BREAKING NEWSEXCLUSIVE NEWSKANNADAFLASHNEWSPOLITICAL NEWSSPECIALSTORIES

ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

Share

ಕರೆದಾಗ ಬರಬೇಕಂತೆ…ಹೇಳಿದ್ದಲ್ಲಿ ಬೈಟ್ ತಗೋಬೇಕಂತೆ..ಹಿಂದೆಮುಂದೆ ಅಡ್ಡಾಡುವಂತಿಲ್ವಂತೆ..ಹೇಳಿದಷ್ಟನ್ನೇ ಕೇಳ್ಕೊಂಡು ಹೋಗ್ಬೇಕಂತೆ..ಏನಿದು ಇದೆಲ್ಲಾ..?!

ಬೆಂಗಳೂರು: ಕುಣಿಯಲಿಕ್ಕಾಗದವಳು ನೆಲ ಡೊಂಕು ಎಂದಳಂತೆ ಎನ್ನುವಂತಾಗಿದೆ ರಾಜ್ಯ ಸರ್ಕಾರದ ಧೋರಣೆ. ತನ್ನಲ್ಲಿರುವ ಹುಳುಕುಗಳನ್ನು ಸರಿ ಮಾಡಲು ಸಾಧ್ಯವಾಗದೆ ಮಾದ್ಯಮಗಳ ಮೇಲೆ ನಿರ್ಬಂದ-ನಿಯಂತ್ರಣ ಹೇರೊಕ್ಕೆ ಮುಂದಾಗಿದೆ ಎನ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ರೀತಿಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾದ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಮಾದ್ಯಮಗಳಿಂದ ಮಂತ್ರಿ ಮಹೋದಯರ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತಿದೆ. ಸಚಿವಾಲಯದ ಕೆಲಸ ಕಾರ್ಯಗಳಿಗೆ ತೀವ್ರತರದ ತೊಂದರೆ ಆಗುತ್ತಿದೆ ಎನ್ನುವ ಅಂಶಗಳನ್ನು ಉಲ್ಲೇಖಿಸಿ ವಿಧಾನಸೌಧ ಭದ್ರತಾ ವಿಭಾಗದ ಸಹಾಯಕ ಆಯುಕ್ತರು ಆಡಳಿತ ಮತ್ತು ಸುಧಾರಣಾ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.ವಿಧಾನಸೌಧದಲ್ಲಿ ನಡೆಯುವ ಎಲ್ಲಾ ಆವಾಂತರಗಳಿಗು ಮಾದ್ಯಮಗಳನ್ನೇ ಹೊಣೆ ಮಾಡುವಂತಿರುವ ಈ ಪತ್ರದ ಬಗ್ಗೆ ಮಾದ್ಯಮಗಳನ್ನು ಪ್ರತಿನಿಧಿಸುವ ಸಂಘ-ಸಂಘಟನೆಗಳು ದ್ವನಿ ಎತ್ತದಿರುವುದು ಅಚ್ಚರಿ ಜತೆಗೆ ಗಾಬರಿ ಸೃಷ್ಟಿಸಿದೆ.

ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನಸೌಧ ಕೇವಲ ಜನಪ್ರತಿನಿಧಿಗಳ ಸ್ವತ್ತಾ..? ಅವರ ಕಾರುಬಾರಿಗೆ-ದರ್ಬಾರ್ ಗೆ ಮಾತ್ರ ಸೀಮಿತವಾಗಿರುವ ಕಟ್ಟಡನಾ.? ಸಚಿವಾಲಯದ ನೌಕರ ಸಿಬ್ಬಂದಿ ಮತ್ತು ಇವರನ್ನು ಬಿಟ್ಟರೆ ಬೇರೆ ಯಾರಿಗೂ ಇಲ್ಲಿ ಪ್ರವೇಶ ಇಲ್ಲವಾ..?ಇಂತದೊಂದಿಷ್ಟು ಪ್ರಶ್ನೆಗಳು ಮಾದ್ಯಮಗಳನ್ನು ಕೆರಳಿ ಕೆಂಡವಾಗಿಸುತ್ತಿದೆ.ಮಾದ್ಯಮಗಳ ತಾಳ್ಮೆ-ಸಂಯಮ ಪರೀಕ್ಷಿಸುವ ರೀತಿಯಲ್ಲಿ ಸರ್ಕಾರ ತೊಡೆ ತಟ್ಟುತ್ತಿದೆಯಾ ಎನಿಸುತ್ತಿದೆ.ಸುದ್ದಿಯ ಕಾರಣಕ್ಕೆ ಮಾದ್ಯಮಗಳನ್ನು  ಹತ್ತಿರ ಬಿಟ್ಟುಕೊಳ್ಳುತ್ತಿದ್ದ, ಆತ್ಮೀಯವಾದ ಒಡನಾಟ ಇರಿಸಿಕೊಳ್ಳುತ್ತಿದ್ದ ಸರ್ಕಾರಗಳು ಇತ್ತೀಚೆಗೆ ಮಾದ್ಯಮಗಳನ್ನು ಕಂಡರೆ ಉರಿದುಬೀಳುವಂತಾಗಿದೆ.ಮಾದ್ಯಮಗಳನ್ನು ಗುಮ್ಮನ ರೀತಿ ಭಾವಿಸುವ ಅವುಗಳಿಂದ ಭಾರ ಅಂತರ ಕಾಯ್ದುಕೊಳ್ಳುವ ಬೆಳವಣಿಗೆಗಳಾಗುತ್ತಿವೆ.ಇದರ ಆತಂಕಕಾರಿ ಪರಿಣಾಮವೇ, ಮಾದ್ಯಮಗಳನ್ನು ವಿಧಾನಸೌಧದಿಂದ ಹೊರಗಿಡುವಂಥ ಪ್ರಯತ್ನ..ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ-ಹರಣ ಅಲ್ಲದೆ ಇನ್ನೇನು..? ಇದನ್ನು ಮಾದ್ಯಮಗಳು ಹೇಗೆ ಸಹಿಸಿಕೊಂಡಿವೆಯೊ ಗೊತ್ತಾಗ್ತಿಲ್ಲ.

ಜಿ.ಮಹಾಂತೇಶ್ ಅವರ ತನಿಖಾ ಪತ್ರಿಕೋದ್ಯಮದ ಮಂಚೂಣಿ ವೆಬ್ ಸೈಟ್  ದಿ ಫೈಲ್ ಪ್ರಕಟಿಸಿದ ವರದಿಯೊಂದನ್ನು ನೋಡಿ ನಿಜಕ್ಕು ಗಾಬರಿಯಾಯ್ತು.ದಿ ಫೈಲ್ ಪ್ರಕಟಿಸಿರುವ ವರದಿ ಪ್ರಕಾರವೇ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಆಯುಕ್ತ ಎಂ.ಎನ್  ಕರಿಬಸವನಗೌಡ ಅವರು  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ  ಬರೆದಿದ್ದಾರೆನ್ನಲಾಗಿರುವ ಪತ್ರಕ್ಕೆ ಅಂತಿಮಮುದ್ರೆ ಬಿದ್ದಿದ್ದೇ ಆದಲ್ಲಿ, ಮಾದ್ಯಮಗಳ ಸ್ವಾತಂತ್ರ್ಯ ಬಹುತೇಕ ದಮನ ಆದಂತೆ.ಸರ್ಕಾರ ರೂಪಿಸಿದ ನಿಯಮಗಳ ಅನ್ವಯವೇ ಮಾದ್ಯಮಗಳು ಕೇಳಬೇಕಾದ ಪರಿಸ್ತಿತಿ ಬರುತ್ತದೆ.ಅವರು ನಿಗಧಿಪಡಿಸಿದ ಸ್ಥಳದಲ್ಲಿಯೇ ಬೈಟ್ಸ್-ಹೇಳಿಕೆ-ಅಭಿಪ್ರಾಯ ಕೇಳಬೇಕಾದ ಸ್ತಿತಿ ಎದುರಾಗುತ್ತದೆ.ನಿಯಮ ಮೀರಿ ಮಾದ್ಯಮಗಳು ವಿಧಾನಸೌಧದಲ್ಲಿ ವರ್ತಿಸಿದ್ದೇ ಆದಲ್ಲಿ ಬಹುಷಃ ಕಾನೂನುಪ್ರಕಾರ ಶಿಕ್ಷೆ ನೀಡುವಂತ ವ್ಯವಸ್ಥೆ ಜಾರಿಯಾದರೂ ಆಶ್ವರ್ಯವಿಲ್ಲವೇನೋ..?

ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಆಯುಕ್ತ ಎಂ.ಎನ್  ಕರಿಬಸವನಗೌಡ ಅವರು ಬರೆದಿರುವ ಪತ್ರದಲ್ಲಿ ಎಷ್ಟೊಂದು ಮಾರಕವಾದ ಸಂಗತಿಗಳು ಇವೆ ಎಂದ್ರೆ,ಪ್ರತಿನಿತ್ಯ ವಿಧಾನಸೌಧ ಕಟ್ಟಡದಲ್ಲಿ  ಮಾದ್ಯಮ ಪ್ರತಿನಿಧಿಗಳು ಅಡ್ಡಾಡುವುದರಿಂದ ಗಣ್ಯ ವ್ಯಕ್ತಿಗಳ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತದೆಯಂತೆ.ವಿಧಾನಸೌಧ ಕಟ್ಟಡದಲ್ಲಿ ಅವರಿಗೆ ಮೀಸಲಿಟ್ಟಿರುವ ಮೀಡಿಯಾ ಸ್ಟ್ಯಾಂಡ್ ಬಳಿ ಮಾತ್ರ ಜನಪ್ರತಿನಿಧಿಗಳ ಬೈಟ್ ಪಡೆಯುವ ವ್ಯವಸ್ಥೆ ಮಾಡಬೇಕು. ವಿಧಾನಸೌದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ-ಪತ್ರಿಕಾಗೋಷ್ಟಿಗಳಿಗೆ ಆಹ್ವಾನ ನೀಡಿದ್ದಲ್ಲಿ ಮಾತ್ರ ಹಾಜರಾಗಬೇಕು.ಜನಪ್ರತಿನಿಧಿಗಳನ್ನು ಅನಾವಶ್ಯಕವಾಗಿ ಬೈಟ್-ಹೇಳಿಕೆಗೆ ಹಿಂಬಾಲಿಸುವುದರಿಂದ ಸುರಕ್ಷತೆ-ಭದ್ರತೆಗೆ ದಕ್ಕೆ ಆಗುತ್ತದೆ ಎಂಬೆಲ್ಲಾ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಇದೆಲ್ಲವನ್ನು ಹೇಳೊಕ್ಕಿಂತ ನೀವ್ಯಾರು ವಿಧಾನಸೌಧಕ್ಕೆ ಬರಲೇಬೇಡಿ.ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಅಧೀಕೃತವಾಗಿ ಸರ್ಕಾರ ಘೋಷಿಸುವುದು ಸೂಕ್ತ ಎಂದು ವಿಧಾನಸೌದ ರೌಂಡ್ಸ್ ಮಾಡುವ ಅನೇಕ ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾದ್ಯಮಗಳಿಗೆ ನಿರ್ಬಂಧ ಹೇರುವಂಥ  ಅನಾಗರಿಕ,ಅಸಮಂಜಸ ಆಲೋಚನೆಗಿಂತ  ಸರ್ಕಾರವನ್ನು ಆಳುವ ಜನಪ್ರತಿನಿಧಿಗಳು ತಮ್ಮ ವ್ಯಕ್ತಿತ್ವ-ವರ್ತನೆ ಬದಲಿಸಿಕೊಳ್ಳೋದು ಒಳ್ಳೆಯದು.ಸರ್ಕಾರವನ್ನು ರಚನಾತ್ಮಕವಾಗಿ ಟೀಕಿಸುವ ಸ್ವಾತಂತ್ರ್ಯನೂ ಮಾದ್ಯಮಕ್ಕಿಲ್ಲವೇ..? ಇವತ್ತಿಗಿಂತ( ರಾಜಕಾರಣಿಗಳ ಚೇಲಾ ಬಾಲಗಳಂತಾಗಿರುವ ಕೆಲವು ಪತ್ರಕರ್ತರು) ಹಿಂದೆ ಇದ್ದಂತ ನಿಷ್ಟೂರವಾದಿ ಪತ್ರಕರ್ತರೇನಾದ್ರೂ ಇವತ್ತಿಗೆ ಬದುಕಿದಿದ್ರೆ ಇವತ್ತು ಏನಾಗುತ್ತಿತ್ತೋ..? ಜನಪ್ರತಿನಿಧಿಗಳು ಏನ್ ಮಾಡುತ್ತಿದ್ದರೋ..? ಎಂದು ಹಿರಿಯ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರಲ್ಲದೇ, ಎಸಿಪಿ ಕರಿಬಸವನಗೌಡ ಅವರ ವಿವರಣೆಯನ್ನು ಸರ್ಕಾರವೇನಾದ್ರೂ ಅಂಗೀಕರಿಸಿದ್ರೆ,ಇದಕ್ಕಿಂತ ಮೂರ್ಖತನದ ನಿರ್ದಾರ ಇನ್ನೊಂದಿರಲಾರದು ಎನ್ನುತ್ತಾರೆ.

ನಾವು ಕರೆದಾಗಲಷ್ಟೇ ಬರಬೇಕು..ನಾವು ನಿಗಧಿಪಡಿಸಿದ ಸ್ಥಳದಲ್ಲೇ ಬೈಟ್ ತೆಗೆದುಕೊಳ್ಳಬೇಕು..ನಮ್ಮ ಹಿಂದೆ ಮುಂದೆ ಅಡ್ಡಾಡಬಾರದು..ಸುದ್ದಿಗಾಗಿ ಅನಗತ್ಯವಾಗಿ ಅವರಿವರನ್ನು ಪ್ರಶ್ನಿಸಬಾರದು..ನಾವು ಹೇಳಿದ್ದಷ್ಟನ್ನೇ ಬರೆದುಕೊಳ್ಳಬೇಕು..ಹೀಗೆ ಮಾದ್ಯಮಗಳನ್ನು ನಿಯಂತ್ರಿಸುವ ಹಕ್ಕು-ಅಧಿಕಾರವನ್ನು ಸರ್ಕಾರ ಹಾಗೂ ರಾಜಕಾರಣಿಗಳಿಗೆ ಕೊಟ್ಟವರು ಯಾರು,…? ಮಾದ್ಯಮಗಳಿನ್ನೂ ಸಂಪೂರ್ಣವಾಗಿ ತಮ್ಮ ನೈತಿಕಪ್ರಜ್ನೆ,ಹೊಣೆಗಾರಿಕೆ-ಎದೆಗಾರಿಕೆಯನ್ನು ಕಳೆದುಕೊಂಡಿಲ್ಲ ಎನ್ನುವುದನ್ನು ಸರ್ಕಾರ ಮರೆಯಬಾರದು.ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದಾ ಕಾವಲುನಾಯಿಗಳು.ತಪ್ಪು ಮಾಡಿದಾಗ ರಚನಾತ್ಮಕ ನೆಲೆಯಲ್ಲಿ ಬೊಗಳುತ್ತೇವೆ.ಪ್ರಶ್ನಿಸ್ತೇವೆ,ದ್ವನಿ ಎತ್ತುತ್ತೇವೆ.ಅದರಲ್ಲಿ ತಪ್ಪೇನಿದೆ.ಅದನ್ನು ಇವತ್ತಿನ ರಾಜಕಾರಣಿಗಳು ಮರೆತಂತಿದೆ.ನಮ್ಮನ್ನು ನೀವು ನಿಯಂತ್ರಿಸುವ ಮಟ್ಟಕ್ಕೆ ನಾವಿನ್ನೂ ಅಧಃಪತನಗೊಂಡಿಲ್ಲ ಎಚ್ಚರ ಎಂದು ಹಿರಿಯ ಪತ್ರಕರ್ತರೊಬ್ಬರು ಕನ್ನಡ ಫ್ಲ್ಯಾಶ್ ನ್ಯೂಸ್ ಮೂಲಕ ಕಿಡಿಕಾರಿದ್ದಾರೆ.ಅಷ್ಟೇ ಅಲ್ಲ, ಮಾದ್ಯಮಗಳ ಸ್ವಾತಂತ್ರ್ಯ ಹರಣ ಮಾಡುವ ಮಟ್ಟದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ  ಪ್ರಶ್ನಿಸದಷ್ಟು ನಮ್ಮ ಮಾದ್ಯಮ ಸಂಸ್ಥೆಗಳು ಮೌನವಾಗಿದ್ದೇಕೆ ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ.

ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಆಯುಕ್ತ ಎಂ.ಎನ್  ಕರಿಬಸವನಗೌಡ ಅವರು ಬರೆದಿರುವ ಪತ್ರದ ಪ್ರತಿಯು ಕೂಡ ತಮ್ಮ ಬಳಿ ಲಭ್ಯವಿದೆ ಎಂದು ದಿ ಪೈಲ್ ಬರೆದುಕೊಂಡಿದೆ.ಅದೃಷ್ಟಕ್ಕೆ ಸಧ್ಯದವರೆಗು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಾಗಲಿ,ಸರ್ಕಾರವಾಗಲಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.ಬಹುಷಃ ಸರ್ಕಾರಕ್ಕು ಇದರ ಪರಿಣಾಮ ಏನಾಗಬಹುದೆನ್ನುವ ಅಂದಾಜಿದೆ ಎನ್ನಿಸುತ್ತೆ.ಮಾದ್ಯಮಗಳನ್ನು ಆ ಮಟ್ಟದಲ್ಲಿ ಸಂಕುಚಿತಗೊಳಿಸುವುದು, ನಿರ್ಬಂಧಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎನಿಸಿರಬೇಕು.ಹಾಗಾಗಿನೇ ಎಂ.ಎನ್  ಕರಿಬಸವನಗೌಡ ಅವರು ಬರೆದಿರುವ ಪತ್ರಕ್ಕೆ ಈವರೆಗೂ ಪ್ರತಿಕ್ರಿಯೆ ಕೇಳಿಬಂದಿಲ್ಲ.ಆದರೆ ಕೆಲವು ಮೂಲಗಳು ಕರಿಬಸವನಗೌಡ ಅವರು ಹಾಗೊಂದು ರೀತಿಯ ವರದಿ/ದೂರು ಸಲ್ಲಿಸೊಕ್ಕೆ ಬಹುಷಃ ಸರ್ಕಾರವೇ ಅವರಿಗೊಂದು ವರದಿ ಸಲ್ಲಿಸೊಕ್ಕೆ ಸೂಚಿಸಿರಬಹುದೆನ್ನಲಾಗುತ್ತಿದೆ.ಇತ್ತೀಚೆಗೆ ಮಾದ್ಯಮಗಳಿಂದ ಆಗುತ್ತಿರುವ ಮುಜುಗರ/ ಹಿನ್ನಡೆ  ತಡೆಯೊಕ್ಕೆ ಈ ಒಂದು ಅಸ್ತ್ರವನ್ನು ಪ್ರಯೋಗಿಸಿರಬಹುದಾದ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.ಈ ರೀತಿಯ ವರದಿಯೊಂದು ಸರ್ಕಾರದ ಮಟ್ಟದಲ್ಲಿದೆ.ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೇದು ಎಂದು ಹೇಳಿ ಹೆದರಿಸುವ ತಂತ್ರಗಾರಿಕೆನೂ ಇದರಿಂದ ಅಡಗಿರುವ ಸಾಧ್ಯತೆಗಳಿವೆ ಎಂತಲೂ ಹೇಳಲಾಗುತ್ತಿದೆ.

ಮಾದ್ಯಮಗಳ ನಿಯಂತ್ರಣಕ್ಕೆ ಸರ್ಕಾರ ಪ್ರಯೋಗಿಸಿರಬಹುದಾದ ಈ ಅಸ್ತ್ರ, ಪ್ರಯೋಗವಾಗಿದ್ದೇ ಆದಲ್ಲಿ, ಸರ್ಕಾರಕ್ಕೆ ತಿರುಗುಬಾಣವಾಗುವ ಸಾಧ್ಯತೆಗಳಂತೂ ಇದ್ದೇ ಇದೆ.ಕೆಲ ಮಾದ್ಯಮಗಳು ಸುಮ್ಮನಾದ್ರೆ ಬಹುಸಂಖ್ಯಾತ ಮಾದ್ಯಮಗಳು ಇದರ ವಿರುದ್ದ ದ್ವನಿ ಎತ್ತದೆ ಇರಲಾರವು ಎನ್ನುವುದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಇದಕ್ಕೆ ಪುಷ್ಟಿ ನೀಡುವಂತೆ ರಾಜಕಾರಣಿಗಳ ಬಾಲಂಗೋಚಿಗಳಂತಾಗಿರುವ ಪತ್ರಕರ್ತರ ಕೆಲವು ಪ್ರಾತಿನಿಧಿಕ ಸಂಸ್ಥೆಗಳು ತಮ್ಮ ಜಡತ್ವವನ್ನು ಬಿಟ್ಟು ಮೈ ಕೊಡವಿ ನಿಲ್ಲಬೇಕಿದೆ. ತಮ್ಮ ಹಿತಾಸಕ್ತಿ-ಸ್ವಲಾಭವನ್ನು ಪಕ್ಕಕ್ಕಿಟ್ಟು ಪತ್ರಿಕೋದ್ಯಮ-ಪತ್ರಿಕಾ ಸ್ವಾತಂತ್ರ್ಯದ ಉಳಿವಿಗಾಗಿ ಹೋರಾಡಬೇಕಿದೆ. ಇಲ್ಲವಾದಲ್ಲಿ ಮಾದ್ಯಮಗಳ ಅಸ್ತಿತ್ವವೇ ಪ್ರಶ್ನಾರ್ಥಕವಾಗುವ ಆತಂಕ ಇದ್ದೇ ಇದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button