“ಮಗ”ನ ಹೆಸರ “ಕಂಪೆನಿ”ಗೆ ಲಕ್ಷಾಂತರ ರೂ “ಧಾರೆ”..! “ಟೆಂಡರ್” ನಿಯಮ ಉಲ್ಲಂಘಿಸಿ ಹಣ “ಟ್ರಾನ್ಸ್ ಫರ್”..? “ಅಕ್ರಮ” ನಡೆದ್ರೂ ಕ್ರಮ ಕೈಗೊಳ್ಳಲು “ಮೀನಾಮೇಷ”ವೇಕೇ..?!
ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಸುಂದರ ಬೆಂಗಳೂರು… ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೊರಟಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅದೆಲ್ಲಕ್ಕಿಂತ ಮುನ್ನ ತುರ್ತಾಗಿ ಮಾಡಬೇಕಿ ರುವ ಕೆಲಸವೇ ಬೇರೆಯಿದೆ. ಬೆಂಗಳೂರನ್ನು ಸ್ವಚ್ಛ ಸುಂದರವಾಗಿಟ್ಟುಕೊಳ್ಳುವ ಮುನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಅದರ ಆಡಳಿತವನ್ನು ಸರಿಯಾಗಿಟ್ಟುಕೊಳ್ಳಲಿ.ಅವರ ಅಧೀನದಲ್ಲಿರುವ ಅಧಿಕಾರಿ-ಸಿಬ್ಬಂದಿ ನಡೆಸುತ್ತಿರುವ ಅಂದಾದರ್ಬಾರ್ ಗೆ ಕಡಿವಾಣ ಹಾಕಿ ಅವರನ್ನೆಲ್ಲಾ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕಿದೆ.ಅದನ್ನು ಮಾಡದೆ ಬೇರೆ ಏನನ್ನೇ ಮಾಡಿದ್ರೂ ಅದೆಲ್ಲಾ ವೇಸ್ಟ್…ವೇಸ್ಟ್…ಒನ್ಸ್ ಅಗೈನ್ ವೇಸ್ಟ್ ಅಷ್ಟೆ..
ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆ ಎಕ್ಕುಟ್ಟಿ ಹೋಗಿದೆ. ಹೇಳೋರ್ ಕೇಳೋರ್ ಇಲ್ಲದೆ ಹಾಳಾಗಿ ಹೋಗಿದೆ.ತುಷಾರ ಗಿರಿನಾಥ್ ಅವರಿಗೂ ಇಲ್ಲಿನ ಅವ್ಯವಸ್ಥೆ-ಅಂದಾದರ್ಬಾರ್ ಗೆ ಕಡಿವಾಣ ಹಾಕೊಕ್ಕೆ ಸಾಧ್ಯವಾಗ್ತಿಲ್ಲ.ಕೆಳಹಂತದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಮುನ್ನ ಹತ್ತಾರು ಬಾರಿ ಆಲೋಚಿಸಬೇಕಾಗಿದೆ.ಏಕೆಂದ್ರೆ ಅಷ್ಟೊಂದು ಪ್ರಭಾವಿಗಳಾಗಿ ಹೋಗಿದ್ದಾರೆ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ. ಏನಾದ್ರು ಕಠಿಣ ಕ್ರಮ ಕೈಗೊಂಡರೆ ಕಮಿಷನರ್ ಅವ್ರನ್ನೇ ಪ್ರಶ್ನಿಸುವಂತ ಮಟ್ಟದ ಬೆಳವಣಿಗೆಗಳು ಬಿಬಿಎಂಪಿಯಲ್ಲಿ ನಡೀತಿವೆ.ತಾನೇನೇ ಮಾಡಿದ್ರೂ ಅದರಿಂದ ಪ್ರಯೋಜನವಿಲ್ಲ ಎನ್ನುವ ಕಾರಣಕ್ಕೆ ತುಷಾರ ಗಿರಿನಾಥ್ ಕೂಡ ಸುಮ್ಮನಾಗಿ ಹೋಗಿ್ದ್ದಾರೆ.
ಆದರೆ ಅವರ ಈ ಮೌನವೇ,ಅಸಹಾಯಕತೆಯೇ ಅವರ ಅಧೀನದಲ್ಲಿರುವ ಅಧಿಕಾರಿ-ಸಿಬ್ಬಂದಿ ಲಂಗುಲಗಾಮಿಲ್ಲದಂತಾಗಲು ಕಾರಣವಾಗಿದೆ ಎನ್ನುವುದು ವಿಪರ್ಯಾಸ.ನಿಯಮಬಾಹಿರವಾಗಿ ಏನಾದ್ರೂ ಮಾಡಿದ್ರೆ ಅದರಿಂದಾಗುವ ಪರಿಣಾಮಗಳ ಅರಿವಿದ್ದಾಗ್ಯೂ ಅಧಿಕಾರಿ ಸಿಬ್ಬಂದಿ ತಾವಾಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತಾಗಿದೆ.ಇದನ್ನು ಹೇಳೊಕ್ಕೆ ಕಾರಣವೇ ಆ ಮಹಿಳಾ ಅಧಿಕಾರಿ ವಿರುದ್ದ ಕೇಳಿಬಂದಿರುವ ದಂಡಿ ಆರೋಪಗಳು,ಅದರ ವಿರುದ್ದ ಕ್ರಮ ಕೈಗೊಳ್ಳದೆ ಸುಮ್ಮನಿರುವ ತುಷಾರ ಗಿರಿನಾಥ್ ಅವರ ದಿವ್ಯನಿರ್ಲಕ್ಷ್ಯದ ಮೌನ.ಅಂದ್ಹಾಗೆ ತುಷಾರ ಗಿರಿನಾಥ್ ಅವರ ಗಮನಕ್ಕೆ ಬಂದರೂ ಅವರು ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲದಿರುವ ಅಧಿಕಾರಿಯೇ ಡಾ.ಸವಿತಾ.
ಡಾ.ಸವಿತಾ ವಿರುದ್ಧದ ಆಪಾದನೆಗಳೇನು? ಬಿಬಿಎಂಪಿ ಆರೋಗ್ಯ ವಿಭಾಗದಲ್ಲಿ ಆರೋಗ್ಯಾಧಿಕಾರಿ ಆಗಿರುವ ಡಾ.ಸವಿತಾ ವಿರುದ್ದ ದಂಡಿ ಆಪಾದನೆಗಳಿವೆ.ಸವಿತಾ ಹಾಗೂ ಅವರ ಪುತ್ರನ ಬಗ್ಗೆ ಕೇಳಿಬಂದಿರುವ ಆರೋಪಗಳ ಹಿನ್ನಲೆಯಲ್ಲಿ ಲೋಕಾಯುಕ್ತ, ಪೊಲೀಸ್ ಇಲಾಖೆ.ಬಿಬಿಎಂಪಿ ಆಯುಕ್ತರಿಗೆ ದೂರು ಕೂಡ ಸಲ್ಲಿಕೆಯಾಗಿದೆ. ಆದರೂ ಅವರ ವಿರುದ್ದ ಯಾವುದೇ ಕ್ರಮ ಜಾರಿಯಾಗಿಲ್ಲ ಎನ್ನುವುದು ದೂರುದಾರರ ಆಪಾದನೆ. ಅಂದ್ಹಾಗೆ ಡಾ.ಸವಿತಾ ವಿರುದ್ದ ಕೇಳಿಬಂದಿರುವ ಆಪಾದನೆ ಹಾಗು ಆ ಬಗ್ಗೆ ಸಲ್ಲಿಕೆಯಾಗಿರುವ ದೂರಿನ ಸಾರಾಂಶವೇ M/S.AVS ಎಂಟರ್ ಪ್ರೈಸಸ್ ಹೆಸರಿನ ಕಂಪೆನಿ.ಈ ಕಂಪೆನಿ ಡಾ.ಸವಿತಾ ಅವರದ್ದು.
