ONLINE NEWS

ಸ್ಮಾರಕ ಭವನ ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ.

Share

ಭಾರತ ಟೈಮ್ಸ್ ಸುದ್ದಿ :ಬೆಳಗಾವಿ, ಡಿ.26: “ಗಾಂಧಿ ಭಾರತ” ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗುರುವಾರ (ಡಿ.26) ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಭವನ‌ ಮತ್ತು ಛಾಯಾಚಿತ್ರ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಸ್ಮಾರಕ ಭವನ ಅಂದಾಜು 15 ಗುಂಟೆ ಜಾಗೆಯಲ್ಲಿ

1.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸ್ಥಳದಲ್ಲಿ ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಫೋಟೋ ಗ್ಯಾಲರಿ, ಆವರಣದ ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಎಚ್.ಕೆ ಪಾಟೀಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ವೀರಪ್ಪ ಮೊಯ್ಲಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್(ರಾಜು)ಸೇಠ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ , ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ. ಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಜಂಟಿ ನಿರ್ದೇಶಕ ಕೆ. ಎಚ್ ಚನ್ನೂರು, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಗಂಗಾಧರ್ ರಾವ್ ದೇಶಪಾಂಡೆ ಪಾತ್ರ:

ಕರ್ನಾಟಕ ಸಿಂಹ ಎಂದೇ ಖ್ಯಾತಿ ಪಡೆದಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಹೆಮ್ಮೆಯ ಸುಪುತ್ರ, ಕೆಚ್ಚೆದೆಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಅವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು ಮತ್ತು ಗಾಂಧೀಜಿ ಅಧ್ಯಕ್ಷತೆ ವಹಿಸಲು ಕಾರಣೀಕರ್ತರು.

ಗಂಗಾಧರರಾವ್ ಅವರ ಮುತ್ಸದ್ದೀತನ, ಸಮರ್ಥ ನಾಯಕತ್ವದ ಫಲವಾಗಿ ಬೆಳಗಾವಿ ಇತಿಹಾಸದಲ್ಲಿ ದಾಖಲಾಯಿತು. ಅಂದು ಕಾಂಗ್ರೆಸ್ ಪಕ್ಷದಲ್ಲಿ ಜವಾಹರಲಾಲ್ ನೆಹರು ಅವರಿಗೆ ಸರಿಸಮಾನವಾದ ಅಧಿಕಾರ ಹೊಂದಿದ್ದರು. ಗಂಗಾಧರರಾವ್ ಅವರು ಮನಸ್ಸು ಮಾಡಿದ್ದರೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರು. ಆದರೆ, ನನ್ನ ಹೋರಾಟ ಮತ್ತು ಸೇವೆ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸಿಮೀತ ಎಂದು ಹೇಳಿ ಆಧ್ಯಾತ್ಮಿಕತೆ ಕಡೆಗೆ ಸಾಗಿದ ನಿಸ್ವಾರ್ಥಿ.

ವೈಯಕ್ತಿಕ ವಿವರ:

ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಶ್ರೀಮಂತ ಮನೆತನದ ಬಾಲಕೃಷ್ಣ ಮತ್ತು ರಾಧಾಬಾಯಿ ದಂಪತಿಗಳ‌ ಉದರದಲ್ಲಿ 1871ರ ಮಾರ್ಚ 31ರಂದು ಜನಿಸಿದ ಗಂಗಾಧರರಾವ್ ದೇಶಪಾಂಡೆ ಅವರು, ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿ ಸರ್ದಾರ್ಸ್ ಹೈಸ್ಕೂಲ್ ನಲ್ಲಿ ಪಡೆದಿದ್ದಾರೆ. ಪುಣೆ ಡೆಕ್ಕನ್ ಕಾಲೇಜಿನಲ್ಲಿ ಪದವಿ ಮತ್ತು ಬಿಎ ಎಎಲ್ ಬಿ ಪೂರ್ಣಗೊಳಿಸಿದ್ದಾರೆ. ಪತ್ನಿ ಲಕ್ಷ್ಮೀಬಾಯಿ, ಪುತ್ರ ಬಾಲಕೃಷ್ಣ. 1960ರ ಜುಲೈ‌ 30ರಂದು ಗಂಗಾಧರಾವ್ ಅವರು ನಿಧನರಾದರು.

