EXCLUSIVE..ಬೆಂಗಳೂರಿಗರೇ ಹುಷಾರ್..! “ಅಸಲಿ”ಹೋಲುವ “ನಕಲಿ”ದಾಖಲೆ ಸೃಷ್ಟಿಸುವ ಖತರ್ನಾಕ್ “ವಂಚಕ”ರಿದ್ದಾರೆ..
ನಕಲಿ ದಾಖಲೆ ಸೃಷ್ಟಿಯಲ್ಲಿ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿ ಶಾಮೀಲು,ಅಸಲಿಯತ್ತು ಪರಿಶೀಲಿಸದೆ ಬ್ಯಾಂಕ್ ಅಫ್ ಬರೋಡಾ,ಕೆನರಾ ಬ್ಯಾಂಕ್ ನಿಂದ ಕೋಟ್ಯಾಂತರ ಸಾಲ..
ಬೆಂಗಳೂರು:ರಾಜಧಾನಿ ಬೆಂಗಳೂರಿ ನಲ್ಲಿ ಸ್ವಂತಕ್ಕೊಂದು ಸೂರನ್ನೋ ..ತನ್ನದೆಂದು ಹೇಳಿಕೊಳ್ಳೊಕ್ಕೆ ಒಂದು ಪುಟ್ಟ ಜಾಗ ಮಾಡಿಕೊಳ್ಳುವ ಆಸೆ ಯಾರಿಗೆ ಇರೊಲ್ಲ ಹೇಳಿ.ಆದ್ರೆ ಜನರ ಈ ಮನಸ್ಥಿತಿಯೇ ಅನೇಕ ವಂಚಕರಿಗೆ ಹಣ ಮಾಡೊ ದಂಧೆಯಾಗಿಬಿಟ್ಟಿದೆ.
ನಿಮಗೆ ಇದನ್ನು ಕೇಳಿ ಆಶ್ಚರ್ಯ ಆಗಬಹುದು. ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ವರ ಜಾಲಕ್ಕೆ ಬೀಳುತ್ತಿರುವವರೆಲ್ಲಾ ಬುದ್ದಿವಂತರು.. ಓದಿಕೊಂಡವರು ಹಾಗೆಯೇ ಹಣವಂತರೆನ್ನುವುದು ವಿಪರ್ಯಾಸ. ಹೀಗೆ ಚಿನ್ನದ ಬೆಲೆ ಬಾಳುವ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಅದನ್ನು ಅನೇಕರಿಗೆ ಮಾರಾಟ ಮಾಡುವ ಜಾಲವೊಂದನ್ನು ಕೆಂಗೇರಿ ಪೊಲೀಸರು ದೂರಿನ ಮೇಲೆ ಪತ್ತೆ ಮಾಡಿ ಎಫ್ಐಆರ್ ಮಾಡಿದ್ದಾರೆ.ಆದ್ರೆ ಇದರ ಹಿಂದಿರುವ ಕಿಂಗ್ ಪಿನ್ ಗಳಿನ್ನು ಯಾಕೆ ಅವರ ಖೆಡ್ಡಾಕ್ಕೆ ಬಿದ್ದಿಲ್ವೋ ಎನ್ನುವುದನ್ನು ಅವರೇ ಹೇಳಬೇಕಷ್ಟೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ30-09-2023 ರಂದು ದೂರೊಂದು ದಾಖಲಾಗುತ್ತದೆ. ತಮಗೆ ವಂಚನೆಯಾಗಿದೆ ಎಂದು ದೂರನ್ನು ದಾಖಲಿಸಿದವರು ಲೊಕೇಶ್ ಎಂ.ಟಿ.ದೂರಿನ ಸಾರಾಂಶ ಗಮನಿಸಿದಾಗ ಯಾರನ್ನು ನಂಬೋದು..ಯಾರನ್ನು ಬಿಡೋದು..ಯಾರ ವಿಶ್ವಾಸದಲ್ಲಿ ವ್ಯವಹಾರ ಮಾಡೋದು..ಯಾವುದು ನಕಲಿ..ಯಾವುದು ನಕಲಿ..ಆ ದಾಖಲೆಗಳ ಮೇಲೆ ಬ್ಯಾಂಕ್ ಸಾಲ ನೀಡುವಾಗ ಪೂರ್ವಾಪರವನ್ನೇ ಪರಿಶೀಲಿಸುವುದಿಲ್ಲವೇ.. ಅಥವಾ ಈ ದಂಧೆಯಲ್ಲಿ ಬ್ಯಾಂಕ್ ನಲ್ಲಿರುವ ಕೆಲವರು ಶಾಮೀಲಾಗಿರುತ್ತಾರಾ ಎನ್ನುವ ಪ್ರಶ್ನೆ ಮೂಡಿದ್ದು ಸಹಜ.ಯಾಕಂದ್ರೆ ಈ ಪ್ರಕರಣವೇ ಅಷ್ಟೊಂದು ಕುತೂಹಲಕರವಾಗಿದೆ.
ಪೊಲೀಸರು ಮಾಡಿರುವ ಎಫ್ ಐ ಆರ್ ನಲ್ಲಿ ಉಲ್ಲೇಖವಾಗಿರುವ ಅಂಶಗಳ ಅನ್ವಯವೇ ಹೇಳುವುದಾದರೆ ಲೋಕೇಶ್ ಎಂ ಟಿ ರವರು ಮೈಲಸಂದ್ರ ಗ್ರಾಮದ ಸರ್ವೆ ನಂಬರ್ 58/ 2 ರಲ್ಲಿರುವ ಸೈಟ್ ನಂಬರ್ 64 ರಲ್ಲಿನ 60*40 ಅಳತೆಯ ಸ್ವತ್ತು ಇವತ್ತಿಗೆ ಕೋಟಿಗಳಿಗೆ ಬೆಲೆ ಬಾಳುತ್ತೆ.ಆ ಸೈಟ್ ನ ಮೂಲ ಮಾಲೀಕರು ಗೋಪಾಲಕೃಷ್ಣ ಶರ್ಮ. ಮೇಲ್ಕಂಡ ಸೈಟಿಗೆ ಸಂಬಂಧಪಟ್ಟಂತೆ 13- 9- 2018 ರಂದು ತಮಗೆ ಎಸ್ ಪಿ ಎ ( ಸೇಲ್ಸ್ ಅಂಡ್ ಪರ್ಚ್ಯೂಸ್ ಅಗ್ರಿಮೆಂಟ್) ಮಾಡಿಕೊಟ್ಟಿದ್ದರು.
ಮೇಲ್ಕಂಡ ಸ್ವತ್ತಿನ ಸುಪರ್ದಿ ತಮಗೆ ವಹಿಸಿದ್ದರಿಂದ ಆಗಾಗ ಅದರ ಇ.ಸಿ ಪರೀಕ್ಷಿಸುತ್ತಿದ್ದರು.ದೂರು ದಾಖಲಿಸುವ ಒಂದು ವಾರದ ಹಿಂದೆಯೂ ಇ.ಸಿ ತೆಗೆಸಿ ನೋಡಿದಾಗ ಚೇತನ್ ತಬ್ಬಿಬ್ಬಾದರಂತೆ.ಅಲ್ಲಿ ನಡೆದಿದ್ದ ಫ್ರಾಡ್ ನ್ನು ಅರಗಿಸಿಕೊಳ್ಳಲಿಕ್ಕಾಗಲೇ ಇಲ್ವಂತೆ. ಏಕೆಂದರೆ ಸ್ವತ್ತಿನ ಮೂಲ ಮಾಲೀಕರಾದ ಗೋಪಾಲಕೃಷ್ಣ ಶರ್ಮರವರು ಚೇತನ್ ಎನ್ನುವವರಿಗೆ 13-07- 2020 ರಂದು ಜಿ.ಕೆ ಶರ್ಮ ಹೆಸರಿನಲ್ಲಿ ದಾನ ಪತ್ರ ಮಾಡಿಕೊಟ್ಟಂತಾಗಿತ್ತು.
