“ಪ್ರಾಣ ಬಿಟ್ಟೇವು…ಮುಷ್ಕರ ಕೈ ಬಿಡೆವು” ಇಂದಿನಿಂದ ಸಾರಿಗೆ ಸಿಬ್ಬಂದಿಯಿಂದ “ಅಮರಣಾಂತ ಉಪವಾಸ ಸತ್ಯಾಗ್ರಹ”…
ಬೆಂಗಳೂರು: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದೆರೆಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿಗೆ ನಿನ್ನೆ ಆದ ಕಹಿ ಅನುಭವ ಅಕ್ಷರಶಃ ರೊಚ್ಚಿಗೆಬ್ಬಿಸಿದೆ.ಈ ಹಿನ್ನಲೆಯಲ್ಲಿ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವಂತೆ ಮಾಡಿದೆ.ಸಾರಿಗೆ ಕೂಟ ಸೇರಿದಂತೆ ಸಮಾನಮನಸ್ಕ ಸಂಘಟನೆಗಳು ಹೋರಾಟಕ್ಕೆ ಕೈ ಜೋಡಿಸಿವೆ.ಇದರಿಂದ ಹೋರಾಟ ಮತ್ತಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಗಳಿವೆ.
ಫ್ರೀಡಂ ಪಾರ್ಕ್ ನಲ್ಲಿ ಕಳೆದೆರೆಡು ದಿನಗಳಿಂದ ಸಾರಿಗೆ ಸಿಬ್ಬಂದಿ ತಮ್ಮ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು.ನಿನ್ನೆ ಇದ್ದಕ್ಕಿದ್ದಂತೆ ಆಗಮಿಸಿದ ಉಪ್ಪಾರ ಪೇಟೆ ಪೊಲೀಸರು ನಿಮಗೆ ಅವಕಾಶ ಕೊಟ್ಟಿದ್ದು ಒಂದೇ ದಿನ.,.ಹಾಗಾಗಿ ಮೇಲೆ ಎದ್ದೇಳಿ ಎಂದು ಒತ್ತಾಯಿಸಿದರು.ಪೊಲೀಸರನ್ನು ಅನೇಕ ರೀತಿಯಲ್ಲಿ ಸಮಾಧಾನ ಪಡಿಸಿ ನಮ್ಮ ಹೋರಾಟಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದರೂ ಅದಕ್ಕೆ ಒಪ್ಪದೆ ಅವರನ್ನು ಅಲ್ಲಿಂದ ಎಬ್ಬಿಸೊಕ್ಕೆ ಮುಂದಾದಾಗ ಸಹಜವಾಗೇ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ.
ಅದೇ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ಮಹಾತ್ಮಗಾಂಧೀ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಸಿದುಕೊಳ್ಳೊಕ್ಕೆ ಪೊಲೀಸರು ಮುಂದಾದರೆನ್ನಲಾಗಿದೆ.ಇದು ಹೋರಾಟಗಾರರನ್ನು ಮತ್ತಷ್ಟು ಕನಲಿಸಿದೆ.ಇದರಿಂದ ವ್ಯಗ್ರಗೊಂಡ ಸಿಬ್ಬಂದಿ ಹೋರಾಟ ಮುಂದುವರೆಸಲು ಯತ್ನಿಸಿದಾಗ ಪೊಲೀಸರು ಅವರನ್ನೆಲ್ಲಾ ಬಂಧಿಸಿ ಕರೆದೊಯ್ದಿದ್ದಾರೆ.
ನಿನ್ನೆ ಘಟನೆಯಿಂದ ಕೆಂಡಮಂಡಲವಾಗಿರುವ ಸಾರಿಗೆ ನೌಕರರು ಹಾಗೂ ಸಂಘಟನೆಗಳು ಇಂದಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ದರಿಸಿವೆ.ಪೊಲೀಸ್ ಹಾಗೂ ಸರ್ಕಾರ ನಮ್ಮನ್ನು ಯಾವುದೇ ರೀತಿಯಲ್ಲಿ ಹಿಮ್ಮೆಟ್ಟಿಸಲು ಯತ್ನಿಸಿದರೂ ಅದಕ್ಕೆ ನಾವು ಸಿದ್ದರಿಲ್ಲ.ನಮ್ಮ ಹೋರಾಟ ಮುಂದುವರೆಸುವುದಾಗಿ ಸಾರಿಗೆ ಮುಖಂಡರಾದ ಕೂಟದ ಚಂದ್ರು ಹಾಗೂ ನಾಗರಾಜ್ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.
ಇವತ್ತಿನ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.ಇಂದಿನಿಂದ ಶುರುವಾಗಲಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಇನ್ನ್ಯಾವ ಸ್ವರೂಪ ಪಡೆಯಲಿದೆಯೋ ಕಾದುನೋಡಬೇಕಿದೆ.ಇದೆಲ್ಲದರ ಮಾಹಿತಿಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಕಾಲಕಾಲಕ್ಕೆ ಸಾರಿಗೆ ಸಿಬ್ಬಂದಿಗೆ ತಿಳಿಸಲಿದೆ.