ಆದರೆ ಸರ್ಕಾರಿ ಅಧಿಕಾರಿಯಾಗಿರುವುದರಿಂದ ತೊಂದರೆಗೆ ಸಿಲುಕಬಹುದೆನ್ನುವ ಜಾಣ್ಮೆಯಿಂದ ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾದ್ಯಾಪಕರಾ ಗಿರುವ ಸಿದ್ದರಾಜ್ ಚಿರಾಗ್ ಅವರ ಹೆಸರಿನಲ್ಲಿ ಸಂಸ್ಥೆ ನಡೆಸಲಾಗುತ್ತಿದೆ ಎನ್ನುವುದು ದೂರಿನಲ್ಲಿ ಉಲ್ಲೇಖವಾಗಿದೆ. ವಿಷಯ ಇಷ್ಟೇ ಆಗಿದಿದ್ದರೆ ಪರ್ವಾಗಿರಲಿಲ್ಲ, ಸಿದ್ದರಾಜ್ ಚಿರಾಗ್ ಮಾಲಿಕತ್ವದ M/S. AVS ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಅಕ್ರಮಗಳನ್ನು ಡಾ.ಸವಿತಾ ಮಾಡಿದ್ದಾರೆ ಎನ್ನುವುದು ದೂರುದಾರರ ಮುಂದುವರೆ ದ ಆಪಾದನೆ.ಅದನ್ನೆಲ್ಲಾ ಕ್ರೋಢೀಕರಿಸಿ ಲೋಕಾಯುಕ್ತ,ಪೊಲೀಸ್ ಕಮಿಷನರ್ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ದೂರನ್ನು ನೀಡಲಾಗಿದೆ.
ದೂರುದಾರರು ಆಪಾದಿಸುವಂತೆ ಪ್ರತಿಷ್ಟಿತ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಮಗ ಸಿದ್ದರಾಜ್ ಚಿರಾಗ್, ಅವರ ಮಾಲೀಕತ್ವದ M/S. AVS ಎಂಟರ್ ಪ್ರೈಸಸ್ ಕೆಲಸ ಮಾಡದಿದ್ದರೂ ಬಿಬಿಎಂಪಿಯ ಅನೇಕ ಯೋಜನೆ/ಕಾರ್ಯಕ್ರಮಗಳಲ್ಲಿ ಹಣ ಪಡೆದುಕೊಂಡಿದೆ. ಡಾ.ಸವಿತಾ ಅವರೇ ಖುದ್ದು ಈ ಸಂಸ್ಥೆಗೆ ಗುತ್ತಿಗೆ ಕೊಡಿಸಿ ಹಣವನ್ನು ಸಂದಾಯ ಮಾಡಿಸಿದ್ದಾರೆ.ಬೊಮ್ಮನಹಳ್ಳಿ,ಯಲಹಂಕ ವಲಯಗಳಲ್ಲಿ ಕೆಲಸ ಮಾಡುವಾಗ ಸಾಕಷ್ಟು ಅಕ್ರಮಗಳನ್ನು ಈ ಸಂಸ್ಥೆ ಮೂಲಕ ಮಾಡಿಸಿದ್ದಾರೆ. ಕೆಲಸ ಮಾಡದೇ ಇದ್ದರೂ ಲಕ್ಷ ಲಕ್ಷಗಳಲ್ಲಿ ಹಣ M/S. AVS ಎಂಟರ್ ಪ್ರೈಸಸ್ ಗೆ ಸಂದಾಯವಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಕೊರೊನಾ ಕಾಲದಲ್ಲಿ ಡಾ.ಸವಿತಾ ತಮ್ಮ ಅಧಿಕಾರ ಬಳಸಿ ಮಗನ ಕಂಪೆನಿಗೆ ಹಲವಾರು ಗುತ್ತಿಗೆ ಕೊಟ್ಟಿದ್ದರು.ಇದರಲ್ಲಿ ಟೆಂಡರ್ ನಿಯಮ ಉಲ್ಲಂಘನೆಯಾಗಿತ್ತು.