ವಿಜಯನಗರ: ಕಲುಷಿತ ನೀರು ಸೇವಿಸಿ 5 ಮಂದಿ ಸಾವು, 50 ಮಂದಿ ಅಸ್ವಸ್ಥ
ಕಲುಷಿತ ನೀರು ಸೇವಿಸಿ 8 ತಿಂಗಳ ಹಸುಗೂಸು ಸೇರಿ 5 ಮಂದಿ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ.
ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಗಂಡು ಮಗು ಮೃತಪಟ್ಟಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ವಾರ ಮೂವರು ಮೃತಪಟ್ಟಿದ್ದಾರೆ. ಆದರೂ ಕೂಡ ಸ್ಥಳಕ್ಕೆ ಭೇಟಿ ನೀಡದೆ ಆರೋಗ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಂತಿ ಭೇದಿಯಿಂದ ಜನರು ನರಳುತ್ತಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿವಾಸಿಗಳು ಸಾಯುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ಗರ್ಭಿಣಿ ನಿಂಗಮ್ಮ ಎನ್ನುವವರಿಗೆ ಕೂಡ ವಾಂತಿಭೇದಿ ಕಾಣಿಸಿಕೊಂಡಿದ್ದು, ಹೆರಿಗೆ ವೇಳೆ ಗಂಡು ಮಗು ಕೂಡ ಸಾವನ್ನಪ್ಪಿದೆ. ಇದಕ್ಕೆ ಗ್ರಾಮಕ್ಕೆ ಸರಬರಾಜು ಆಗುವ ನಲ್ಲಿಯಲ್ಲಿ ಕಲುಷಿತ ನೀರು ಬಂದು ವಾಂತಿ ಭೇದಿಯಾಗುತ್ತಿದೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ.