BREAKING NEWSCITYEXCLUSIVE NEWSPOLITICAL NEWSSPECIALSTORIES

CONTROVERSY RISE ABOUT “PRESS CLUB HONOUR”..!? ವಿವಾದ-ಗೊಂದಲದ ಗೂಡಾದ “ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ”:ಪ್ರಶಸ್ತಿಗೆ ರಾಜಕೀಯದ ಸೋಂಕು ಬೇಕಾ..?

Share

ಆಯ್ಕೆ ಸಮಿತಿ ವಿರುದ್ಧ, ಅರ್ಹ-ಸಮರ್ಥರ ನಿರ್ಲಕ್ಷ್ಯ,ಸ್ವಜನ ಪಕ್ಷಪಾತ-ಪ್ರಾದೇಶಿಕ ಅಸಮತೋಲನ-ಮಹಿಳಾ ಪ್ರಾತಿನಿಧ್ಯತೆಗೆ ಒತ್ತು ನೀಡದ ಆರೋಪ

ಬೆಂಗಳೂರು: ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ-2023 ಘೋಷಣೆಗೆ ಅಸಮಾ ಧಾನ-ಆಕ್ಷೇಪ-ವಿರೋಧ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ  ಈ ಬಗ್ಗೆ ಸಾಕಷ್ಟು  ಚರ್ಚೆ-ಟೀಕೆ ಶುರುವಾಗಿದೆ.ಪ್ರಶಸ್ತಿ ಘೋಷಣೆಯ ಮಾನದಂಡವೇನು ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ.ಡಿಸಿಎಂ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಅವರಂಥ ರಾಜಕಾರಣಿಗಳಿಗೆ ಪ್ರಶಸ್ತಿ ನೀಡುವ ಔಚಿತ್ಯವೇನಿತ್ತು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.ಇದರ ನಡುವೆ ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯೂ ಸೃಷ್ಟಿಯಾಗಿದೆ.ಪ್ರಶಸ್ತಿ ನೀಡುವುದರ ಹಿಂದೆ ದೊಡ್ಡಮಟ್ಟದ ಲಾಭಿ-ಜಾತಿ ರಾಜಕಾರಣ-ಗುಂಪುಗಾರಿಕೆ-ಸ್ವಜನಪಕ್ಷಪಾತ ನಡೆದಿದೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ವಿಷಯ.

ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಘೋಷಿಸುವುದು ಮಾಮೂಲು ಸಂಪ್ರದಾಯ.ಆದರೆ ಅದರೊಳಗೆ ರಾಜಕೀಯ ಪ್ರಾತಿನಿಧ್ಯತೆಗೇಕೆ ಅವಕಾಶ ಮಾಡಿಕೊಡುತ್ತೀರಿ ಎನ್ನುವ ಚರ್ಚೆ ಈ ಬಾರಿ ಶುರುವಾಗಿದೆ( ಈ ಹಿಂದೆಯೂ ಸಾಕಷ್ಟು ರಾಜಕಾರಣಿಗಳಿಗೆ ವರ್ಷದ ವ್ಯಕ್ತಿ ಎನ್ನುವ ಗೌರವ ನೀಡಲಾಗಿತ್ತು..ಆಗ ಇಲ್ಲದ ವಿರೋ‍ಧ ಈಗ ಏಕೆ ಎನ್ನುವುದು ಚರ್ಚೆಯಾಗಬೇಕಾದ ವಿಚಾರ).ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೊಕ್ಕೆ  ಡಿಕೆ ಶಿವಕುಮಾರ್ ಕಾರಣವಾಗಿದ್ದಕ್ಕೂ, ಅವರನ್ನು ಪ್ರೆಸ್ ಕ್ಲಬ್ ನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೂ ಏನ್ ಸಂಬಂಧ..ಪ್ರೆಸ್ ಕ್ಲಬ್ ಏನು ರಾಜಕೀಯ ಆಶ್ರಿತ ಕೇಂದ್ರವಾಯ್ತಾ ಎನ್ನುವ ಮಟ್ಟಿಗಿನ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆಗಲಾರಂಭಿಸಿವೆ. ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರಶಸ್ತಿ ಕೊಡುವ ಅಗತ್ಯವೇನಿತ್ತು..? ಇದರ ನಡುವೆ ಪತ್ರಿಕೆಗಳನ್ನು ವಿತರಿಸುವ ವಿತರಕರಿಗೆ ವಿಮಾ ಸೌಲಭ್ಯ ಕಲ್ಪಿಸಿದ ಸಚಿವ ಸಂತೋಷ್ ಲಾಡ್ ಅವರನ್ನು ಆಯ್ಕೆ ಮಾಡಿರುವುದು ಸೂಕ್ತ ಎನ್ನುವಂತ ಕಾಮೆಂಟ್ ಹರಿದಾಡಲಾರಂಭಿಸಿವೆ.