1922ರಲ್ಲಿ ಚರಕ ಸಂಘ, 1937ರಲ್ಲಿ ಹುದಲಿಯಲ್ಲಿ ಗಾಂಧಿಸೇವಾ ಸಂಘ ಸ್ಥಾಪಿಸಿದ್ದರು. ಈಗಲೂ‌ ಖಾದಿ ಗ್ರಾಮೋದ್ಯೋಗ ನೂರಾರು ಜನರಿಗೆ ಉದ್ಯೋಗ ಕೊಟ್ಟಿದೆ. 1920ರಲ್ಲಿ ಬೆಳಗಾವಿಯಲ್ಲಿ ಮುನ್ಸಿಪಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಗಂಗಾಧರಾವ್ ಅವರು, ಗೋಪಾಲಕೃಷ್ಣ ಗೋಕಲೆ, ಬಾಲಗಂಗಾಧರ ಟಿಳಕರ ಅನುಯಾಯಿಯಾಗಿದ್ದರು. ಅವರು ಕಾಲವಾದ ಬಳಿಕ‌ ಮಹಾತ್ಮಾ ಗಾಂಧೀಜಿ ಸಂಪರ್ಕಕ್ಕೆ ಬರುತ್ತಾರೆ. ಗಾಂಧೀಜಿ ಐವರು ಅತ್ಯಾಪ್ತರಲ್ಲಿ ಇವರು ಒಬ್ಬರಾಗುತ್ತಾರೆ. ಅಪ್ಪಟ ಗಾಂಧಿವಾದಿಯಾಗಿದ್ದ ಗಂಗಾಧರರಾವ್ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಶ್ರೀಮಂತಿಕೆ‌ ಇದ್ದರೂ ಸರಳ ಜೀವನ ನಡೆಸಿದ ಹೆಗ್ಗಳಿಕೆ ಇವರದ್ದು.

ಗಾಂಧೀಜಿ ಮನವೊಲಿಸಿದ ದೇಶಪಾಂಡೆ:

ಮಹಾತ್ಮ ಗಾಂಧೀಜಿ ಹಿಂದಿನ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು.‌ ನಾನು ಅಧ್ಯಕ್ಷ ಇರಲಿ, ಬಿಡಲಿ. ಜನ ನನ್ನ‌ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಗಂಗಾಧರರಾವ್ ಅವರು‌ ಮಾತ್ರ ಬಿಡಲಿಲ್ಲ‌. ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಇತಿಹಾಸ. ಬೆಳಗಾವಿ ಅಧಿವೇಶನದಲ್ಲೂ ಜವಾಹರಲಾಲ್ ನೆಹರು ಮತ್ತು ಗಂಗಾಧರಾವ್ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಹುಟ್ಟೂರಿಗೂ ಗಾಂಧೀಜಿ ಕರೆಸಿದ್ದರು:

ತಮ್ಮ ಹುಟ್ಟೂರು ಹುದಲಿಗೂ ಗಾಂಧೀಜಿ‌ ಅವರನ್ನು ಗಂಗಾಧರಾವ್ ಕರೆಸಿದ್ದರು. ಏಳು‌ ದಿನ ಅಲ್ಲಿಯೇ ಬಾಪು ವಾಸ್ತವ್ಯ ಹೂಡಿದ್ದರು. ಗಾಂಧಿ ಸೇವಾ ಸಂಘದ ಸಮ್ಮೇಳನ ಏರ್ಪಡಿಸಲಾಗಿತ್ತು. ಗಾಂಧೀಜಿ‌ ಅವರ ಜೊತೆಗೆ ಡಾ.ಬಾಬು ರಾಜೇಂದ್ರಪ್ರಸಾದ, ಅಬ್ದುಲ್ ಗಫಾರ್‌ಖಾನ್ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ. ನಾರಾಯಣ ಸೇರಿ ಅನೇಕ‌ ನಾಯಕರ ದಂಡೇ ಹುದಲಿಗೆ ಬಂದಿತ್ತು.

ಇನ್ನು ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತಾ ಗಂಗಾಧರರಾವ್ ದೇಶಪಾಂಡೆ ಧ್ವನಿ ಎತ್ತಿದ್ದರು.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button