಾದ ಅಗತ್ಯವೆ ಇರೊಲ್ಲ.ಎಲ್ಲವೂ ಮಹಾಂತೇಶ್ ಅವರ ವರದಿಗಳಲ್ಲೆ ಅಡಕವಾಗಿರುತ್ತದೆ ಎಂದೇ ಕನ್ಪರ್ಮ್

ಆದರೆ ಇದೇ ಮಹಾಂತೇಶ್  ವಿರುದ್ದ ರಾಜಕೀಯ ಶಕ್ತಿಗಳು ಷಡ್ಯಂತ್ರ ರೂಪಿಸಲು ಹೊರಟಿವೆಯಂತೆ.ಅಂತದ್ದೊಂದು ಆತಂಕವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಹಾಂತೇಶ್ ಅವರೇ ವ್ಯಕ್ತಪಡಿಸಿದ್ದಾರೆ.ನನ್ನ ವಿರುದ್ದ ಬೇಹುಗಾರಿಕೆ ನಡೆಸಲಾಗುತ್ತಿದೆ.ನನ್ನ ಪೂರ್ವಾಪರಗಳ ಮಾಹಿತಿ ಕಲೆ ಹಾಕೋ ಪ್ರಯತ್ನ ನಡೀತಿದೆ.ನನ್ನ ಕಚೇರಿಗೆ ಬರುವ ಜನರು, ನನ್ನ ಮೊಬೈಲ್ ಗೆ ಬರುವ ಕರೆಗಳು,ನಾನು ಬರೆಯುವ ಸುದ್ದಿಗಳು ಅದರ ಹಿನ್ನಲೆ,ಸಾಕ್ಷ್ಯಗಳ ವಿರುದ್ಧ ಜಾಸೂಸಿ ನಡೆಯುತ್ತಿದೆ ಎನ್ನುವ ಮೂಲಕ ನನ್ನ ಸತ್ಯದ ದ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

ಹಾಗೆ ನೋಡುವುದಾದರೆ ಮಹಾಂತೇಶ್ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದ ವಸ್ತುನಿಷ್ಟ ವರದಿಗಾರ.ದಾಖಲೆಗಳ ಹೊರತಾಗಿ ಸುದ್ದಿಯನ್ನೇ ಮಾಡೊಲ್ಲ.ಅವರು ಎಲ್ಲಾ ದಾಖಲೆಗಳನ್ನು ಪರೀಕ್ಷಿಸಿ ಹತ್ತಲವ ಬಾರಿ ಪರಿಶೀಲಿಸಿ,ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಮಾಲೋಚಿಸಿಯೆ ಸುದ್ದಿ ಪ್ರಕಟಿಸುತ್ತಾರೆ( ಸಾಕ್ಷ್ಯವಿಲ್ಲದೆ ಸುದ್ದಿ ಬರೆದಿದ್ದರೆ ಇವತ್ತು ಅವರ ಮೇಲೆ ಅದೆಷ್ಟು ನೂರು ಮಾನನಷ್ಟ ಮೊಕದ್ದಮೆಗಳಿರುತ್ತಿದ್ದವೋ ಗೊತ್ತಿಲ್ಲ.) ಏಕೆಂದರೆ ಸಾಕ್ಷ್ಯರಹಿತವಾದ ಸುದ್ದಿ ಸೃಷ್ಟಿಸಬಹುದಾದ ಸಮಸ್ಯೆ-ತೊಂದರೆಗಳ ಸ್ಷಷ್ಟ ಅರಿವು ಮಹಾಂತೇಶ್ ಗಿದೆ.ಹಾಗಾಗಿ ದಾಖಲೆಗಳಿಲ್ಲದೆ ಸುದ್ದಿ ಬರೆಯುವ ಅಥವಾ ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ ಮಹಾಂತೇಶ್.

ಯಾರನ್ನೂ ವೈಯುಕ್ತಿಕವಾಗಿ ಟಾರ್ಗೆಟ್ ಮಾಡದೆ,ಯಾರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡದೆ,ಯಾರನ್ನೂ ಪ್ರಜ್ನಾಪೂರ್ವಕವಾಗಿ ನೋಯಿಸದಂತೆ,ಯಾರ ಮರ್ಜಿ,ಯಾರ ಖಯಾಲಿ,ಯಾರ ಹಿತಾಸಕ್ತಿಗೂ ಒಳಗಾಗದೆ ನಿಷ್ಟೆಯಿಂದ ಕೆಲಸ ಮಾಡುತ್ತಿರುವ ಜಿ,ಮಹಾಂತೇಶ್ ವಿರುದ್ಧ ಬೇಹುಗಾರಿಕೆ ನಡೆಯುತ್ತಿದೆ ಎನ್ನುವುದು ನಿಜಕ್ಕೂ ಪತ್ರಿಕೋದ್ಯಮಕ್ಕೆ ಎದುರಾಗಿರುವ ಸೈದ್ಧಾಂತಿಕ ಅಧಃಪತನ ಎತ್ತಿ ತೋರಿಸುತ್ತದೆ.ಏಕೆಂದರೆ ಅವರನ್ನು ಟಾರ್ಗೆಟ್ ಮಾಡುವುದೆಂದರೆ ಆದರ್ಶಯುತ ಪತ್ರಿಕೋದ್ಯಮದ ಕುತ್ತಿಗೆ ಹಿಸುಕಿದಂತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಜಿ.ಮಹಾಂತೇಶ್ ವಿರುದ್ಧ ಬೇಹುಗಾರಿಕೆ ನಡೆಯುತ್ತಿದೆ ಎನ್ನುವ ಸಂಗತಿಗೆ ಅವರನ್ನು ಅನೇಕ ದಿನಗಳಿಂದಲೂ ಬೆಂಬಲಿಸುತ್ತಾ ಬಂದಿರುವ ವ್ಯಕ್ತಿ ಹಾಗೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.ಹಾಗೊಂದು ರೀತಿಯಲ್ಲಿ ಬೇಹುಗಾರಿಕೆ ನಡೆಯುತ್ತಿದೆ ಎನ್ನುವುದಾದರೆ ಈ ಅಪಾಯವನ್ನು ಆರಂಭದಲ್ಲೇ ಮನಗಂಡು ಮಹಾಂತೇಶ್ ಗೆ ಸೂಕ್ತ ಭದ್ರತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದ್ದಾರೆ.ಹಲವರು ಅವರಿಗೆ ನೈತಿಕ ಸ್ಥೈರ್ಯ-ಬೆಂಬಲ ಘೋಷಿಸಿವೆ.ಸರ್ಕಾರದ ಗಮನ ಸೆಳೆಯೊಕ್ಕೆ ಮುಂದಾಗಿವೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಜಿ.ಮಹಾಂತೇಶ್ ರ ಸತ್ಯದ ದ್ವನಿ ಅಡಗಿಸಲು ಯತ್ನಿಸುತ್ತಿರುವವರ ನಡೆ ಖಂಡಿಸುವುದಲ್ಲದೇ ಅವರಿಗೆ ಬೇಕಾದ ನೈತಿಕ ಸ್ಥೈರ್ಯ-ಬೆಂಬಲ ನೀಡುತ್ತಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button