“ಕೆಂಗೇರಿ ಪೊಲೀಸರಿಗೆ ಹ್ಯಾಟ್ಸಾಫ್: ಆದ್ರೆ ಕಿಂಗ್ ಪಿನ್ ಗಳಿನ್ನೂ ತಲೆಮರೆಸಿಕೊಂಡಿದ್ದಾರೆ:
ನಕಲಿ ದಾಖಲೆಗಳನ್ನು ಅಸಲಿಯ ತಲೆ ಮೇಲೆ ಹೊಡೆದಂಗೆ ಸೃಷ್ಟಿಸಿ ಅನೇಕರನ್ನು ವಂಚಿಸುವ ಜಾಲವನ್ನು ಪೊಲೀಸರು ಪತ್ತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ .ಇಂಥ ಕೆಲಸ ಅವರಿಂದ ಇನ್ನಷ್ಟು ನಡೆಯಲಿ ಎನ್ನುವುದು ನಮ್ಮ ಆಶಯ.ಇದರ ಜತೆಜತೆಗೇನೆ ಮೇಲ್ಕಂಡ ಅಕ್ರಮದಂತೆಯೇ ಅನೇಕರನ್ನು ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಖತರ್ನಾಕ್ ಗಳು ಇನ್ನೂ ಇದ್ದಾರೆ.ಮಾಜಿ ಮುಖ್ಯಮಂತ್ರಿ ಯೊಬ್ಬರ ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಯಾಮಾರಿಸುತ್ತಿರುವ ಈ ಖತರ್ನಾಕ್ ಗಳ ಒಂದಷ್ಟು ಮಾಹಿತಿ ಕೆಂಗೇರಿ ಪೊಲೀಸರಿಗೆ ಇದ್ದರೂ ಇರಬಹುದೇ ನೋ.. ಬಹುಷಃ ತನಿಖೆ ಪ್ರಗತಿಯಲ್ಲಿರುವುದರಿಂದ ಅದನ್ನವರು ಬಹಿರಂಗಪಡಿ ಸುತ್ತಿಲ್ಲ ಎನಿಸುತ್ತದೆ.ಈ ಖತರ್ನಾಕ್ ಗಳ ಜತೆ ಶಾಮೀಲಾಗಿ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಭ್ರಷ್ಟ ಹಾಗೂ ನೀಚ ಅಧಿಕಾರಿಗಳು ಹಣದಾಸೆಗೆ ವಂಚನೆಗೆ ಕೈ ಜೋಡಿಸಿರುವುದು ಕೂಡ ಆತಂಕಕಾರಿ.ಆ ಎಲ್ಲಾ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿ ಇದೆ.ಇನ್ನಷ್ಟು ಮಾಹಿತಿ ಅಗತ್ಯವಿರುವುದರಿಂದ ಎಲ್ಲಾ ಲಭ್ಯವಾದ ಮೇಲೆ ಅದನ್ನು ಸ್ಪೋಟಿಸಲಿ ದ್ದೇವೆ.ಅಷ್ಟರೊಳಗೆ ಕೆಂಗೇರಿ ಪೊಲೀಸರೇ ಅವರನ್ನು ಪಾತಾಳಗರಡಿ ಹಾಕಿಯಾದ್ರೂ ಹಿಡಿದು ಸಾರ್ವಜನಿಕರ ಮುಂದೆ ನಿಲ್ಲಿಸುತ್ತಾರೆ ನ್ನುವ ವಿಶ್ವಾಸ ನಮ್ಮದು..ಅದು ಆಗದಿದ್ದಲ್ಲಿ ಕನ್ನಡ ಫ್ಲ್ಯಾಶ್ ನ್ಯೂಸೇ ಅದನ್ನು ಬಟಾಬಯಲು ಮಾಡಲಿದೆ. ಇದು ನಿಶ್ಚಿತ.
