BBMPBBMP NEWSBREAKING NEWSCITY

ಕಾವೇರಿ-5 ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ, ಹೆಸರು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್‌: ಆರ್‌.ಅಶೋಕ

Share

ಪೂಜೆ ಮುಗಿದ ನಂತರ ಕೊನೆಯಲ್ಲಿ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ-5ನೇ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್‌ ಮುಂದೆ ಬಂದು ಹೆಸರು ಪಡೆದುಕೊಳ್ಳುತ್ತಿದೆ. ಈ ಯೋಜನೆ ಮಾಡಿದ್ದು ಬಿಜೆಪಿ ಎಂದು ಗೊತ್ತಿದ್ದರೂ, ನಾವೇ ಮಾಡಿದ್ದೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಾವೇರಿ 5 ನೇ ಹಂತದ ಯೋಜನೆಯನ್ನು ತಾವೇ ಮಾಡಿದ್ದು ಎಂದು ಜಂಭ ಕೊಚ್ಚಿಕೊಂಡಿದ್ದಾರೆ. 2018 ರ ಜನವರಿ 24 ರಂದು ಈ ಯೋಜನೆಗೆ 5,500 ಕೋಟಿ ರೂ. ಸಾಲ ಪಡೆಯಲು ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಕಾಮಗಾರಿಗೆ 90 ತಿಂಗಳ ಗಡುವು ವಿಧಿಸಲಾಗಿತ್ತು. ಜೊತೆಗೆ ಕಾಮಗಾರಿ ನಡೆಸುವ ಸಂಸ್ಥೆಗಳನ್ನೂ ನಿಗದಿಪಡಿಸಲಾಗಿತ್ತು. 2019 ರ ಜನವರಿ 1 ರಂದು ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಆಗಲೂ ಬಿಜೆಪಿ ಸರ್ಕಾರವೇ ಇತ್ತು. ಪ್ಯಾಕೇಜ್‌ 2 ನಲ್ಲಿ ನಿತ್ಯ 77.5 ಕೋಟಿ ಲೀಟರ್‌ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್‌ 3 ರಲ್ಲಿ ಟಿ.ಕೆ.ಹಳ್ಳಿ ಪಂಪಿಂಗ್‌ ಘಟಕ, ಪ್ಯಾಕೇಜ್‌ 4 ರಲ್ಲಿ ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ಎರಡು ಪಂಪಿಂಗ್‌ ಸ್ಟೇಶನ್‌, ಪ್ಯಾಕೇಜ್‌ 7 ರಲ್ಲಿ ಟಿ.ಕೆ.ಹಳ್ಳಿ-ಹಾರೋಹಳ್ಳಿ ಪೈಪ್‌ಲೈನ್‌, ಪ್ಯಾಕೇಜ್‌ 8 ರಲ್ಲಿ ಹಾರೋಹಳ್ಳಿ-ವಾಜರಹಳ್ಳಿ ಪೈಪ್‌ಲೈನ್‌, ಪ್ಯಾಕೇಜ್‌ 10 ರಲ್ಲಿ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್‌, ಪ್ಯಾಕೇಜ್‌ 12 ರಲ್ಲಿ ಪೂರ್ವ ಭಾಗದಲ್ಲಿ ನೆಲಮಟ್ಟದ ಜಲಾಗಾರ, ಪ್ಯಾಕೇಜ್‌ 13 ರಲ್ಲಿ ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಎಂದು ವಿವರಿಸಿದರು.

ನಂತರ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿತ್ತು. ಡಿಪಿಆರ್‌, ಹಣ ಹೊಂದಿಕೆ, ಕಾಮಗಾರಿ ಆರಂಭ, ಹೀಗೆ ಎಲ್ಲವನ್ನೂ ಮುಚ್ಚಿಟ್ಟು ಹೆಸರು ತೆಗೆದುಕೊಳ್ಳುತ್ತಿದ್ದಾರೆ. ದೇವರನ್ನು ಕೂರಿಸಿ ಹೋಮವನ್ನು ನಾವು ಮಾಡಿದರೆ, ಮಂಗಳಾರತಿ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಬಂದು ಇದು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದೆ. ಈಗ ಏಕಾಏಕಿ ನಾವೇ ಕಷ್ಟಪಟ್ಟಿದ್ದು ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

ಹಣ ವಾಪಸ್‌

ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ 8,000 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಸುಮಾರು 50% ಕೆಲಸ ಆರಂಭವಾಗಿತ್ತು. ರಾಜಕಾಲುವೆ ಸುಧಾರಣೆಗೆ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇನೆಂದು ಹೇಳಿ ಇದೇ ಹಿಂದಿನ ಅನುದಾನಗಳನ್ನು ವಾಪಸ್‌ ಪಡೆದುಕೊಂಡರು. ಬಳಿಕ ಹೊಸದಾಗಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಬಿ.ಎಸ್‌.ಯಡಿಯೂರಪ್ಪನವರು ವಿಶೇಷ ಅನುದಾನವನ್ನು ಬೆಂಗಳೂರಿಗೆ ನೀಡಿದ್ದರು. ಬಳಿಕ ಪ್ರತಿ ವರ್ಷ 3-4 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ವಿಶೇಷ ಅನುದಾನವಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದರು.