ಕೊವಿಡ್ ಕಾಲದಲ್ಲಿಯೂ ಕೊವಿಡ್ ಕೇರ್ ಸೆಂಟರ್, ಡಾಕ್ಟರ್ ಗಳ ನೇಮಕ,ಸಿಬ್ಬಂದಿಯ ನಿಯೋಜನೆ,ಕಂಟ್ರೋಲ್ ರೂಂ ಸ್ಥಾಪನೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ್ದಾರೆ.ವಸ್ತುಗಳನ್ನು ಖರೀದಿ ಮಾಡದಿದ್ದರೂ, ಡಾಕ್ಟರ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳದಿದ್ದರೂ ಸುಳ್ಳು ಬಿಲ್ ಸೃಷ್ಟಿಸಿ ಲಕ್ಷಾಂತರ ಹಣ ಪಡೆದಿದ್ದಾರೆ.ಸಿಬ್ಬಂದಿಯ ನಕಲಿ ಸ್ಯಾಲರಿ ಬಿಲ್ ಸೃಷ್ಟಿಸಿ ಸ್ವಾಹ ಮಾಡಲಾಗಿದೆ.ಅಂದ್ಹಾಗೆ ಇದೆಲ್ಲವನ್ನು ತೆರೆಮರೆಯಲ್ಲಿ ನಿಂತು ಮಾಡಿದವರು ಇವರೇ..ಇದರ ಜತೆಗೆ ಸೊಳ್ಳೆ ನಿಯಂತ್ರಣದಲ್ಲಿಯೂ ವ್ಯಾಪಕ ಗೊಲ್ಮಾಲ್ ನಡೆಸಲಾ್ಗಿದೆ.ಇದರ ಶ್ರೇಯಸ್ಸು ಕೂಡ ಸವಿತಾ ಅವರಿಗೆ ಸಲ್ಲಬೇಕು ಎಂದು ದೂರುದಾರರು ಆಪಾದಿಸಿದ್ದಾರೆ.
ದಲಿತಪರ ಸಂಘಟನೆಗಳಿಂದಲೇ ವ್ಯಾಪಕ ಆಕ್ರೋಶ-ಪ್ರತಿಭಟನೆ: ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿದ್ದುಕೊಂಡು ಡಾ.ಸವಿತಾ ಹೀಗೆಲ್ಲಾ ಮಾಡಿರುವುದು ಅನೇಕ ಸಂಘಟನೆಗಳನ್ನು ನಖಶಿಖಾಂತ ಉರಿಸಿಬಿಟ್ಟಿದೆ.ಅದರಲ್ಲೂ ತಾನೊಬ್ಬ ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಎನ್ನುವ ಕಾರಣಕ್ಕೆ ಅದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆ.ಇವರ ವಿರುದ್ದ ಯಾರು ಏನೇ ಪ್ರಶ್ನೆ ಮಾಡಿದ್ರೂ ಜಾತಿನಿಂದನೆ ಎನ್ನುವ ಅಸ್ತ್ರ ಪ್ರಯೋಗಿಸಲು ಮುಂದಾಗುತ್ತಾರೆನ್ನುವ ಆಪಾದನೆ ಖುದ್ದು ದಲಿತಪರ ಸಂಘಟನೆಗಳಿಂದಲೇ ಕೇಳಿಬಂದಿದೆ.ಆದರೆ ಅಕ್ರಮವನ್ನು ಮುಚ್ಚಿ ಹಾಕಲು,ಅವರ ವಿರುದ್ಧದ ಪ್ರತಿಭಟನೆ ದ್ವನಿಯನ್ನು ಅಡಗಿಸಲು ಡಾ.ಸವಿತಾ ಈ ರೀತಿ ಮಾಡುತ್ತಿರುವುದನ್ನು ದಲಿತರಾಗಿ ನಾವು ಒಪ್ಪುವುದಿಲ್ಲ.ದಲಿತರು ಅಕ್ರಮ ನಡೆಸಿದರೆ ಅದನ್ನು ಮುಚ್ಚಾಕಬೇಕು ಅಥವಾ ಮನ್ನಾಮಾಡಬೇಕು ಎಂದು ಸಂವಿಧಾನವಾಗಲಿ, ಕಾನೂನಾಗಲಿ ಹೇಳಿಲ್ಲವಲ್ಲ..
