ONLINE NEWS

ಬೆಳಗಾವಿಯಲ್ಲಿ ಪತ್ರಿಕಾ ಭವನ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ

Share

ಭಾರತ ಟೈಮ್ಸ್ :ಬೆಳಗಾವಿ, ಡಿ.13: ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಆಶಯದಂತೆ ಬೆಳಗಾವಿಯಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ‌ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಶುಕ್ರವಾರ(ಡಿ.12) ಪತ್ರಿಕಾ ಭವನ‌ ಹಾಗೂ ತೋಟಗಾರಿಕೆ ಇಲಾಖೆ‌ ಕಚೇರಿ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸುವ ಮೂಲಕ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಅದೇ ರೀತಿ ಅಗತ್ಯ ಅನುದಾನ ಒದಗಿಸುವ ಮೂಲಕ ಸುಸಜ್ಜಿತ ಪತ್ರಿಕಾ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಇದೇ ಸ್ಥಳದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡ‌ ನಿರ್ಮಾಣ‌ ಮಾಡುವದರ ಮೂಲಕ‌ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುವದು. ಇಂತಹ ಉತ್ತಮ ಕಟ್ಟಡಗಳನ್ನು ನಿರ್ಮಿಸುವುದರಿಂದ ಎರಡನೇ ರಾಜಧಾನಿ ಬೆಳಗಾವಿಯನ್ನು ಅಭಿವೃದ್ಧಿ‌ಪಡಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರು ಮಾತನಾಡಿ, ಬೆಳಗಾವಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಉತ್ತಮ‌‌ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರಿಂದ ಬೆಳಗಾವಿ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಹೇಳಿದರು.

ಪತ್ರಿಕಾ ಭವನ‌ ಹಾಗೂ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡಗಳು ಸುಸಜ್ಜಿತ ಕಟ್ಟಡಗಳಾಗುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತಾಗಲಿ ಎಂದು ಆಶಿಸಿದರು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಪತ್ರಿಕಾಭವನದ ಶಂಕುಸ್ಥಾಪನೆಯ ಮೂಲಕ ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ, ಸವದತ್ತಿ ವಿಧಾನಸಭಾ ಮತಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ, ಮಹಾನಗರ ಪಾಲಿಕೆ ಮಹಾಪೌರರಾದ ಸವಿತಾ ಕಾಂಬಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ‌ ನಿರ್ದೇಶಕರಾದ ಮಂಜುನಾಥ್ ಡೊಳ್ಳಿನ, ಹಿರಿಯ ಸಹಾಯಕ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ್ ಕುರಂದವಾಡೆ‌ ಹಾಗೂ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ ಅವರು ಸನ್ಮಾನಿಸಿದರು. ಸರ್ವೋತ್ತಮ ಜಾರಕಿಹೊಳಿ, ಪತ್ರಕರ್ತರಾದ ರಾಜು ಗವಳಿ, ಮುರುಗೇಶ‌ ಶಿವಪೂಜಿ ವೇದಿಕೆಯಲ್ಲಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಮತ್ತು ಬೆಳಗಾವಿಯ ಸಮಸ್ತ ಪತ್ರಿಕಾ‌ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button