ಮಹಿಳಾ ಪ್ರಾತಿನಿಧ್ಯತೆಯೂ ಜೀವಮಾನಸಾಧನೆ ಗೌರವ ಘೋಷಣೆಯ ಬೆನ್ನಲ್ಲಿ ಕೇಳಿಬಂದಿದೆ.ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಕೇವಲ ಇಬ್ಬರು ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.ಮಹಿಳಾ ಪ್ರಾತಿನಿಧ್ಯತೆ ಬಗ್ಗೆ ಬಾಯಿ ಹರಿದುಕೊಳ್ಳುವ ಪತ್ರಕರ್ತರೇ ಮಹಿಳೆಯರ ಆಯ್ಕೆ ವಿಚಾರದಲ್ಲಿ ತಾರತಮ್ಯ ಎಸಗಿದ್ದಾರೆನ್ನುವ ಆಪಾದನೆ ಕೇಳಿಬಂದಿದೆ.ಏಕೆ ಪ್ರಶಸ್ತಿಗೆ ಆಯ್ಕೆ ಮಾಡಲು ಮಹಿಳೆಯರಿರಲಿಲ್ಲವೇ..? ಅಥವಾ ಜೀವಮಾನ ಸಾಧನೆಗೆ ಭಾಜನವಾಗುವಂತ ಯೋಗ್ಯ ಮಹಿಳಾ ಪತ್ರಕರ್ತರೇ ನಮ್ಮಲ್ಲಿಲ್ಲವೇ..? ಹೀಗೆ ಪ್ರಶ್ನೆ ಕೇಳಲಾರಂಭಿಸಿವೆ.

ಇದರ ಜತೆಗೆ ಕೇಳಿಬರುತ್ತಿರುವ  ಮತ್ತೊಂದು ಕೂಗು ಪ್ರಾದೇಶಿಕತೆಯದು..ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಮಾನ್ಯತೆ-ಮನ್ನಣೆ ಸಿಕ್ಕಿಲ್ಲ ಎನ್ನುವುದು.ಪ್ರಶಸ್ತಿಗೆ ಭಾಜನರಾದವರಲ್ಲಿ ಉತ್ತರ ಕರ್ನಾಟಕದವರು ಕಡಿಮೆ ಇದ್ದಾರೆ.ಅವರನ್ನು ನಿರ್ಲಕ್ಷ್ಯಿಸಲಾಗಿದೆ ಎನ್ನುವ ಮಾತು ಕೇಳಿಬರಲಾರಂಭಿಸಿದೆ.ಕಮಿಟಿಯಲ್ಲಿರುವವರು ಉತ್ತರ ಕರ್ನಾಟಕ ಭಾಗದ ಪತ್ರಕರ್ತರನ್ನು ಬೇಕೆಂದೇ ನಿರ್ಲಕ್ಷ್ಯಿಸಿದ್ದಾರೆ.ಅವರಿಗೆ ಉತ್ತರ ಕರ್ನಾಟಕದವರೆಂದರೆ ಅಷ್ಟಕ್ಕಷ್ಟೇ ಎನ್ನುವ ಮಟ್ಟಿಗಿನ ಚರ್ಚೆ ಹುಟ್ಟುಕೊಂಡಿದೆ.

