ಪ್ರಿಯಕರ ಜೊತೆ ಸೇರಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!
ಪ್ರಿಯಕರನ ಜೊತೆಗೂಡಿ ಹೆತ್ತ ಇಬ್ಬರು ಮಕ್ಕಳನ್ನೇ ತಾಯಿಯೊಬ್ಬಳು ಕೊಂದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಕೆಂಪೇಗೌಡ ವೃತ್ತದ ಬಳಿಯ ನಿವಾಸಿ ಸ್ವೀಟಿ (21) ಮತ್ತು ಪ್ರಿಯಕರ ಗ್ರಗೋರಿ ಫ್ರಾನ್ಸಿಸ್ ಜೊತೆಗೂಡಿ ಕಬಿಲ್ ಹಾಗೂ 11 ತಿಂಗಳ ಕಬಿಲನ್ ನನ್ನು ಹತ್ಯೆ ಮಾಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾರೆ.
ಸ್ವೀಟಿಗೆ ಈ ಹಿಂದೆ ಶಿವು ಎಂಬಾತನ ಜೊತೆ ಮದುವೆ ಆಗಿದ್ದು, ಎರಡು ಮಕ್ಕಳಿದ್ದವು. ಮಕ್ಕಳಾದ ನಂತರ ಶಿವುವನ್ನು ತೊರೆದು ಗ್ರೆಗೋರಿ ಫ್ರಾನ್ಸಿಸ್ ಜೊತೆ ವಾಸಿಸುತ್ತಿದ್ದಳು. ಮಕ್ಕಳಿಂದ ಪ್ರಿಯಕರ ಜೊತೆ ಸೇರಲು ಅಡ್ಡಿಯಾಗುತ್ತಿದೆ ಎಂದು 11 ತಿಂಗಳ ಕಬಿಲನ್ ನನ್ನು ಹತ್ಯೆಗೈದಿದ್ದರು.
ಪ್ರಿಯಕರ ಜೊತೆಗೂಡಿ ಕಬಿಲನ್ ನ ಶವ ಹೂಳಲು ಸ್ಮಶಾನಕ್ಕೆ ತೆರಳಿದ್ದಾಗ ಮಗುವಿನ ಮೈಮೇಲೆ ಗಾಯಕಂಡು ಸ್ಮಶಾನದ ಸಿಬ್ಬಂದಿ ಮಗುವಿಗೆ ಏನಾಗಿತ್ತು ಎಂದು ಕೇಳಿದ್ದಾರೆ. ಆಗ ಮಗು ಕಾಯಿಲೆ ಬಂದು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಇದರಿಂದ ಅನುಮಾನಗೊಂಡ ಸಿಬ್ಬಂದಿ ಸ್ವೀಟಿ ಹಾಗೂ ಫ್ರಾನ್ಸಿಸ್ ಫೋಟೊ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ವೀಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಘಾತಕಾರಿ ವಿಷಯ ಅಂದರೆ ಇದಕ್ಕೂ ಮುನ್ನ ಮತ್ತೊಬ್ಬ ಮಗ ಕಬಿಲ್ ನನ್ನು ಕೂಡ ಇದೇ ರೀತಿ ಕೊಂದಿರುವುದು ಬೆಳಕಿಗೆ ಬಂದಿದೆ.