ಹಾಗಾಗಿ ಡಾ.ಸವಿತಾ ಅವರ ಧೋರಣೆಯನ್ನು ಖಂಡಿಸಿ ದಲಿತಪರ ಸಂಘಟನೆಗಳೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ M/S..AVS ಎಂಟರ್ ಪ್ರೈಸಸ್ ನ ವಂಚನೆ,ಕಂಪೆನಿ ಮಾಲೀಕ ಚಿರಾಗ್ ಅವರ ವಿರುದ್ದ ಶಿಸ್ತುಕ್ರಮ ಹಾಗೂ ಅದರ ಹಿಂದೆ ಇರುವ ಡಾ.ಸವಿತಾ ವಿರುದ್ದ ಕಠಿಣ ಕ್ರಮ ಆಗಬೇಕೆಂದು ಪ್ರತಿಭಟನೆ ನಡೆಸಿದ್ದವು.ಡಾ.ಸವಿತಾ ವಿರುದ್ದ ತನಿಖೆ ಆಗಬೇಕು.ಅಲ್ಲಿವರೆಗೆ ಅವರನ್ನು ಅಮಾನತ್ತಿನಲ್ಲಿಡಬೇಕೆಂದು ಹೋರಾಟವನ್ನೂ ಮಾಡಿದ್ದವು.ಆದ್ರೆ ದುರಾದೃಷ್ಟವಶಾತ್ ಏನೊ..ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ ಗಿರಿನಾಥ್ ಅವರು ಮೀನಾಮೇಷ ಎಣಿಸುತ್ತಲೇ ಇದ್ದಾರೆ.ಅದ್ಹೇಕೆ ಎನ್ನುವುದಕ್ಕೆ ಅವರೇ ಉತ್ತರಿಸಬೇಕು.
ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ಲೆಕ್ಷರರ್ ಆಗಿದ್ದುಕೊಂಡು ಒಂದು ಸಂಸ್ಥೆಯನ್ನು ನಡೆಸಲು ಅವಕಾಶಗಳಿವೆಯೆ ಎನ್ನುವುದಕ್ಕೆ ಉತ್ತರ ಸಿಗಬೇಕಿದೆ.ಕೊಡಬಹುದು,ಅದಕ್ಕೆ ಅವಕಾಶವಿದೆ ಎನ್ನುವುದೇ ಡಾ.ಸವಿತಾ ಅವರ ವಾದವಾದ್ರೆ, ಎವಿಎಸ್ ಎಂಟರ್ ಪ್ರೈಸಸ್ ಡಾ. ಸವಿತಾ ಅವರ ಮಗ ಸಿದ್ದರಾಜ್ ಚಿರಾಗ್ ಅವರ ಮಾಲೀಕತ್ವದ್ದಲ್ವೇ..ಹಾಗಿದ್ದಲ್ಲಿ ರಕ್ತಸಂಬಂಧಿಗಳು ಸ್ವಂತ ಸಂಸ್ಥೆ ಹೊಂದಲು,ಅವರದೆ ಸಂಬಂದಿಗಳು ಕೆಲಸ ಮಾಡುವ ಕಾರ್ಯವ್ಯಾಪ್ತಿಯಲ್ಲಿ ಟೆಂಡರ್ ನಲ್ಲಿ ಪಾಲ್ಗೊಳ್ಳಲು,ಅದಕ್ಕೆ ಸಂಬಂಧಪಟ್ಟ ಟೆಂಡರ್ ಪ್ರಕ್ರಿಯೆಗಳನ್ನು ಅವರ ಸ್ವಂತದ್ದವರೇ ಮಾಡಲು ಅವಕಾಶವಿದೆಯೇ.ಇದಕ್ಕೆ ಕಾನೂನುಗಳು ಏನನ್ನುತ್ತವೆ ಎನ್ನುವುದನ್ನು ಡಾ.ಸವಿತಾ ಸ್ಪಷ್ಟಪಡಿಸಬೇಕಾಗುತ್ತದೆ.ಆದರೆ ಡಾ.ಸವಿತಾ ಅವರ ವಿಷಯದಲ್ಲಿಎಲ್ಲವೂ ಸರ್ಕಾರಿ ಸೇವಾ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದಂತಿದೆ ಎನ್ನುವುದು ದೂರುದಾರರ ಆರೋಪ.
