ONLINE NEWS
ಸಚಿವರ ಕಣ್ಣಿಗೆ ಬಿದ್ದ ನಿರ್ಗತಿಕ ಕುಟುಂಬ : ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳಕರ್…!!
[et_pb_section][et_pb_row][et_pb_column type=”4_4″][et_pb_text]ಬೆಳಗಾವಿ : ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಗೆ ವಾಪಸ್ ಆಗುವಾಗ ಆಕಸ್ಮಾತಾಗಿ ಕಣ್ಣಿಗೆ ಕಾಣಿಸಿದ ನಿರ್ಗತಿಕ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ಮರಳುವಾಗ ವಿಜಯಪುರ – ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿದ್ದಳು. ಆ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ. ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ತುಂಬಿ ಇಡುವುದಾಗಿ ತಿಳಿಸಿದಳು. ಹಾಗೆ ಮಾತನಾಡುತ್ತ ಗೌರಮ್ಮ ವಾಡೇದ ಎಂಬ ಆ ಅಜ್ಜಿ ಹಾಗೂ ಜೊತೆಗಿದ್ದ ಮಲ್ಲು ಎನ್ನುವ ಹೆಸರಿನ ಅವಳ ಮಗನ ಕುರಿತು ವಿಚಾರಿಸಿದಾಗ, ಅವರು ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಇದರಿಂದಾಗಿ ವಾಸಿಸಲು ಮನೆಯೇ ಇರಲಿಲ್ಲ. ನಂತರ ಈ ಸ್ಥಳದಲ್ಲಿದ್ದ ತೋಟದ ಮಾಲಕರು ಒಂದೇ ಕೊಠಡಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದರು. ಆದರೆ ಅಡುಗೆ ಮಾಡಲು ಪಾತ್ರೆಗಳಾಗಲಿ, ಹಾಸಿಗೆ- ಹೊದಿಕೆಗಳಾಗಲಿ, ಕಾಳು ಕಡಿಗಳಾಗಲಿ ಏನೂ ಇಲ್ಲದೆ ಊಟಕ್ಕೂ ಸರಿಯಾಗಿ ಗತಿ ಇಲ್ಲ ಎನ್ನುವ ಅಂಶ ಗೊತ್ತಾಯಿತು. ಅವರು ಈ ಮೊದಲು ಹೊಂದಿದ್ದ ಪಡಿತರ ಕಾರ್ಡ್ ಕೂಡ ಕಳೆದುಹೋಗಿದ್ದರಿಂದ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಕೂಡ ತಿಳಿಯಿತು. ಕೂಡಲೇ ಸಚಿವರು ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡಿದರಲ್ಲದೆ, ಆದಷ್ಟು ಶೀಘ್ರ ರೇಶನ್ ಕಾರ್ಡ್ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡುವುದಾಗಿ ತಿಳಿಸಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೆರವು ನೀಡಿದ ಪೊಲೀಸ್ ಅಧಿಕಾರಿ ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಎಎಸ್ಐ ಎಚ್.ಎಸ್.ಗೌಡರ್ ಸಚಿವರ ಬಳಿ ಆಗಮಿಸಿ, ಅಜ್ಜಿಯ ಕುಟುಂಬದ ಪರಿಸ್ಥಿತಿ ವಿವರಿಸಿದರು. ಆಗ ಅಜ್ಜಿ, ತಾವು ಉಪವಾಸವಿದ್ದ ಸಂದರ್ಭದಲ್ಲಿ ಎಎಸ್ಐ ತಮಗೆ ಅಕ್ಕಿ ನೀಡಿ ನೆರವು ನೀಡಿದ್ದಾರೆ ಎಂದು ಸಚಿವರಿಗೆ ತಿಳಿಸಿದಳು. ಇದನ್ನು ತಿಳಿದ ಸಚಿವರು, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಕ್ಕಾಗಿ ಸರಕಾರದ ಪರವಾಗಿ ಎಎಸ್ಐ ಗೌಡರ್ ಗೆ ಧನ್ಯವಾದ ತಿಳಿಸಿದರು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಂತವರಿಗಾಗಿಯೇ ಸರಕಾರ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿಗಳು ಬಡವರಿಗಾಗಿಯೇ ಯೋಜನೆಗಳನ್ನು ತಂದಿದ್ದಾರೆ. ಅದು ಯಾರಿಗೆ ತಲುಪಿಲ್ಲವೋ ಅಂತವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು. ಎಎಸ್ಐ ಗೌಡರ್ ಮನುಷ್ಯತ್ವ ತೋರಿಸಿ ಅಜ್ಜಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ. ಅವರ ಕಾರ್ಯ ಸ್ತುತ್ಯಾರ್ಹ. ಸರಕಾರದಿಂದ ಆ ಕುಟುಂಬಕ್ಕೆ ಎಲ್ಲ ನೆರವು ಸಿಗುವಂತೆ ಮಾಡುತ್ತೇನೆ ಎಂದು ತಿಳಿಸಿದರು. ತಮ್ಮ ಅವಸರದ ಪ್ರವಾಸದ ಮಧ್ಯೆಯೂ ಸಚಿವರು ಸಮಯ ನೀಡಿ ಇಂತಹ ನಿರ್ಗತಿಕ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.[/et_pb_text][/et_pb_column][/et_pb_row][/et_pb_section]