ಸದ್ಗುರು ಜಗ್ಗಿ ವಾಸುದೇವ್ ಗೆ ರಿಲೀಫ್: ಈಶಾ ಫೌಂಡೇಷನ್ ವಿರುದ್ಧದ ಪ್ರಕರಣ ವಜಾ!
ಹೆಣ್ಣುಮಕ್ಕಳಿಗೆ ಬ್ರೈನ್ ವಾಷ್ ಮಾಡಿ ಆಶ್ರಮದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ತಂದೆ ಈಶಾ ಫೌಂಡೇಷನ್ ವಿರುದ್ಧ ನೀಡಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರಿಂದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ತಮಿಳುನಾಡಿನ ಕೊಯಮತ್ತೂರು ಆಶ್ರಮದಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಪೋಷಕರ ಸಂಪರ್ಕದಿಂದ ಕಡಿತಗೊಳಿಸಿ ಆಶ್ರಮದಲ್ಲಿ ಅಕ್ರಮವಾಗಿ ಇರಿಸಿಕೊಳ್ಳಲಾಗಿದೆ ಎಂದು ಪ್ರೊಫೆಸರ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಇತ್ತೀಚೆಗೆ ತಮಿಳುನಾಡು ಪೊಲೀಸರು ಈಶಾ ಫೌಂಡೇಷನ್ ಮೇಲೆ ದಾಳಿ ಮಾಡಿದ್ದರು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಏಕಸದಸ್ಯ ಪೀಠ, ಪ್ರೊಫೆಸರ್ ಅವರ ಮಕ್ಕಳಾದ ಗೀತಾ ಮತ್ತು ಲತಾ ಅಪ್ರಾಪ್ತರಲ್ಲ. ಖಾಸಗಿ ಕಂಪನಿಯಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು. ಹಾಗಾಗಿ ಅವರು ಎಲ್ಲಿ ಇರಬೇಕು ಎಂಬುದು ಅವರ ವೈಯಕ್ತಿಕ ಹಕ್ಕು ಎಂದು ಆದೇಶ ನೀಡಿದ್ದಾರೆ.
ಮಕ್ಕಳನ್ನು ಬ್ರೈನ್ ವಾಷ್ ಮಾಡಲಾಗಿದೆ ಎಂಬ ಆರೋಪವನ್ನು ಕೂಡ ಸುಪ್ರೀಂಕೋರ್ಟ್ ತಳ್ಳಿ ಹಾಕಿದ್ದು, ಮಕ್ಕಳಿಗೆ 27 ಮತ್ತು 24 ವರ್ಷ ಆಗಿದೆ. ಅವರನ್ನು ಬ್ರೈನ್ ವಾಷ್ ಮಾಡಲು ಸಾಧ್ಯವಿಲ್ಲ. ಅಲ್ಲದೇ ಪ್ರಕರಣದಲ್ಲಿ ಪೊಲೀಸರು ದಾಳಿ ನಡೆಸಿದ ಕ್ರಮವೂ ಸರಿಯಲ್ಲ ಎಂದು ಹೇಳಿದೆ.