ಅಷ್ಟೇ ಅಲ್ಲ ಆ 60*40 ಅಳತೆಯ ಸ್ವತ್ತನ್ನು 17-9-2022 ರಂದು ಎರಡು ಭಾಗವಾಗಿ ಮಾಡಿ ಅದರಲ್ಲಿ 17.1/2*40 ಅಳತೆ ಸೈಟನ್ನು ರಂಗನಾಥ್ ಎಂ ಎಂಬುವರಿಗೂ ಉಳಿದ 17.1/2*40 ಸೈಟನ್ನು ಮಹಮದ್ ಶರೀಫ್ ಓ.ಕೆ ಎಂಬುವರಿಗೆ ಮಾರಾಟ ಮಾಡಿರುವಂತೆ ಕಂಡುಬಂದಿರುತ್ತದೆ.ಕೊಂಚ ಆತಂಕಗೊಂಡ ಲೋಕೇಶ್ ಅವರು ಜಿ.ಕೆ ಶರ್ಮರವನ್ನು ಸಂಪರ್ಕಿಸಿ ವಿಚಾರ ಮಾಡಿದಾಗ ಸೈಟ್ ನಂಬರ್ 64 ನ್ನು 25-20195 ರಂದು ಶಾಂತ ಕುಮಾರ್ ಅವರ ಕಡೆಯಿಂದ ಶುದ್ಧ ಕ್ರಯಕ್ಕೆ ಪಡೆದಾಗಿನಿಂದಲೂ ತನ್ನ ಸ್ವಾದೀನಾನುಭವದಲ್ಲಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಹಿಂದೆ ಏನೋ ನಡೆದಿದೆ..ಇದರಲ್ಲಿ ಖತರ್ನಾಕ್ ಗಳ ಕೈವಾಡ ಇದೆ ಎನ್ನುವುದನ್ನು ಅರ್ಥ ಮಾಡಿಕೊಂಡ ಬಳಿಕ ಲೋಕೇಶ್ ಅವರು, 2020ರ ಡಿಸೆಂಬರ್ ತಿಂಗಳಿನಲ್ಲಿ ಸದರಿ ಸೈಟ್ ನ ಸೇಲ್ ಡೀಡ್ ನ್ನು ಹುಡುಕುವ ಪ್ರಯತ್ನ ಮಾಡ್ತಾರೆ. ಕಾಣದೇ ಹೋದಾಗ 02-12-2020 ರಂದು “ಇ-ಲಾಸ್ಟ್” ಆಪ್ ನಲ್ಲಿ ದೂರು ದಾಖಲಿಸಲಾಗ್ತದೆ.ಆಗಲೇ ತಿಳಿದಿದ್ದು ಚೇತನ್ ಎಂಬ ಖತರ್ನಾಕ್ ಮನುಷ್ಯನ ವಂಚನಾಪುರಾಣದ ಅಸಲಿಯತ್ತು.ಕಳೆದು ಹೋಗಿದ್ದ ಸ್ವತ್ತಿನ ಮಾಹಿತಿ ಪಡೆದು ಆತ ಇಲ್ಲದ ಜಿ.ಕೆ ಶರ್ಮಾ ಅಲಿಯಾಸ್ ಗೋವಿಂದರಾಜ್ ಎನ್ನುವವರನ್ನು ಸೃಷ್ಟಿಸಿ ನಕಲಿ ದಾಖಲೆಯನ್ನು ಸತ್ಯದ ತಲೆ ಮೇಲೆ ಹೊಡೆದಂಗೆ ಸೃಷ್ಟಿಸಿದ್ದಲ್ಲದೇ 13-07-2020 ರಂದು ಇದೇ ಜಿ.ಕೆ ಶರ್ಮಾ ಮೇಲ್ಕಂಡ ಸ್ವತ್ತಿನ ದಾನಪತ್ರವನ್ನು ತನಗೆ ಮಾಡಿಕೊಟ್ಟಂತೆ ಸೀನ್ ಕ್ರಿಯೇಟ್ ಮಾಡ್ತಾನೆ.
ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿ:ಮೊದಲಿಂದಲೂ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿ ಎಂದ್ರೆ ಅದು ಅಕ್ರಮಗಳ ತಾಣ ಎನ್ನುವ ಆಪಾದನೆ ಇದೆ. ಅಂದ್ಹಾಗೆ ಈ ಚೇತನ್ ಅಂಡ್ ಆತನ ಹಿಂದೆ ಇರಬಹುದಾದ ಖತರ್ನಾಕ್ ಗಳ ಟೀಮ್ ನಕಲಿ ದಾಖಲೆ ಸೃಷ್ಟಿಸಿದ್ದೂ ಇದೇ ಕಚೇರಿಯಲ್ಲಿಯಂತೆ.13-7-2020 ರಂದು ಜಿಕೆ ಶರ್ಮರವರು ಮೇಲ್ಕಂಡ ಸ್ವತ್ತನ್ನು ದಾನ ಪತ್ರ ಮಾಡಿಕೊಟ್ಟ ಹಾಗೆ ಕೆಂಗೇರಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಹಾಗೆ ದಾಖಲೆ ಸೃಷ್ಟಿಸಲಾಯಿತಂತೆ.
ಕೆನರಾಬ್ಯಾಂಕ್ ನಲ್ಲಿ 50 ಲಕ್ಷ ಅಡಮಾನ ಸಾಲ: ಹೀಗೆ ಸೃಷ್ಟಿಯಾದ ದಾಖಲೆಗಳನ್ನು 8-2-2021 ರಂದು ಈ ಚೇತನ್, ಕೆನರಾ ಬ್ಯಾಂಕ್ ನ ಬೊಮ್ಮಸಂದ್ರ ಬ್ರಾಂಚ್ ನಲ್ಲಿ ಅಡವಿಟ್ಟು 50 ಲಕ್ಷ ಸಾಲ ಕೂಡ ಪಡೆದಿದ್ದನಂತೆ. ಆ ಸಮಯದಲ್ಲಿ ಜಿ.ಕೆ ಶರ್ಮಾದವರಿಂದ ಕಳೆದು ಹೋಗಿದೆ ಎಂದು ಸೃಷ್ಟಿಸಲಾದ ಸೇಲ್ ಡೀಡ್ ನ್ನು ಕೂಡ ಅಡವಿಟ್ಟಿರುವುದು ಗೊತ್ತಾಗಿದೆ. ದಾಖಲೆಗಳ ಅಸಲಿಯತ್ತು ಗಮನಿಸಬೇಕಾದ ಕೆನರಾಬ್ಯಾಂಕ್ ನ ಮ್ಯಾನೇಜರ್ ಅದ್ಹೇಗೆ ಕಣ್ಮುಚ್ಚಿಕೊಂಡು 50 ಲಕ್ಷ ಸಾಲವನ್ನು ಕೊಟ್ಟರೋ ಗೊತ್ತಾಗುತ್ತಿಲ್ಲ.ಮ್ಯಾನೇಜರ್ ನ ಹೆಡೆಮುರಿ ಕಟ್ಟಿದರೆ ಬಹುಷಃ ಸತ್ಯ ಬಯಲಾಗಬಹುದೇನೋ.?
ಅಷ್ಟರ ನಡುವೆ ಇದೇ ಚೇತನ್ ಮತ್ತೊಂದು ಖತರ್ನಾಕ್ ಐಡ್ಯಾ ಮಾಡಿದ್ದಾನೆ. ದಿನಾಂಕ 10.3.2021 ರಂದು ಲೋನ್ ಕ್ಲಿಯರ್ ಮಾಡಿದ್ದಾನೆ.ಬಳಿಕ 60*40 ಅಳತೆಯ ತಲಾ ಎರಡು ಭಾಗಗಳನ್ನಾಗಿ ಮಾಡಲಾಗಿದ್ದ 17.1/2*40 ಅಳತೆಯ ಸೈಟ್ ಗಳನ್ನು 17-9-2022 ರಂದು ರಂಗನಾಥ ಎಂ ಮತ್ತು ಮೊಹಮ್ಮದ್ ಶರೀಫ್ ಅವರಿಗೆ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಲಾ 56 ಲಕ್ಷ ರೂಗೆ ಮಾರಾಟ ಮಾಡಿರುವುದಾಗಿ ಸೇಲ್ ಡೀಡ್,ನಕಲಿ ಖಾತೆ,ಟ್ಯಾಕ್ಸ್ ಪೇಯ್ಡ್ ರಿಸಿಪ್ಟ್ ಕೂಡ ಸೃಷ್ಟಿಸಿದ್ದಾನೆ.
ಈ ದಾಖಲೆಗಳನ್ನು ಇಟ್ಟುಕೊಂಡು ರಂಗನಾಥ ಎಂ ಮತ್ತು ಮೊಹಮ್ಮದ್ ಶರೀಫ್ ಅವರು 30-09-2020 ರಂದೇ ಬ್ಯಾಂಕ್ ಆಫ್ ಬರೋಡ, ಜೆಪಿ ನಗರದ ಆಕ್ಸ್ಫರ್ಡ್ ಸ್ಕೂಲ್ ನ ಬ್ರಾಂಚ್ ನಲ್ಲಿ ತಲಾ 50 ಲಕ್ಷ ಸಾಲ ಪಡೆದುಕೊಂಡಿದ್ದಾರೆ.ಈ ವೇಳೆ ಜಿ.ಕೆ ಶರ್ಮಾರ ಕಳೆದು ಹೋಗಿದ್ದ ಸೇಲ್ ಡೀಡ್ ನ್ನು ಕೂಡ ಒತ್ತೆ ಇಟ್ಟಿರುವುದು ಗೊತ್ತಾಗಿದೆ.ಆಶ್ವರ್ಯ ಎಂದ್ರೆ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ ಮ್ಯಾನೇಜರ್ ಕೂಡ ದಾಖಲೆಗಳ ಅಸಲಿಯತ್ತ ನ್ನು ಪರೀಕ್ಷಿಸಬೇಕಿತ್ತು.ಆದರೆ ಹಾಗೆ ಏಕೆ ಮಾಡಲಿಲ್ಲ ಎನ್ನುವುದು ಪ್ರಶ್ನೆ.ಅಕ್ರಮಕ್ಕೆ ಸಾಥ್ ಕೊಡಲು ಕಿಕ್ ಬ್ಯಾಕ್ ಏನಾದ್ರೂ ಪಡೆದುಕೊಂಡ್ರಾ ಎನ್ನುವ ಶಂಕೆ ಕಾಡುತ್ತಿದ್ದು ಮ್ಯಾನೇಜರ್ ತನಿಖೆ ಆಗಬೇಕಿರುವುದು ಅತ್ಯಗತ್ಯ.
ಮೇಲ್ಕಂಡ ಪ್ರಕರಣದಲ್ಲಿ ಈ ಎಲ್ಲಾ ವಂಚನೆಯ ಸೂತ್ರದಾರ ಚೇತನ್ ಕುಮಾರ್ ನ್ನು ಎ-1 ಮಾಡಲಾಗಿದೆ.ಭಾಗಿಯಾಗಿದ್ದರೆನ್ನಲಾದ ರಂಗನಾಥ್ ಎಂ,ಮೊಹಮದ್ ಷರೀಫ್ ರನ್ನು ಎ-2,ಎ-3 ಮಾಡಲಾಗಿದೆ.ನಕಲಿ ಜಿ.ಕೆ ಶರ್ಮಾರನ್ನು ಎ-4 ನ್ನಾಗಿ ಮಾಡಲಾಗಿದೆ.ಪ್ರಕರಣವನ್ನು ದಾಖಲಿಸಿ ಕೊಂಡಿರುವ ಠಾಣಾಧಿಕಾರಿಗಳಾದ ಸಂಜೀವ್ ಗೌಡ,ಕರಿಯಣ್ಣರ ತಂಡ ಇದರಿಂದೆ ಇರುವ ಮತ್ತಷ್ಟು ದಾಖಲೆಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ನಿರತವಾಗಿದೆ.
ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ, ಕೆನರಾ ಬ್ಯಾಂಕ್ ನ ಬೊಮ್ಮಸಂದ್ರ ಬ್ರಾಂಚ್ ಮತ್ತು ಬ್ಯಾಂಕ್ ಆಫ್ ಬರೋಡ, ಜೆಪಿ ನಗರದ ಆಕ್ಸ್ಫರ್ಡ್ ಸ್ಕೂಲ್ ನ ಬ್ರಾಂಚ್ನ ಅಧಿಕಾರಿಗಳು ಪಕ್ಕಾ ಈ ಅಕ್ರಮದಲ್ಲಿ ಶಾಮೀಲಾಗಿರುವುದು ಪ್ರಕರಣ ಗಮನಿಸಿದಾಗ ಮೇಲ್ನೋಟಕ್ಕೆ ಗೊತ್ತಾಗುತ್ತೆ.ಪೊಲೀಸರು ಈ ನಿಟ್ಟಿನಲ್ಲಿ ತಲೆಕೆಡಿಸಿಕೊಂಡ್ರೆ ಬಹುದೊಡ್ಡ ಜಾಲವನ್ನು ಬೇಧಿಸಿದ ಪುಣ್ಯಕ್ಕೆ ಪಾತ್ರರಾಗುತ್ತಾರೆ.