ಕೆಳಹಂತದ ಸಿಬ್ಬಂದಿಯಿಂದಲೂ ಹಣ ಕೇಳಿರುವ ಆಪಾದನೆ: ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆ ನೀಡಿ ಲಕ್ಷಾಂತರ ಹಣವನ್ನು M/S.AVS ಎಂಟರ್ ಪ್ರೈಸಸ್ ಗೆ ಸಂದಾಯ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಜತೆಗೆ, ಡಾ.ಸವಿತಾ ವಿರುದ್ಧ ಕೇಳಿಬಂದಿರುವ ಮತ್ತಷ್ಟು ಆಪಾದನೆ ವಿರುದ್ದವೂ ಕ್ರಮ ಜಾರಿಯಾಗಬೇಕೆನ್ನುವುದು ದೂರುದಾರರ ಒತ್ತಾಯ.ಏಕೆಂದರೆ ಕೆಲ ದಿನಗಳ ಹಿಂದಷ್ಟೇ ಡಾ.ಸವಿತ್ತಾರದ್ದು ಎನ್ನಲಾಗುತ್ತಿರುವ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಆ ಆಡಿಯೋದಲ್ಲಿ ವಾಣಿಜ್ಯ ಮಳಿಗೆಗಳಿಗೆ ಇಂತಿಷ್ಟು ಫಿಕ್ಸ್ ಮಾಡಿ ಹಣ ಕಲೆಕ್ಟ್ ಮಾಡುವಂತೆ ಡಾ.ಸವಿತಾ ಅವರು ತಮ್ಮ ಕೆಳಹಂತ್ ಸಿಬ್ಬಂದಿಗೆ ಸೂಚನೆ ನೀಡಿರುವುದು, ಪ್ರತಿ ಅಂಗಡಿಯಿಂದ 4 ಸಾವಿರ ಕಲೆಕ್ಟ್ ಮಾಡುವಂತೆ ತಿಳಿಸಿರುವುದು, ವಾರಕ್ಕೆ 4 ರಂತೆ 16 ಸಾವಿರ ಕಲೆಕ್ಟ್ ಮಾಡುವಂತೆ ಕಟ್ಟಪ್ಪಣೆ ಮಾಡಿರುವುದು, ಹಣ ಕಲೆಕ್ಟ್ ಮಾಡಿಕೊಂಡು ಕಚೇರಿಗೆ ಬರು ವಂತೆ ಸೂಚನೆ ನೀಡಿರುವುದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.ಅದರಲ್ಲೇ ಅವರು ಟ್ರಾನ್ಸ್ ಫರ್ ಆದ್ರೂ ಹಣ ಕೊಡೊಲ್ಲ,ನೀವೆಲ್ಲಾ ಕೆಲಸ ಮಾಡಿಸ್ಕೋತೀರಿ ಆದ್ರೆ ಹಣ ಕೊಡೊಲ್ಲ ಎಂದು ನಸುನಗುತ್ತಾ ಮಾತನಾಡಿದ್ದು ಕೂಡ ಅಡಕವಾಗಿತ್ತು.ಈ ಆಡಿಯೋ ತೀವ್ರ ಕೋಲಾಹಲವನ್ನೇ ಸೃಷ್ಟಿಸಿತ್ತು.