ಇದೆಲ್ಲದರ ನಡುವೆ ಚರ್ಚೆಯಾಗುತ್ತಿರುವ ಗಂಭೀರ ಹಾಗೂ ಅತಿಮುಖ್ಯವಾದ ವಿಚಾರ ಎಂದ್ರೆ ಜೀವಮಾನಸಾಧನೆ ಪ್ರಶಸ್ತಿಗೆ ಭಾಜನರಾದವರಲ್ಲಿ ಎಷ್ಟು ಮಂದಿ ನಿಜಕ್ಕೂ ಆ ಪ್ರಶಸ್ತಿಗೆ ಅರ್ಹ-ಯೋಗ್ಯ-ಸಮರ್ಥರಿದ್ದಾರೆ ಎನ್ನುವುದು.ಅನೇಕ ಪತ್ರಕರ್ತರೇ ಇಂತದ್ದೊಂದು ಪ್ರಶ್ನೆ ಕೇಳಿದ್ದಾರೆ.ಕೆಲವು  ಪತ್ರಕರ್ತರು ಈ ಪ್ರಶಸ್ತಿಗೆ ಅರ್ಹರೇ ಅಲ್ಲ.ಜೀವಮಾನ ಸಾಧನೆ ಎನ್ನುವುದರ ಅರ್ಥವೇನು..? ಆ ಜೀವಮಾನ ಸಾಧನೆಯ ಮಾನದಂಡವೇನು..? ಅವರು ವೃತ್ತಿಯಲ್ಲಿ ಸಾಧಿಸಿರುವಂತದ್ದೇನು..? ಎನ್ನುವುದರಿಂದ ಹಿಡಿದು ಆಯ್ಕೆ ಸಮಿತಿಯಲ್ಲಿರುವವರೊಂದಿಗಿನ  ಪರಿಚಯ-ಆತ್ಮೀಯತೆನೇ ಪ್ರಶಸ್ತಿ ಆಯ್ಕೆ ಮಾನದಂಡನಾ ಎನ್ನುವವರೆಗೆ ಅನೇಕರು ಪ್ರಶ್ನೆಗಳನ್ನು ಹಾಕಿದ್ದಾರೆ.ಆದರೆ ಇದಕ್ಕೆ ಆಯ್ಕೆ ಸಮಿತಿನೇ ಉತ್ತರಿಸಬೇಕಷ್ಟೇ..ಎಲ್ಲಕ್ಕಿಂತ ಹೆಚ್ಚಾಗಿ ಜೀವಮಾನಸಾಧನೆಗೆ ಭಾಜನರಾದವರೇ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಂಡರೆ ಅವರಲ್ಲಿ ಎಷ್ಟು ಜನ ಇದಕ್ಕೆ ಅರ್ಹರಿದ್ದೇವೆ ಎನ್ನುವ ಸತ್ಯ ಮನದಟ್ಟಾಗಬಹುದೇನೋ..?

ಅದೇನೇ ಆಗಲಿ ರಾಜಕೀಯದಿಂದ ಸದಾ ಹೊರತಾಗುಳಿದು ಕೆಲಸ ಮಾಡಬೇಕಾದ ಪ್ರೆಸ್ ಕ್ಲಬ್ ನಂಥ ಸಂಘಟನೆಗಳು ರಾಜಕೀಯದವರನ್ನು ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡುವುದು ಸರಿಯಲ್ಲ ಎನ್ನುವ ಅನೇಕ ಪ್ರಬುದ್ಧ ಪತ್ರಕರ್ತರ ವಾದ ಒಪ್ಪುವಂತದ್ದು..ಯಾವ ವರ್ಷವೂ ಉದ್ಭವವಾಗದಿದ್ದ ಪ್ರಶ್ನೆ ಈ ಬಾರಿ ಏಕೆ ಸೃಷ್ಟಿಯಾಯ್ತೆನ್ನುವ ಚರ್ಚೆಗೆ ಹೋಗದೆ ಈ ಸಂಪ್ರದಾಯವನ್ನು ನಿಲ್ಲಿಸುವುದೇ ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಅಂತದ್ದೊಂದು ತೀರ್ಮಾನ ಕೈಗೊಳ್ಳಲಿಕ್ಕೆ ಇದು ಸಕಾಲ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಅಭಿಮತ ಕೂಡ.( ತಮ್ಮನ್ನು ಗೌರವಕ್ಕೆ ಆಯ್ಕೆ ಮಾಡದಿದ್ದರೆ ಯಾವ ರಾಜಕಾರಣಿನೂ ಪ್ರೆಸ್ ಕ್ಲಬ್ ಮೇಲಾಗಲಿ,ಪತ್ರಕರ್ತರ ಬಗೆಗಾಗಲಿ ಬೇಸರ ವ್ಯಕ್ತಪಡಿಸುವುದಿಲ್ಲ).

ಎಲ್ಲವನ್ನೂ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನೋಡುವ ಕನ್ನಡ ಫ್ಲ್ಯಾಶ್ ನ್ಯೂಸ್ ನಿನ್ನೆಯೇ ಪ್ರಶಸ್ತಿಗೆ ಭಾಜನರಾದವರನ್ನು ಬರಹದ ಮೂಲಕ ಅಭಿನಂದಿಸುವ ಕೆಲಸ ಮಾಡಿದೆ.ಒಂದಷ್ಟು ಬದಲಾವಣೆಯ ಆಶಯದೊಂದಿಗೆ ಮತ್ತೊಮ್ಮೆ ಈ ಬಾರಿಯ ಪುರಸ್ಕ್ರತರಿಗೆ ಅಭಿನಂದನೆ ಸಲ್ಲಿಸುತ್ತದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button