ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಏರ್ ಇಂಡಿಯಾ ದುರಂತ: 140 ಪ್ರಯಾಣಿಕರು ಪಾರು!
ಹಾರಾಟದ ವೇಳೆ ಹೈಡ್ರೋಲಿಕ್ ವೈಫಲ್ಯಕ್ಕೆ ಒಳಗಾದ ಏರ್ ಇಂಡಿಯಾ ವಿಮಾನ ತಮಿಳುನಾಡಿನ ತಿರುಚನಾಪಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, 140 ಪ್ರಯಾಣಿಕರು ಪಾರಾಗಿದ್ದಾರೆ.
ತಿರುಚನಾಪಳ್ಳಿಯಿಂದ ಶಾರ್ಜಾಕ್ಕೆ ಶುಕ್ರವಾರ ಸಂಜೆ 5.40ರ ಸುಮಾರಿಗೆ ಹೊರಟ್ಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷಕ್ಕೆ ಒಳಗಾಯಿತು. ಪೈಲೆಟ್ ಗಳು ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು.
ವಿಮಾನದ ಹೈಡ್ರೋಲಿಕ್ ವಿಫಲಗೊಂಡಿದೆ ಎಂದು ಪೈಲೆಟ್ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ವಿಮಾನ ಇಳಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ತಿರುಚನಾಪಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
ಹೈಡ್ರೋಲಿಕ್ ಅಂದರೆ ವಿಮಾನ ಹಾರಾಟದ ವೇಳೆ ಬ್ರೇಕ್, ಗೇರ್ ಮುಂತಾದವುಗಳು ಸುಲಲಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ಹೈಡ್ರೋಲಿಕ್ ವ್ಯವಸ್ಥೆ ಹಾಳಾದರೆ ವಿಮಾನ ಲ್ಯಾಂಡಿಂಗ್ ಮತ್ತು ಟೇಕಾಫ್ ವೇಳೆ ಸಮಸ್ಯೆ ಉಂಟಾಗಿ ಅನಾಹುತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ.