ಖಾಸಗಿ ಸಂಸ್ಥೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಆದೇಶ
ಶಾಲೆ, ಐಟಿ ಬಿಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ನವೆಂಬರ್ 1ರಂದು ಕಡ್ಡಾಯವಾಗಿ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕನ್ನಡ ಭಾಷಾ ಪ್ರೇಮ ಹೆಚ್ಚಲು ಆಗಲು ಜಾಗೃತಿ ಮೂಡಿಸುವ ಉದ್ದೇಶದಿಂದ ಖಾಸಗಿ ಶಾಲಾ-ಕಾಲೇಜು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಶಾಲೆಗಳಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಬೇಕು ಹಾಗೂ ಕನ್ನಡ ಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದರೆ ಖಾಸಗಿ ಕಂಪನಿಗಳಲ್ಲಿ ಅದರಲ್ಲೂ ಐಟಿ-ಬಿಟಿ ಕಂಪನಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿಲ್ಲ. ಬದಲಿಗೆ ಧ್ವಜಾರೋಹಣ ಮಾಡಿದರೂ ಸಾಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಖಾಸಗಿ ಕಂಪನಿಗಳು ಹಾಗೂ ಶಾಲೆಗಳು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ಫೋಟೊ ಹಾಗೂ ವೀಡಿಯೊಗಳನ್ನು ತೆಗೆದು ಬಿಬಿಎಂಪಿ ಕಚೇರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಲ್ಲಾ ಖಾಸಗಿ ಕಂಪನಿಗಳು, ಐಟಿ ಬಿಟಿ ಕಂಪನಿಗಳು, ಕಾರ್ಖಾನೆಗಳು, ಶಾಲಾ-ಕಾಲೇಜುಗಳು ತಮ್ಮ ಕಚೇರಿಯ ಮುಭಾಂಗದಲ್ಲಿ ಕನ್ನಡ ಧ್ವಜಾರೋಹಣ ಮಾಡಬೇಕು ಸರ್ಕಾರ ತೀರ್ಮಾನಿಸಿದೆ ಎಂದರು.