ಕೋವಿಡ್ ಅಕ್ರಮ ತನಿಖೆಗೆ ಸಂಪುಟ ಉಪ ಸಮಿತಿ ರಚನೆಗೆ ಸಚಿವ ಸಂಪುಟ ತೀರ್ಮಾನ
ಕೋವಿಡ್ ಸಮಯದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಲು ಸಂಪುಟ ಉಪ ಸಮಿತಿ ರಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇದರಿಂದ ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಗೆ ಸಂಕಷ್ಟ ಶುರುವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ವೈರಸ್ ಅಬ್ಬರದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮಗಳ ಕುರಿತು ತನಿಖೆಯನ್ನು ಸಂಪುಟ ಉಪ ಸಮಿತಿಗೆ ವಹಿಸಲು ತೀರ್ಮಾನಿಸಲಾಯಿತು.
ಕೋವಿಡ್ ಕಾಲದಲ್ಲಿ ಪಿಪಿಟಿ ಕಿಟ್, ಎಸಿ, ಮಾಸ್ಕ್ ಸೇರಿದಂತೆ ಹಲವು ಅಕ್ರಮಗಳು ನಡೆದಿದ್ದು, 7 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ಕೂಡ ವರದಿ ನೀಡಿದ್ದು, ವರದಿ ಆಧಾರದ ಮೇಲೆ ತನಿಖೆಗೆ ಆದೇಶಿಲಾಗುವುದು ಎಂದು ಸಂಪುಟ ಸಭೆಯ ವಿವರವನ್ನು ಸಚಿವ ಎಚ್.ಕೆ. ಪಾಟೀಲ್ ನೀಡಿದರು.
ಬಿಜೆಪಿ ಆಡಳಿತದಲ್ಲಿ ನಡೆದ ಕೋವಿಡ್ ಭ್ರಷ್ಟಾಚಾರದ ಕುರಿತು ಪೊಲೀಸರು ತನಿಖೆ ನಡೆಸಲಿದ್ದು, ಅಗತ್ಯ ಬಿದ್ದರೆ ಎಸ್ ಐಟಿಗೆ ವಹಿಸಲಾಗುವುದು. ಭ್ರಷ್ಟಾಚಾರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆಯಿಂದ ಹೊರಗೆ ಬರಲಿದೆ ಎಂದು ಅವರು ಹೇಳಿದರು.