ಕಟ್ಟಡ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ; ಮಾಲೀಕ, ಗುತ್ತಿಗೆದಾರ ಅರೆಸ್ಟ್
ಭಾರೀ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದ ಮಾಲೀಕನನ್ನು ಬಂಧಿಸಲಾಗಿದೆ.
ಹೆಣ್ಣೂರು ಬಳಿಯ ಹೊರಮಾವು ಅಗ್ರಹಾರ ಸಮೀಪದ ಬಾಬಾ ಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಮಂಗಳವಾರ ಮಧ್ಯಾಹ್ನ ಕುಸಿದುಬಿದ್ದಿದ್ದು, 5 ಮಂದಿ ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ. 15 ಮಂದಿಯನ್ನು ರಕ್ಷಿಸಲಾಗಿದೆ.
ಭುವನ್ ರೆಡ್ಡಿ ಬಂಧಿತ ವ್ಯಕ್ತಿ. ಅವಘಡ ಸಂಭವಿಸಿದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿತ್ತು. ಈತ ಮೊದಲನೇ ಆರೋಪಿ ಮುನಿರಾಜ ರೆಡ್ಡಿಯ ಮಗ. ಹೆಣ್ಣೂರು ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.
ಕಾಂಟ್ರಾಕ್ಟರ್ ಮುನಿಯಪ್ಪನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿಯಪ್ಪ 4ನೇ ಮಹಡಿವರೆಗೆ ಕಟ್ಟಡ ನಿರ್ಮಾಣ ಮಾಡಿದ್ದ. ಹೀಗಾಗಿ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಿಎನ್‌ಎಸ್ (BNS), ಬಿಬಿಎಂಪಿ(BBMP) ಆರ್‌ಇಆರ್‌ಎ (RERA) ಆ್ಯಕ್ಟ್ ಹಾಗೂ ರೇರಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಇವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಬುಧವಾರವೂ ಮುಂದುವರಿಸಿದ್ದಾರೆ. ಕಟ್ಟಡ ಕುಸಿದ ಸ್ಥಳಕ್ಕೆ ಸಚಿವ ಕೆಜೆ ಜಾರ್ಜ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭೇಟಿ ನೀಡಿ ಪರಿಹಾರ ಕಾರ್ಯದ ಪರಿಶೀಲನೆ ನಡೆಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಳಗೆ ಸುಮಾರು 20 ಮಂದಿ ಇದ್ದರು ಎಂದು ಹೇಳಲಾಗಿದೆ. ಕಟ್ಟಡದಲ್ಲಿದ್ದ ಹಲವು ಕಾರ್ಮಿಕರು ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದರು. ಸುಮಾರು 16 ಗಂಟೆಯ ಕಾರ್ಯಾಚರಣೆಯಲ್ಲಿ ಆವಶೇಷಗಳಗಡಿ ಸಿಲುಕಿದ್ದ ಆಯೇಷ್ ಎಂಬಾತನನ್ನು ರಕ್ಷಿಸಲಾಗಿದೆ.
60ಷ40 ಸೈಟ್ ನಲ್ಲಿ ಅಕ್ರಮವಾಗಿ 6 ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿತ್ತು. ಬೆಂಗಳೂರಿನಲ್ಲಿ ಅಕ್ರಮವಾಗಿ ಎತ್ತರ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.