ಕೆಲಸದ ಮೂಲಕ ಭಕ್ತಿ ತೋರಿಸಿದ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ಭಾರತ ಟೈಮ್ಸ್ ಸುದ್ದಿ :ಬೆಳಗಾವಿ : ದೇವರ ಮೇಲಿನ ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತವಾಗಬಾರದು. ಕೆಲಸದ ಮೂಲಕ ನಿಜವಾದ ಭಕ್ತಿಯನ್ನು ತೋರಿಸಬೇಕು. ಅಂತಹ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದ ಗಂಗಾ ನಗರದಲ್ಲಿ ಭಾನುವಾರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಮಮಂದಿರ ಎಂದ ತಕ್ಷಣ ಬಿಜೆಪಿಯವರದ್ದು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹಾಗಾದರೆ ಈ ಕ್ಷೇತ್ರದಲ್ಲಿ 10 ವರ್ಷ ಶಾಸಕರಾಗಿದ್ದವರು ಎಷ್ಟು ಮಂದಿರ ನಿರ್ಮಾಣ ಮಾಡಿದ್ದಾರೆ ಯೋಚಿಸಿ. ಭಕ್ತಿ ಕೇವಲ ಭಾಷಣ, ರಾಜಕಾರಣಕ್ಕೆ ಸೀಮಿತವಾಗಬಾರದು. ನನ್ನ ಭಕ್ತಿ, ನಮ್ಮ ಸಂಸ್ಕೃತಿಯ ಕುರಿತ ಶೃದ್ಧೆ ಭಾಷಣಕ್ಕೆ ಸೀಮಿತವಲ್ಲ. ಅದರಲ್ಲಿ ರಾಜಕಾರಣವನ್ನೂ ಮಾಡುವುದಿಲ್ಲ. ಅಭಿವೃದ್ಧಿ ಕೆಲಸ, ಮಂದಿರಗಳ ನಿರ್ಮಾಣದ ಮೂಲಕ ನನ್ನ ಭಕ್ತಿಯನ್ನು ನಾನು ತೋರಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಪ್ರತಿ ಊರಿನಲ್ಲಿ ಮಂದಿರ, ಮಸೀದಿಗಳನ್ನು ನಿರ್ಮಾಣ, ಜೀರ್ಣೋದ್ಧಾರ ಮಾಡಲಾಗುತ್ತಿದೆ. ಎಲ್ಲ ಜಾತಿ, ಜನಾಂಗದವರ ಮಂದಿರ ನಿರ್ಮಾಣ, ಜೀರ್ಣೋದ್ಧಾರ ಮಾಡಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿ 2 -3 ಮಂದಿರಗಳು ತಲೆ ಎತ್ತಿವೆ. ಸರ್ವ ಜಾತಿ, ಸರ್ವ ಭಾಷಿಕ, ಸರ್ವ ಜನಾಂಗದವರು ನಾನೇ ಬಂದು ಮಂದಿರಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡಬೇಕೆಂದು ಬಯಸುತ್ತಾರೆ. ಜೊತೆಗೆ ಅಂಗನವಾಡಿ, ರಸ್ತೆ, ಚರಂಡಿ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನೂ ಉದ್ಘಾಟಿಸಬೇಕು. ದಿನಕ್ಕೆ ಹತ್ತತ್ತು ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರೆ ಇದು ಗ್ರಾಮೀಣ ಕ್ಷೇತ್ರದ ಭಾಗ್ಯ ಹೌದೋ ಅಲ್ಲವೋ ವಿಚಾರ ಮಾಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಸರಕಾರದಲ್ಲಿ ಬಹಳಷ್ಟು ಯೋಜನೆಗಳಿರುತ್ತವೆ. ಆದರೆ ಅವುಗಳನ್ನು ತರಬೇಕಾದವರು ಶಾಸಕರು. ಆದರೆ ಹಿಂದೆಲ್ಲ ಏಕೆ ಅಭಿವೃದ್ಧಿ ಆಗಲಿಲ್ಲ ವಿಚಾರ ಮಾಡಿ. ನಾನು ಚುನಾವಣೆ ಮುಗಿದ ತಕ್ಷಣ ಬೆಂಗಳೂರಿಗೆ ತೆರಳಿ ನಮ್ಮ ಕ್ಷೇತ್ರಕ್ಕೆ ಏನೇನೂ ಯೋಜನೆ ತರಬಹುದು ಎನ್ನುವುದನ್ನು ಯೋಚಿಸುತ್ತೇನೆ, ಕಾರ್ಯಪ್ರವೃತ್ತನಾಗುತ್ತೇನೆ. ಪಟ್ಟು ಹಿಡಿದು ಕೆಲಸ ತರಬೇಕಾಗುತ್ತದೆ. ಕೇವಲ ಧರ್ಮ, ಭಾಷೆ ಹೇಳುತ್ತ ಕುಳಿತರೆ ಆಗುವುದಿಲ್ಲ. ಕೆಲಸ ಮಾಡುತ್ತ ನಮ್ಮ ಭಕ್ತಿಯನ್ನು ತೋರಿಸೋಣ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಗಣೇಶಪುರದಲ್ಲಿ ಸುಮಾರು 50 ಲಕ್ಷ ರೂ. ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಗೊಳ್ಳಲಿದ್ದು, ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಮುಖಂಡರಾದ ಯುವರಾಜ ಕದಂ, ವಿಠ್ಠಲ ಪಾಟೀಲ, ಸೂರಜ ಅತ್ತಲಗಿ, ಮಂಜು ಭಗತ್, ಕುನಾಲ ಬಾಹು, ಗೌರೀಶ್ ಬಾಹು, ಸಚಿನ್ ಸೋಮನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.