ಆರೋಪ ನಿರಾಧಾರ,ನನ್ನ ತೇಜೋವಧೆಯ ಷಡ್ಯಂತ್ರ: ಈ ಬಗ್ಗೆ ಅವರಿಂದ ಮಾದ್ಯಮಗಳು ಸ್ಪಷ್ಟನೆ ಕೇಳಿದಾಗ, ಇದೆಲ್ಲಾ ನನ್ನ ತೇಜೋವಧೆಗೆ ವ್ಯವಸ್ತಿತ ಷಡ್ಯಂತ್ರ.ನಾನು ಯಾವುದೇ ಆರೋಗ್ಯ ಸಿಬ್ಬಂದಿ ಯಿಂದ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಾನು ಕೇಳಿದ್ದು ಫೈನ್ ಕಲೆಕ್ಟ್ ಮಾಡಿ ತನ್ನಿ ಎಂದು. ಆದರೆ ಅದನ್ನು ಕತ್ತರಿಸಿ ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.ಆದರೆ ಅವರು ಮಾತನಾಡಿದ ಆಡಿಯೋದಲ್ಲಿ ಎಲ್ಲೂ ಫೈನ್ ಎನ್ನುವ ಅಂಶವೇ ಉಲ್ಲೇಖವಾಗಿರಲಿಲ್ಲ.ಅಷ್ಟೇ ಅಲ್ಲ,ಫೈನ್ ಕಲೆಕ್ಟ್ ಮಾಡಿಕೊಂಡು ಬನ್ನಿ ಎಂದು ಹೇಳಿದ್ದೇ ಎನ್ನುವ ಆಡಿಯೋವನ್ನು ಕೂಡ ಅವರು ನೀಡಿರಲಿಲ್ಲ.ಇದು ಅವರ ಮೇಲಿನ ಅನುಮಾನವನ್ನು ಮತ್ತಷ್ಟು ಬಲಗೊಳಿಸಿತ್ತು.
ತಮ್ಮ ಮೇಲೆ ಬಂದಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದಂತವು.ಇದೆಲ್ಲಾ ನನ್ನ ತೇಜೋವಧೆ ಭಾಗವಾಗಿ ನಡೆದ ಬೆಳವಣಿಗೆ ಎಂದೆಲ್ಲಾ ಡಾ.ಸವಿತಾ ಮಾದ್ಯಮಗಳ ಮೂಲಕ ರಿಯಾಕ್ಟ್ ಮಾಡಿದ್ದಾರೆ.ಆದರೆ ಅವರ ಸ್ಪಷ್ಟನೆಗಳು ಕಾನೂನಿನ ಚೌಕಟ್ಟಿನಲ್ಲಿ ಅವರ ಮೇಲೆ ಕೇಳಿಬಂದಿರುವ ಆರೋಪಗಳನ್ನು ನಿರಾಧಾರ ಎಂದು ಪ್ರೂವ್ ಮಾಡಲು ಎಷ್ಟರ ಮಟ್ಟಿಗೆ ಸಹಕಾರಿ ಆಗುತ್ತವೆ ಎನ್ನುವುದೇ ಕುತೂಹಲ ಮೂಡಿಸಿದೆ.ಈ ಬಗ್ಗೆ ತನಿಖೆಗೆ ಅದ್ಹೇಕೆ ತುಷಾರ್ ಗಿರಿನಾಥ್ ಅವರು ಆಸಕ್ತಿ ತೋರಿಸುತ್ತಿಲ್ಲವೋ ಗೊತ್ತಾಗುತ್ತಿಲ್ಲ..ಈ ಪ್ರಜ್ನಾಪೂರ್ವಕ ನಿರ್ಲಕ್ಷ್ಯವೇ ಮುಖ್ಯ ಆಯುಕ್ತರ ವಿರುದ್ದವೇ ನಮ್ಮನ್ನು ಪ್ರತಿಭಟನೆ ಮಾಡುವ ಮಟ್ಟಕ್ಕೆ ಕೊಂಡೊಯ್ಯಬಹುದೆನ್ನುವ ಎಚ್ಚರಿಕೆಯನ್ನು ದಲಿತಪರ ಸಂಘಟನೆಗಳು ನೀಡಿರುವುದು ಆಶ್ಚರ್ಯ. ಬಿಬಿಎಂಪಿ ಅಂಗಳದಲ್ಲಿ ನಡೆಯುತ್ತಿರುವ ಈ ಜಟಾಪಟಿ ಯಾವ್ ಹಂತಕ್ಕೆ ತಲುಪುತ್ತೊ ಕಾದು ನೋಡಬೇಕಿದೆ.