ಅನುದಾನದ ಬಗ್ಗೆ ಮಾತನಾಡಲು ಮುಂದಾದರೆ ಸಿಎಂ ಸಿದ್ದರಾಮಯ್ಯ ಉಡಾಫೆ ಮಾತಾಡುತ್ತಾರೆ. ಬೆಂಗಳೂರಿಗೆ ಈಗಿನ ರಾಜ್ಯ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ, ಹಿಂದಿನ ಬಿಜೆಪಿ ಸರ್ಕಾರ ಎಷ್ಟು ನೀಡಿದೆ, ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ ಎಂದು ಹೋಲಿಕೆ ಮಾಡಿ ತೋರಿಸಲಿ. ಕೇಂದ್ರ ಸರ್ಕಾರದಿಂದ ತಾರತಮ್ಯ ಎಂದು ಹೇಳುತ್ತಾರೆ. ಹೀಗೆ ಹೇಳುವುದಾದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಮೊದಲಾದ ನಗರಗಳಿಗೆ ತೆರಿಗೆಗೆ ಅನುಗುಣವಾಗಿ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.

ಮನಮೋಹನ್‌ ಸಿಂಗ್‌ ಮತ್ತು ನರೇಂದ್ರ ಮೋದಿಯವರ ಆಡಳಿತವಾಧಿಯಲ್ಲಿ ಎಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ತಿಳಿಸಲಿ. ಅದನ್ನು ಬಿಟ್ಟು ಆಯ್ಕೆ ಮಾಡಿಕೊಂಡು ಕಾಮೆಂಟ್‌ ಮಾಡುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.

ಮಳೆ ಹಾನಿ, ಬ್ಯಾಂಡ್‌ ಬೆಂಗಳೂರು

ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್‌ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್‌ ಬದಲು ಬ್ಯಾಂಡ್‌ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್‌ ಬಾಕಿ ಇದೆ. ಒಂದೋ ಬ್ರ್ಯಾಂಡ್‌ ಬೆಂಗಳೂರು ಘೋಷಣೆಯನ್ನು ವಾಪಸ್‌ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

ದೇಶ ವಿರೋಧಿಗಳ ಜೊತೆ ಚಹ

ವಿದೇಶಕ್ಕೆ ಹೋಗಿ ದೇಶದ ಮಾನ ಕಳೆಯುವ ರಾಹುಲ್‌ ಗಾಂಧಿ, ದೇಶ ವಿರೋಧಿಗಳೊಂದಿಗೆ ಚಾಯ್‌ ಪೇ ಚರ್ಚಾ ಮಾಡುತ್ತಾರೆ. ಬೆಂಗಳೂರಿಗೆ ಗಾರ್ಬೇಜ್‌ ಸಿಟಿ ಎಂಬ ಕೆಟ್ಟ ಹೆಸರನ್ನು ತಂದಿದ್ದು ಕೂಡ ಕಾಂಗ್ರೆಸ್‌ ಎಂದು ದೂರಿದರು.

ಮುಡಾ ಅಧ್ಯಕ್ಷ ಈಗ ರಾಜೀನಾಮೆ ನೀಡಿದ್ದಾರೆ. ಏನೂ ಅಕ್ರಮ ನಡೆದಿಲ್ಲವೆಂದಾದರೆ ಈಗ ರಾಜೀನಾಮೆ ನೀಡಿದ್ದು ಏಕೆ ಎಂದು ಕಾಂಗ್ರೆಸ್‌ ಸ್ಪಷ್ಟನೆ ನೀಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ದಾಖಲೆ ನೀಡಿದೆ. ಇಲ್ಲಿ ನಾಗೇಂದ್ರ ಅಮಾಯಕನಾಗಿದ್ದರೆ ಅವರು ರಾಜೀನಾಮೆ ನೀಡಿದ್ದೇಕೆ, ಸಿದ್ದರಾಮಯ್ಯ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ತಿಳಿಸಬೇಕು ಎಂದು ಒತ್ತಾಯಿಸಿದರು.

ಇವಿಎಂ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡಿದ್ದಕ್ಕೆ ಎಲ್ಲರೂ ಛೀಮಾರಿ ಹಾಕಿದ್ದಾರೆ. ತಾವು ಗೆದ್ದರೆ ಇವಿಎಂ ಸರಿ ಇದೆ, ಸೋತರೆ ಸರಿ ಎಲ್ಲ ಎಂದು ಹೇಳುತ್ತಾರೆ. ಗೆದ್ದಾಗ ಬ್ಯಾಟರಿ ಎಷ್ಟು ಡೌನ್‌ ಆಗಿದೆ ಎಂದು ಕೂಡ ತಿಳಿಸಲಿ. ಇವಿಎಂ ಮೇಲೆ ಆರೋಪ ಮಾಡುವುದು ಬಿಟ್ಟು ಸೋಲು ಒಪ್ಪಿಕೊಳ್ಳಲಿ ಎಂದರು.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button