ಮಸೀದಿಯಲ್ಲಿ ಜೈ ಶ್ರೀರಾಮ್ ಎಂದು ಕೂಗಿದರೆ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಲ್ಲ: ಕರ್ನಾಟಕ ಹೈಕೋರ್ಟ್
ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಕೂಗಿದರೆ ಯಾವುದೇ ಹಂತದಲ್ಲೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಕಡಬ ತಾಲೂಕಿನಲ್ಲಿ ಮಸೀದಿಗೆ ನುಗ್ಗಿದ ಇಬ್ಬರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇವರ ವರ್ತನೆಯಿಂದ ಸಾರ್ವಜನಿಕ ಜೀವನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಅಲ್ಲದೇ ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಹೈಕೋರ್ಟ್, ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಕ್ರಮ ಕೈಗೊಳ್ಳುವ ಕುರಿತ ಅರ್ಜಿಯನ್ನು ವಜಾಗೊಳಿಸಿತು.
ಬೈಕ್‌ನಲ್ಲಿ ಬಂದ ಆರೋಪಿಗಳು ಭಾನುವಾರ ರಾತ್ರಿ ಮಸೀದಿಯ ಆವರಣದೊಳಗೆ ನುಗ್ಗಿ ಘೋಷಣೆಗಳನ್ನು ಕೂಗಿದ್ದಾರೆ. ಘೋಷಣೆ ಶಬ್ದ ಕೇಳಿ ಹೊರಬಂದ ಮಸೀದಿಯ ಮೌಲ್ವಿಯನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಘಟನೆ ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಕ್ರಮವನ್ನು ಪ್ರಶ್ನಿಸಿ ಒಬ್ಬ ಆರೋಪಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಸೆಕ್ಷನ್ 295ರ ಅಡಿ ಪ್ರಕರಣ ದಾಖಲಿಸುವಷ್ಟು ತಪ್ಪು ನಡೆದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.